ಕಿಶೋರಿಗೆ ಅವಳ ತಂದೆ- ತಾಯಿ ತನ್ನನ್ನು ದತ್ತು ತೆಗೆದುಕೊಂಡಿರುವ ವಿಷಯ ತಿಳಿದಾಗ, ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು.
ಹದಿನೈದು ವರ್ಷದ ಕಿಶೋರಿಗೆ ತಲೆಸುತ್ತು ಮತ್ತು ಪ್ರಜ್ಞೆ ತಪ್ಪಿ ಬೀಳುವ ರೋಗವಿತ್ತು. ನರರೋಗ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ನಿಗದಿತವಾಗಿ ತೆಗೆದುಕೊಂಡಿದ್ದರೂ ಖಾಯಿಲೆಯ ಸ್ವರೂಪ ಕಡಿಮೆಯಾಗಿರಲಿಲ್ಲ. ಅವಳ ಎಂ.ಆರ್.ಐ ಸ್ಕ್ಯಾನ್ ಮತ್ತು ಇ.ಇ.ಜಿ. ರಿಪೋರ್ಟ್‌ನಲ್ಲಿ ಮಿದುಳಿನ ಚಟುವಟಿಕೆಯಲ್ಲಿ ಅಸಮತೋಲನ ಕಂಡು ಬಂದಿರಲಿಲ್ಲ. ಹೀಗಾಗಿ, ನನ್ನ ಬಳಿ ಚಿಕಿತ್ಸಾತ್ಮಕ ಸಂದರ್ಶನಕ್ಕಾಗಿ ಬಂದಿದ್ದಳು.
ಅವಳದ್ದು ಗೌರವರ್ಣ, ಗುಂಗುರು ಕೂದಲು ಮತ್ತು ದಪ್ಪ ತುಟಿ. ಅವಳಿಗೆ ತಾನು cute ಅಲ್ಲ ಎನಿಸುತ್ತಿತ್ತಂತೆ. ಪರೀಕ್ಷೆಯಲ್ಲಿ ಅಂಕಗಳು ಅಷ್ಟಕಷ್ಟೇ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಷ್ಟಾಗಿ ಆಸಕ್ತಿ ಇರಲಿಲ್ಲ. ಹೀಗಾಗಿ ಅವಳಿಗೆ ತನ್ನ ಬಗ್ಗೆ ತಿರಸ್ಕಾರ ಮತ್ತು ಕೀಳರಿಮೆ ಇತ್ತು. ತನ್ನಲ್ಲಿ ಐಬು ಇರಬೇಕು ಎಂದೇ ನಂಬಿದ್ದಳು. ಈ ನಂಬಿಕೆಗೆ ಸರಿಯಾಗಿ, ಅವಳ ಅತ್ತೆಯ ಮಗ, ಕಿಶೋರಿಯನ್ನು ಅವಳ ತಂದೆ- ತಾಯಿ ದತ್ತು ತೆಗೆದುಕೊಂಡಿರುವುದಾಗಿ ಹೇಳಿದಾಗ ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು.
