ಅಮ್‌ಸ್ಟರ್‌ಡ್ಯಾಮ್ : ಮಾತಿನ ಮೂಲಕವೂ ಕೋವಿಡ್ ವೈರಸ್ ಹರಡುತ್ತದೆ ಎನ್ನುವ ಅಂಶವನ್ನು ವಿಜ್ಞಾನಿಗಳು ಕೆಲ ದಿನಗಳ ಹಿಂದೆಯಷ್ಟೇ ಕಂಡುಕೊಂಡಿದ್ದರು. ಇದೀಗ ಸಂಗೀತವೂ ಕೋವಿಡ್ ವೈರಸ್ ಹರಡುತ್ತದೆ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ನೆದರ್‌ಲ್ಯಾಂಡ್‌ನ ಕೆಲವು ಸಂಗೀತ ತಂಡಗಳಲ್ಲಿ ಕೋವಿಡ್ ಸೋಂಕು ತೀವ್ರಗೊಂಡ ಬಳಿಕ ಈ ಅಂಶ ಗಮನ ಸೆಳೆದಿದೆ.
ಅಮ್‌ಸ್ಟರ್‌ಡ್ಯಾಮ್ ಮಿಕ್ಸ್‌ಡ್ ಕೊರ್ ಎಂಬ ಮ್ಯೂಸಿಕ್ ಟ್ರೂಪ್ ಮಾ.8ರಂದು ಲಾಕ್‌ಡೌನ್ ಜಾರಿಯಾಗುವುದಕ್ಕಿಂತ ಮೊದಲು ನಗರದ ಸಭಾಂಗಣವೊಂದರಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನೀಡಿತ್ತು. ಇದೀಗ 130 ಸದಸ್ಯರ ಈ ತಂಡದ 102 ಮಂದಿ ಕೋವಿಡ್ ಸೋಂಕಿನಿಂದ ಅಸ್ವಸ್ಥರಾಗಿದ್ದಾರೆ. 78 ವರ್ಷದ ಸಂಗೀತಗಾರ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಕರು ತೀವ್ರ ನಿಗಾ ಘಟಕದಲ್ಲಿದ್ದಾರೆ. ನಿರ್ವಾಹಕ ಪೌಲ್ ವಲ್ಕ್ ಅವರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿವೆ.
ವಾಶಿಂಗ್ಟನ್ ಸ್ಟೇಟ್‌ನಲ್ಲಿರುವ ಸ್ಕಗಿಟ್ ವ್ಯಾಲಿ ಕೋರಲ್ ಎಂಬ ಸಂಗೀತ ತಂಡ ಮಾರ್ಚ್‌ನಲ್ಲಿ ಮೂರು ವಾರ ರಿಹರ್ಸಲ್‌ಗಾಗಿ ಒಟ್ಟು ಸೇರಿತ್ತು. ಈಗ ಈ ತಂಡದ 45 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮೂವರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಬರ್ಲಿನ್ ಕ್ಯಾಥೆಡ್ರಲ್ ಕೊರ್ ಎಂಬ ಇನ್ನೊಂದು ಸಂಗೀತ ತಂಡದ 50 ಮಂದಿ ಕೋವಿಡ್ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಇಂಗ್ಲಂಡಿನಲ್ಲೂ ವಾಯ್ಸಸ್ ಆಫ್ ಯೋರ್ಕ್ ಶಯರ್ ಎಂಬ ಸಂಗೀತ ತಂಡದ ಹಲವು ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಈ ವಿದ್ಯಮಾನ ಸಾರ್ವಜನಿಕವಾಗಿ ಹಾಡುವುದರಿಂದ ವೈರಸ್ ಹರಡುತ್ತದೆಯೇ ಎಂಬ ಪ್ರಶ್ನೆಯನ್ನೆಬ್ಬಿಸಿದೆ. ಬರ್ತ್ ಡೇ ಪಾರ್ಟಿ, ಫುಟ್‌ಬಾಲ್ ಪದ್ಯಗಳಂಥ ಕಾರ್ಯಕ್ರಮಗಳಲ್ಲಿ ವೈರಸ್ ಹರಡುವುದು ಈ ಮೊದಲೇ ದೃಢಪಟ್ಟಿತ್ತು. ಇದೀಗ ಈ ಸಾಲಿಗೆ ಸಂಗೀತ ಕಾರ್ಯಕ್ರಮಗಳು ಸೇರಿವೆ.
ಹಾಡುಗಾರನಿಂದ ಪ್ರಸರಣ
ಸಂಗೀತ ತಂಡದಲ್ಲಿ ವೈರಸ್ ಸೋಂಕಿತ ಹಾಡುಗಾರನಿದ್ದರೆ ಅವನು ಹಾಡುವಾಗ ಸಿಡಿಯುವ ಉಗುಳಿನ ಹನಿಗಳಿಂದ ವೈರಸ್ ಹರಡುವ ಸಾಧ್ಯತೆಯಿದೆ. ಅಂತೆಯೇ ವಾದ್ಯ ಊದುವಾಗಲೂ ಉಗುಳಿನ ಹನಿಗಳು ಸಿಡಿಯುತ್ತವೆ ಎನ್ನುತ್ತಾರೆ ಲಾಸ್ ಏಂಜೆಲ್ಸ್ ವಿವಿಯ ಸಂಶೋಧಕ ಲಾಯ್ಡ ಸ್ಮಿತ್. ಆದರೆ ಎಲ್ಲ ವಿಜ್ಞಾನಿಗಳು ಈ ಅಭಿಪ್ರಾಯಕ್ಕೆ ಸಹಮತ ಹೊಂದಿಲ್ಲ. ಮ್ಯೂನಿಚ್‌ನ ಮಿಲಿಟರಿ ವಿವಿಯ ಉಪನ್ಯಾಸಕ ಕ್ರಿಶ್ಚಿಯನ್ ಕಹ್ಲೆರ್ ಅಮ್‌ಸ್ಟರ್‌ಡ್ಯಾಮ್ ಸಂಗೀತ ತಂಡದವರ ಅದ್ಯಯನದ ನಡೆಸಿದ ಬಳಿಕಷ್ಟೆ ಈ ತರ್ಕವನ್ನು ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.