ವಾಡಿ: ಈಗ ಚಿತ್ತಾಪುರದ ಅಭಿವೃದ್ಧಿ ಪ್ರಶ್ನೆ ಮಾಡುತ್ತಿರುವ ಅಕ್ಕಿ ಕಳ್ಳರು ಕೊರೊನಾ ಕಾಲದಲ್ಲಿ ಕಂಬಳಿ ಹೊದ್ಕೊಂಡು ಮಲಗಿದ್ರು. ಜನರು ಪ್ರವಾಹ ಸಂಕಷ್ಟದಲ್ಲಿದ್ದಾಗ ಈ ಸಮಾಜ ಸುಧಾರಕರು ಎಲ್ಲಿದ್ದರು? ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿಗರನ್ನು ಪ್ರಶ್ನಿಸಿದರು.
ಕೊಲ್ಲೂರು ಗ್ರಾಮದಲ್ಲಿ 2ಕೋಟಿ ರೂ. ಅನುದಾನದ ಕಾಮಗಾರಿಗಳು ಸೇರಿದಂತೆ ಬಳವಡಗಿ ಗ್ರಾಮದಲ್ಲಿ 70ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಅಡಿಗಲ್ಲು, 72ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಣ ಭೀತಿ ತೊರೆದು ಕೋವಿಡ್ ಕೇಂದ್ರಗಳಲ್ಲಿ ಓಡಾಡಿ ನಾವು ಸೋಂಕಿತರ ಆರೋಗ್ಯ ಕಾಪಾಡಿದ್ದೇವೆ.
ಪ್ರವಾಹ ಸಂಕಷ್ಟದಲ್ಲಿದ್ದ ಗ್ರಾಮಗಳ ಜನರ ನೆರವಿಗೆ ದಾವಿಸಿದ್ದೇವೆ. ಅಗತ್ಯ ಪರಿಹಾರಗಳನ್ನು ಒದಗಿಸಿದ್ದೆವು. ಲಾಕ್ ಡೌನ್ ಘೋಷಣೆಯಾದಾಗ ವಾಪಸ್ ಬರಲಾಗದೇ ಮಹಾರಾಷ್ಟ್ರದಲ್ಲಿ ಸಿಲುಕಿ ಗೋಳಾಡುತ್ತಿದ್ದ ತಾಲೂಕಿನ ಗುಳೆ ಕಾರ್ಮಿಕರ ರಕ್ಷಣೆಗೆ ಇವರೇಕೆ ನಿಲ್ಲಲಿಲ್ಲ. ಕಾರ್ಮಿಕರನ್ನು ಕರೆ ತರಲು ವಾಹನ ವ್ಯವಸ್ಥೆಯನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇಲ್ಲಿ ಬಿಜೆಪಿಯವರು ವಲಸಿಗರನ್ನು ಬಸ್ಸಿನಿಂದ ಇಳಿಸಿಕೊಂಡು ಸೇವೆಯ ನಾಟಕ ಮಾಡಿದರು ಎಂದು ಟೀಕಿಸಿದರು.
ಸಮಾಜ ಸುಧಾರಕರ ಮುಖವಾಡ ಧರಿಸಿಕೊಂಡ ಕೆಲ ಬಿಜೆಪಿ ಕಾರ್ಯಕರ್ತರು, ಅಭಿವೃದ್ಧಿ ಹಂತದಲ್ಲಿರುವ ಮತ್ತು ಐದು ವರ್ಷಗಳ ಕಾಲ ಗುತ್ತಿಗೆದಾರ ನಿರ್ವಹಣೆ ಮಾಡಬೇಕಾದ ಚಿತ್ತಾಪುರದ ಕೆಲ ರಸ್ತೆಗಳು ಮಳೆಗೆ ಹಾಳಾಗಿದ್ದಲ್ಲಿ ಮೀನು ಹಿಡಿಯುವ ಆಟವಾಡುತ್ತಾ ಪ್ರಿಯಾಂಕ್ ಖರ್ಗೆಗೆ ಅಭಿವೃದ್ಧಿ ಕಾಳಜಿಯಿಲ್ಲ. ಬಂಜಾರಾ ಜನರ ಮೇಲೆ ಕಾಳಜಿಯಿಲ್ಲ ಎಂದು ಬಿಂಬಿಸಿ ಬಂಜಾರಾ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಬಂಜಾರಾ ಧರ್ಮಗುರು ಶ್ರೀ ರಾಮರಾವ್ ಮಹಾರಾಜರ ನಕಲಿ ಸಹಿ ಮಾಡಿಸಿ ಲಂಬಾಣಿಗರನ್ನು ಎಸ್ ಟಿಗೆ ಸೇರಿಸುವಂತೆ ಪ್ರಧಾನಿ ಮೋದಿಗೆ ಮನವಿಪತ್ರ ಕೊಟ್ಟ ಸಂಸದ ಡಾ| ಉಮೇಶ ಜಾಧವ ನಿಲುವಿನ ಬಗ್ಗೆ ಇವರು ಏಕೆ ಚಕಾರ ಎತ್ತುವುದಿಲ್ಲ ಎಂದು ಪ್ರಶ್ನಿಸಿದರು. ದಿ.ವಾಲ್ಮೀಕಿ ನಾಯಕ ಶಾಸಕರಾಗಿದ್ದಾಗ ತಾಂಡಾಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ? ನಾನೆಷ್ಟು ಕೊಟ್ಟಿದ್ದೀನಿ ಎನ್ನುವ ಕುರಿತು ಬಹಿರಂಗ ಚರ್ಚೆಯಾಗಲಿ. ವೇದಿಕೆ ಸಿದ್ಧಪಡಿಸಿದರೆ ಕ್ಷೇತ್ರದ ಅಭಿವೃದ್ಧಿಯ ಚರ್ಚೆಗೆ ನಾನು ಸಿದ್ಧ ಎಂದು ಬಿಜೆಪಿಗೆ ಪಂಥಾಹ್ವಾನ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ಅಬ್ದುಲ್ ಅಜೀಜ್ ಸೇಠ, ರಮೇಶ ಮರಗೋಳ, ವೀರಣ್ಣಗೌಡ ಪರಸರೆಡ್ಡಿ, ಟೋಪಣ್ಣ ಕೋಮಟೆ, ದೇವೇಗೌಡ ತೋಟದ್, ಶರಣು ವಾರದ್, ಕೃಷ್ಣಾರೆಡ್ಡಿ, ಅಬ್ದುಲ್ ಸಲೀಂ, ಸಾಬಣ್ಣ ಬನ್ನೇಟಿ, ಭಾಗಪ್ಪ ಯಾದಗಿರಿ, ಹಣಮಂತ ಚವ್ಹಾಣ, ಗುಂಡುಗೌಡ ಪಾಟೀಲ, ಶ್ರೀಶೈಲ ನಾಟೀಕಾರ, ಶರಣು ನಾಟೀಕಾರ, ನಾಗೇಂದ್ರ ಜೈಗಂಗಾ ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.