ಯಾರಾದರೂ ಚಿಕ್ಕದಾಗಿ ಗದರಿದರೆ ಇವಳಿಗೆ ಜೋರಾಗಿ ಬಯ್ದಂತೆ ಅನ್ನಿಸುತ್ತಿತ್ತು. ಪಾಕೆಟ್ ಮನಿ ಕೇಳುವಾಗಲೆಲ್ಲಾ ಬಹಳ ಸಂಕೋಚವಾಗುತಿತ್ತು. ಮನೆಕೆಲಸಕ್ಕೆ ಕರೆದರೆ, ಆಳಿನಂತೆ ನೋಡುತ್ತಾರೆ ಎಂದು ಖನ್ನತೆ. ಮಾಲ್ಗೆ ಶಾಪಿಂಗ್ ಹೋದರೆ ತನಗಿಷ್ಟವಾದ ಐಟಂಗಳ ಬೆಲೆ ನೋಡುವಳು. ತೆಗೆಸಿಕೊಡಿ ಎಂದು ಕೇಳಲು ಭಯ. ಹೀಗೆ, ಒಳಗೊಳಗೇ ಕುದ್ದುಬಿಟ್ಟಿದ್ದಾಳೆ ಕಿಶೋರಿ. ಒಮ್ಮೊಮ್ಮೆ ತನ್ನ ನಿಜವಾದ (biological parents) ತಂದೆ-ತಾಯಿ ಯಾರಿರಬಹುದು ಎಂದು ಯೋಚಿಸುತ್ತಿದ್ದಳು. ತನ್ನನ್ನು ಇವರೇಕೆ ದತ್ತು ತೆಗೆದುಕೊಂಡರು? ಎಂದು ಕೇಳಲು ಸಂಕೋಚ ಮತ್ತು ತವಕ! ಹುಟ್ಟಿದ ದಿನವೇ ದತ್ತು ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಹಾಗಾದರೆ ಇವರಿಗೆ ನಿಜವಾದ ತಂದೆತಾಯಿಯ ಪರಿಚಯವಿತ್ತೇ? ದುಡ್ಡು ಕೊಟ್ಟು ಕೊಂಡುಕೊಂಡರೇ? ನಾನು ಯಾರಿಗೂ ಬೇಡವಾದ ಮಗುವೇ?
ಈ ರೀತಿಯ ಚಿಂತೆ ಮತ್ತು ಭಾವನಾತ್ಮಕ ಸಂಕೀರ್ಣತೆಯಿಂದಾಗಿ ತಲೆಸುತ್ತು ಮತ್ತು ಪ್ರಜ್ಞೆ ತಪ್ಪಿ ಬೀಳುವ ರೋಗ ಶುರುವಾಗಿರುವುದು ಸ್ಪಷ್ಟವಾಗಿತ್ತು. ಮಕ್ಕಳಿರದ ದಂಪತಿಗಳ ನೋವನ್ನು ಅವಳಿಗೆ ವಿವರಿಸಿ ಹೇಳಿದೆ. ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ವಿವರಿಸಿದೆ. ದತ್ತು ಕೊಟ್ಟ ತಂದೆ- ತಾಯಿಯರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಹಲವಾರು ಕಾರಣಗಳಿರುತ್ತವೆ. ಆ ಕಾರಣಗಳನ್ನು ನಾವು ಯಾಕೆ ಕೆದಕಬಾರದೆಂದು ಕಿಶೋರಿಗೆ ಅರ್ಥವಾಯಿತು.
ಕಿಶೋರಿಯ ತಂದೆ- ತಾಯಿ ದತ್ತು ತೆಗೆದುಕೊಂಡ ವಿಚಾರವನ್ನು ಅವರೇ ತಿಳಿಸಲು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಬೇರೆ ಯಾರದ್ದೋ ಮುಖಾಂತರೆ ಅಚಾನಕ್ ತಿಳಿದಾಗ ಆಘಾತವಾಗಿರಬಹುದು. ಈ ತಂದೆ- ತಾಯಿ ಅಪ್ಪಿಕೊಂಡಿದ್ದಾರೆಂಬ ಕೃತಜ್ಞತೆಗಿಂತ ಜನ್ಮ ಕೊಟ್ಟ ತಂದೆ ತಾಯಿ ನನ್ನನ್ನು ಯಾಕೆ ತಿರಸ್ಕರಿಸಿದರು ಎಂಬ ನೋವು ಜಾಸ್ತಿಯಾಗುತ್ತದೆ. ಜೀವನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. ಪ್ರಶ್ನೆಗಳನ್ನು ಬದಲಿಸಿಕೊಳ್ಳಬೇಕು. ಬದುಕು ಎಂದರೆ ರಾಜಿಗಳ ನಿರಂತರ ಮೆರವಣಿಗೆ. ಸ್ವೀಕರಿಸಿ. ಆನಂದಿಸಿ!
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