ಬೆಂಗಳೂರು: ‘ನಾಲ್ಕು ತಿಂಗಳು ಜೈಲಿನಲ್ಲಿ ಕಷ್ಟ ಏನು ಎನ್ನುವುದು ಅರ್ಥವಾಯಿತು. ಇನ್ನು ಮುಂದೆ ನಾನು ಒಳ್ಳೆಯ ಮಗನಾಗಿ ಜನರೊಂದಿಗೆ ಇರುತ್ತೇನೆ. ನನ್ನ ಕೈಲಾದ ಸೇವೆ ಮಾಡುತ್ತೇನೆ’ಇದು ಶಾಂತಿನಗರ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ಸಾರ್ವಜನಿಕ ಸಮಾರಂಭದಲ್ಲಿ ಮಾಡಿದ ಭಾಷಣ.
ಬುಧವಾರ ಶಾಂತಿನಗರದಲ್ಲಿ ಅಜ್ಜನ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಲಪಾಡ್ ‘ನಾಲ್ಕು ತಿಂಗಳಲ್ಲಿ ನನ್ನ ಕುಟುಂಬ, ನೀವೆಲ್ಲಾ ತುಂಬಾ ಕಷ್ಟ ಪಟ್ಟಿದ್ದೀರಿ.ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನ ಅಜ್ಜ ಕಷ್ಟ ಪಟ್ಟಿದ್ದಾರೆ. ಒಬ್ಬ ಮಗನಾಗಿ, ಮೊಮ್ಮಗನಾಗಿ ಇದುವರೆಗೆ ಫೇಲ್ ಆಗಿದ್ದೆ ಇನ್ನು ಮುಂದೆ ಒಳ್ಳೆಯವನಾಗುತ್ತೇನೆ’ ಎಂದರು.
‘ನಾಲ್ಕು ತಿಂಗಳಲ್ಲಿ ಕಷ್ಟ ಅಂದರೆ ಏನು ಅಂತ ತಿಳಿದಿದೆ. ಜನ ನೀರಿಲ್ಲ ಅಂದರೆ ಏನಪ್ಪಾ ಅನಿಸುತ್ತಿತ್ತು. ನನ್ನ ಮನೆಯಲ್ಲಿ ಯಾವಾಗ ಟ್ಯಾಪ್ ಆನ್ ಮಾಡಿದರೂ ನೀರು ಬರುತ್ತಿತ್ತು. ಜೈಲಿನಲ್ಲಿ ಟಾಯ್ಲೆಟ್‌ನಲ್ಲಿ ದ್ದಾಗ ನೀರು ಬರದಿದ್ದಾಗ ಕಷ್ಟ ಏನೂ ಅಂತ ತಿಳಿಯಿತು’ ಎಂದರು.
‘ಇನ್ಮುಂದೆ ಏನೆ ಆಗಲಿ ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತೇನೆ. ಜನರ ಜೊತೆ ಇರುತ್ತೇನೆ. ನನಗೆ ಮಾನಸಿಕವಾಗಿ ಎಲ್ಲಾ ರೀತಿಯಲ್ಲಿ ತಾತ ಧೈರ್ಯ ತುಂಬಿದ್ದಾರೆ. ಬರೋ ವರ್ಷ ಅವರ ಹುಟ್ಟು ಹಬ್ಬಕ್ಕೆ ಇನ್ನೂ ಒಳ್ಳೆಯ ಮೊಮ್ಮಗ ನಾಗಿ ಇರುವುದಾಗಿ ಭರವಸೆಯ ಗಿಫ್ಟ್ ಕೊಡುತ್ತೇನೆ. ರಾತ್ರಿ 9 ಗಂಟೆಯಿಂದ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಮಾತು ನೀಡಿದ್ದೇನೆ. ರಾತ್ರಿ 9 ಗಂಟೆ ಬಳಿಕ ಯಾರೂ ಕರೆದರು ಹೊರಗೆ ಬರುವುದಿಲ್ಲ’ ಎಂದರು.
ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ನಲಪಾಡ್‌ಗೆ 4 ತಿಂಗಳ ಬಳಿಕ ಜಾಮೀನು ದೊರಕಿತ್ತು.