Advertisement

ಮೈತ್ರಿ ಅಭ್ಯರ್ಥಿ ಸೋಲಲು ಚಿಕಣ್ಣ ತಂತ್ರ ನಡೆಸಿದರೇ?

04:52 PM May 25, 2019 | Team Udayavani |

ಎಚ್.ಡಿ.ಕೋಟೆ: ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣರಿಗೆ ಸೋಲಾಗಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯೇ ಕಾರಣ ಎಂದು ತಾಲೂಕಿನ ಅಭಿಪ್ರಾಯವಾಗಿದೆ.

Advertisement

ಎಸ್‌.ಸಿ ಮಿಸಲು ಕ್ಷೇತ್ರವಾಗಿರುವ ಚಾಮರಾಜ ಲೋಕಸಭಾ ಕ್ಷೇತ್ರದಲ್ಲಿ ಕೋಟಿ ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದರೂ, ಕೊನೆ ಹಂತದಲ್ಲಿ ಸೋಲಾಯಿತು. ಅತಿಯಾದ ಆತ್ಮವಿಶ್ವಾಸವೇ ಅಥವಾ ಚುನಾವಣಾ ಪೂರ್ವದಲ್ಲಿ ಆದ ಮೈತ್ರಿಯೇ ಎಂಬಿತ್ಯಾದಿ ಅಂಶಗಳ ಬಗ್ಗೆ ಕ್ಷೇತ್ರಾದ್ಯಂತ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಚರ್ಚೆಯಲ್ಲಿ ತೊಡಗಿದ್ದಾರೆ.

ಚಿಕ್ಕಣ್ಣ ಅನುಪಸ್ಥಿತಿ ಕಾಡಿತೇ?: ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರು 2 ಬಾರಿ ಸಂಸದರಾಗಿ ಆಯ್ಕೆಯಾದ ಸಂದರ್ಭ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಕಾಂಗ್ರೆಸ್‌ನಲ್ಲಿದ್ದರು. 2014ರ ಲೋಕಸಭೆ ಚುನಾವಣೆ ನಂತರ ತಾಲೂಕು ಕಾಂಗ್ರೆಸ್‌ನಲ್ಲಿ ಆದ ಕೆಲ ಅನಿರೀಕ್ಷಿತ ಬೆಳವಣಿಗೆ ಹಾಗೂ ಅಂದು ಸಂಸದರಾಗಿದ್ದ ಆರ್‌.ಧ್ರುವನಾರಾಯಣ್‌ ಅವರೊಂದಿಗೆ ಉಂಟಾದ ವೈಮನಸ್ಸಿನಿಂದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ತಾವು 40 ವರ್ಷ ಪ್ರತಿನಿಧಿಸಿ 1 ಬಾರಿ ಕ್ಷೇತ್ರದ ಶಾಸಕರಾಗಿಯೂ ಆಯ್ಕೆಯಾಗಿದ್ದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.

ನಂತರ ನಡೆದ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆ ತಂದು ಕೊಟ್ಟಿದ್ದರು. ತದ ನಂತರ ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಹಾಲಿ ಶಾಸಕ ಅನಿಲ್ ಚಿಕ್ಕಮಾದು ಅವರ ವಿರುದ್ಧ ಸೋತಿದ್ದರು.

ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದರೂ, ತಾವು 40 ವರ್ಷ ಪ್ರತಿನಿಧಿಸಿದ್ದ ಕಾಂಗ್ರೆಸ್‌ ಬಿಡಲು ಕಾರಣರಾಗಿದ್ದ ಆರ್‌.ಧ್ರುವನಾರಾಯಣ್‌ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಜೆಡಿಎಸ್‌ನಲ್ಲಿದ್ದರೂ ಅವರಾಗಲಿ, ಅವರ ಬೆಂಬಲಿಗರಾಗಲಿ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ.

Advertisement

ಹೀಗಾಗಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತಮಗಾದ ಸೋಲಿಗೆ ಆರ್‌.ಧ್ರುವನಾರಾಯಣ್‌ ವಿರುದ್ಧ ಸೇಡು ತೀರಿಸಿಕೊಂಡರಾ..? ಎಂಬ ಪ್ರಶ್ನೆ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿ ಮೊಳಕೆಯೊಡೆದಿರುವುದಂತೂ ಸುಳ್ಳಲ್ಲ. ಮೈತ್ರಿ ಅಭ್ಯರ್ಥಿ ಸೋಲಿಗೆ ಏನು ಕಾರಣ, ಏಕೆ ಹೀಗಾಯ್ತು, ಜನಪ್ರಿಯ ಸಂಸದ ರಾಗಿ ಅಭಿವೃದ್ಧಿಯ ಹರಿಕಾರ ಎಂದು ಕ್ಷೇತ್ರದಲ್ಲಿ ಎನಿಸಿಕೊಂಡಿದ್ದರೂ ಸಂಸದ ಆರ್‌.ಧ್ರುವನಾರಾಯಣ್‌ ಸೋಲು ನ್ಯಾಯವೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಕಾಲವೇ ಉತ್ತರಿಸಬೇಕಿದೆ.

● ಬಿ.ನಿಂಗಣ್ಣ ಕೋಟೆ
Advertisement

Udayavani is now on Telegram. Click here to join our channel and stay updated with the latest news.

Next