ಕೋಲ್ಕತಾ: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸ್ಪರ್ಧಿಸುತ್ತಿರುವವರಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುಂಚೂಣಿಯಲ್ಲಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದರೂ ಈ ಪ್ರತಿಷ್ಠಿತ ಹುದ್ದೆಗೇರಲು ಗಂಭೀರ್‌ಗೆ ಕೋಲ್ಕತಾ ಫ್ರಾಂಚೈಸಿ ಮಾಲಕ ಶಾರುಖ್ ಖಾನ್ ಅವರ ಒಪ್ಪಿಗೆ ಬೇಕಾಗಬಹುದು ಎಂದು ವರದಿಗಳು ಹೇಳಿವೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಗಂಭೀರ್ ಒಪ್ಪಿದರೆ, ಇಲ್ಲಿ ಶಾರುಖ್ ಪಾತ್ರ ಕೂಡ ನಿರ್ಣಾಯಕವಾಗಲಿದೆ. ಗಂಭೀರ್ ಮತ್ತು ಶಾರುಖ್ ಇಬ್ಬರೂ ಖಾಸಗಿಯಾಗಿ ಮಾತುಕತೆ ನಡೆಸಿ ಈ ಬಗ್ಗೆ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.
ಮುಂಚೂಣಿಯಲ್ಲಿ ಗಂಭೀರ್:
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ. ಆದರೆ ಈ ಜವಾಬ್ದಾರಿಯುತ ಹುದ್ದೆಗೆ ಯಾರ್ಯಾರು ಅರ್ಜಿ ಸಲ್ಲಿಸಿದ್ದಾರೆ ಎನ್ನವುದು ಇನ್ನೂ ತಿಳಿದಿಲ್ಲ. ಮಾಹಿತಿಯ ಪ್ರಕಾರ, ವಿದೇಶಿ ಕೋಚ್‌ಗಳು ಅರ್ಜಿ ಸಲ್ಲಿಸಲು ಆಸಕ್ತಿ ತೋರಿಲ್ಲ. ಹೀಗಾಗಿ, ನಿರೀಕ್ಷಿತ ಅಭ್ಯರ್ಥಿಗಳಲ್ಲಿ ಗಂಭೀರ್ ಅವರದೇ ಪ್ರಮುಖ ಹೆಸರಾಗಿದೆ. ಸದ್ಯ ಗಂಭೀರ್ ಕೆಕೆಆರ್ ತಂಡದ ಮಾರ್ಗದರ್ಶಕರಾಗಿದ್ದಾರೆ.
ಹಿಂದಿನ ಆವೃತ್ತಿಯಲ್ಲಿ ಲಕ್ನೋ ತಂಡಕ್ಕೆ ಮೆಂಟರ್ ಆಗಿದ್ದ ಗಂಭೀರ್ ಅವರನ್ನು ಶಾರುಖ್ ಈ ಬಾರಿ ಮತ್ತೆ ತಂಡಕ್ಕೆ ಕರೆಸಿಕೊಂಡಿದ್ದರು. ಈ ಐಪಿಎಲ್‌ನಲ್ಲಿ ಕೆಕೆಆರ್ ಉತ್ತಮ ಪ್ರದರ್ಶನವನ್ನೂ ನೀಡಿದೆ. ಆದ್ದರಿಂದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಗಂಭೀರ್ ಮನಸ್ಸು ಮಾಡಿದರು ಕೂಡ, ಶಾರುಖ್ ಒಪ್ಪಿಗೆಯನ್ನೂ ಪಡೆಯಬೇಕಾಗುತ್ತದೆ ಎಂದು ಮೂಲಗಳು ಹೇಳುತ್ತಿವೆ.