Advertisement

ತಿಂಗಳು ಕಳೆದರೂ ದುರಸ್ತಿಯಾಗದ ಪ.ಪೂ. ಕಾಲೇಜು ಕಟ್ಟಡ

05:50 PM May 20, 2019 | sudhir |

ಅಜೆಕಾರು: ಮುನಿಯಾಲು ಪರಿಸರದಲ್ಲಿ ಮೇ 23ರಂದು ಭಾರೀ ಗಾಳಿ ಮಳೆಗೆ ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡಕ್ಕೆ ಹಾನಿಯಾಗಿ ತಿಂಗಳು ಕಳೆದರೂ ಇನ್ನೂ ದುರಸ್ತಿಯಾಗಿಲ್ಲ.

Advertisement

ಮನವಿ ಮಾಡಿದರೂ ಪ್ರಯೋಜನವಿಲ್ಲ
ಕಟ್ಟಡಕ್ಕೆ ಹಾನಿಯಾಗಿ 15 ಲಕ್ಷ ರೂ. ನಷ್ಟ ಸಂಭವಿಸಿತ್ತು. ಮೇ 20ರಿಂದ ಕಾಲೇಜು ಶುರುವಾಗಲಿದ್ದು, ಕಟ್ಟಡಕ್ಕೆ ಆದ ಹಾನಿಯಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಯಾಗಲಿದೆ.

ಕಾಲೇಜು ಆಡಳಿತ ಮಂಡಳಿ, ಶಿಕ್ಷಣಾಧಿಕಾರಿ ಕಚೇರಿ, ಶಾಸಕರು ಹಾನಿಯಾದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನ ಸೆಳೆದು ಒತ್ತಡ ತಂದಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ಮೇಲ್ಛಾವಣಿಗೆ ಸಂಪೂರ್ಣ ಹಾನಿ
ಕಾಲೇಜಿನ ಸಭಾಭವನದ ಮೇಲ್ಛಾವಣಿ ಸಂಪೂರ್ಣ ಹಾನಿಗೊಳ್ಳುವ ಜತೆಗೆ ವಿದ್ಯುತ್‌ ಉಪಕರಣಗಳು ಸಂಪೂರ್ಣ ಕೆಟ್ಟುಹೋಗಿವೆೆ. ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕೊಠಡಿ ಹಾಗೂ ತರಗತಿ ಕೋಣೆಗಳ ಮೇಲ್ಛಾವಣಿಯ ಹೆಂಚು ಹಾನಿಗೊಂಡಿದೆ. ವಿದ್ಯಾರ್ಥಿಗಳ ಶೌಚಾಲಯದ ಮೇಲ್ಛಾವಣಿಯೂ ಹಾನಿಗೊಂಡಿದೆ. ಕಾಲೇಜಿನ ಆವರಣ ಗೋಡೆಗೆ ಬೃಹತ್‌ ಮರಗಳು ಉರುಳಿ ಬಿದ್ದು ಆವರಣ ಗೋಡೆಯೂ ಸಂಪೂರ್ಣ ಹಾನಿಗೊಂಡಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗೆ ಹಾನಿಯುಂಟಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪದವಿಪೂರ್ವ ವಿಭಾಗ ಹಾಗೂ ಪ್ರೌಢ ಶಾಲಾ ವಿಭಾಗ ಸೇರಿದಂತೆ ಸಂಸ್ಥೆಯಲ್ಲಿ ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಈ ಶೈಕ್ಷಣಿಕ ವರ್ಷದಿಂದ ಮುನಿಯಾಲು ಪ್ರಾಥಮಿಕ ಶಾಲೆಯನ್ನು ಸೇರಿಸಿಕೊಂಡು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆಗೊಂಡಿರುವ ಈ ಸಂಸ್ಥೆಯಲ್ಲಿ ಸುಮಾರು ಒಟ್ಟು 1000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲಿದ್ದಾರೆ.

ಮಳೆಗಾಲದೊಳಗೆ ದುರಸ್ತಿ ನಿರೀಕ್ಷೆ
ಶಿಕ್ಷಣ ಇಲಾಖೆಯಿಂದ ಉಪನಿರ್ದೇಶಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಮುನಿಯಾಲು ಪಿ.ಯು. ಕಾಲೇಜು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆದ್ದರಿಂದ ಸರಕಾರದಿಂದ ಅನುದಾನ ಬರಬೇಕಾಗಿದೆ. ಮಳೆಗಾಲದೊಳಗೆ ಅನುದಾನ ಸಿಕ್ಕಿ ದುರಸ್ತಿಯಾಗುವ ನಿರೀಕ್ಷೆ ಇದೆ.
-ಶಶಿಧರ, ಶಿಕ್ಷಣಾಧಿಕಾರಿ, ಕಾರ್ಕಳ

ಪರಿಹಾರ ಕಾಮಗಾರಿ ನಡೆದಿಲ್ಲ
ಭೀಕರ ಗಾಳಿಗೆ ಕಾಲೇಜಿಗೆ ಅಪಾರ ನಷ್ಟ ಉಂಟಾದ ಬಗ್ಗೆ ತಹಶೀಲ್ದಾರ್‌, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಗಮನಕ್ಕೆ ತಂದು ತ್ವರಿತವಾಗಿ ದುರಸ್ತಿಪಡಿಸುವಂತೆ ಮನವಿ ಮಾಡಿದ್ದರೂ ಈವರೆಗೆ ಯಾವುದೇ ಪರಿಹಾರ ಕಾಮಗಾರಿ ನಡೆದಿಲ್ಲ.
-ಸತೀಶ್‌ ಶೆಟ್ಟಿ ಮುಟ್ಲುಪಾಡಿ, ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ

ತುರ್ತು ದುರಸ್ತಿಗೆ ಅನುದಾನ
ಕಾಲೇಜು ದುರಸ್ತಿಗೆ ಅಧಿಕಾರಿಗಳಿಗೆ ಒತ್ತಡ ತರಲಾಗಿದೆ. ತುರ್ತು ದುರಸ್ತಿಗೆ 3 ಲಕ್ಷ ರೂ.ಅನುದಾನವನ್ನು ಜಿಲ್ಲಾ ಪಂಚಾಯತ್‌ನಿಂದ ನೀಡಲಾಗುವುದು. ಸಂಪೂರ್ಣ ದುರಸ್ತಿಗೆ 15ರಿಂದ 20 ಲಕ್ಷ ವೆಚ್ಚವಾಗಲಿದ್ದು ಹೆಚ್ಚಿನ ಅನುದಾನಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
-ಜ್ಯೋತಿಹರೀಶ್‌, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next