ಪವಿತ್ರ ಕ್ಷೇತ್ರಗಳಾಗಿರುವ ಮಥುರಾ, ವೃಂದಾವನಗಳಿಂದ ಗುರುತಿಸಿಕೊಂಡಿರುವ ಮಥುರಾ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರು ಸಂಸತ್ ಸದಸ್ಯರಾಗಿದ್ದುದಕ್ಕಿಂತ ಹೊರಗಿನ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಅದಕ್ಕೆ ಹಾಲಿ ಸಂಸದೆ, ಕನಸಿನ ಕನ್ಯೆ ಹೇಮಮಾಲಿನಿಯವರೂ ಹೊರತಲ್ಲ. ಕೆಲ ದಿನಗಳ ಹಿಂದೆ ಪ್ರಚಾರ ನಡೆಸಿದ ಸಂದರ್ಭದಲ್ಲಿ ತಾನು 250 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
1991 -1996, 1996-1998, 1998-1999, 1999-2004ರ ಸಾಲಿನಲ್ಲಿ ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರದಿಂದ ಗೆದ್ದಿದ್ದರು. 2004-2009ರ ಸಾಲಿನಲ್ಲಿ ಕಾಂಗ್ರೆಸ್‌ನ ಮಾನವೇಂದ್ರ ಸಿಂಗ್ ಗೆದ್ದಿದ್ದರೆ, 2009-2014ನೇ ಸಾಲಿನಲ್ಲಿ ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಗೆದ್ದಿದ್ದರು.
ಹಿಂದಿನ ಲೋಕಸಭೆ ಚುನಾವಣೆ ಯಲ್ಲಿ ಹೇಮಮಾಲಿನಿ ಎಂಬ ಪಕ್ಷೇತರ ಅಭ್ಯರ್ಥಿಯೂ 10,158 ಮತಗಳನ್ನು ಪಡೆದಿದ್ದರು! ಈ ಬಾರಿ ಕಾಂಗ್ರೆಸ್‌ನ ಮಹೇಶ್ ಪಾಠಕ್, ಆರ್‌ಎಲ್‌ಡಿಯ ನರೇಂದ್ರ ಸಿಂಗ್ ಕನಸಿನ ಕನ್ಯೆಯ ಎದುರಾಳಿಗಳು.
ಹಾಲಿ ಸಂಸದೆ 2014-2019ರ ಅವಧಿಯಲ್ಲಿ ಕ್ಷೇತ್ರದ ಜನತೆಗೆ ಸಿಗುತ್ತಿರಲಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷಗಳಿಂದ ಎದುರಿಸುತ್ತಿದ್ದಾರೆ. ಹೊರಗಿನವರು ವರ್ಸಸ್ ಬೃಜ್‌ವಾಸಿ ಎಂದೇ ಈಗ ಕ್ಷೇತ್ರದಲ್ಲಿ ಹೋರಾಟ ನಡೆಯುತ್ತಿದೆ. ನಿರುದ್ಯೋಗ, ರೈತರ ಸಮಸ್ಯೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಇರುವುದು ಪ್ರಧಾನ ವಿಚಾರಗಳಾಗಿವೆ. ಆದರೆ ಅಂಗಡಿ ಮಾಲೀಕ ಹೇಳುವ ಪ್ರಕಾರ ಹೇಮಮಾಲಿನಿ ಬಗ್ಗೆ ಗೊತ್ತಿಲ್ಲ. ಆದರೆ ನರೇಂದ್ರ ಮೋದಿ ಬಗ್ಗೆ ವಿಶ್ವಾಸವಿದೆ. ಕೆಲವೊಮ್ಮೆ ನಮ್ಮ ಸಮಸ್ಯೆ ತ್ಯಾಗಮಾಡಿ ದೇಶದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎನ್ನುತ್ತಾರೆ. ಛಟ್ಟಾ ಎಂಬ ಊರಿನ ನಿವಾಸಿ ಪ್ರಕಾರ 2014ರಲ್ಲಿ ಹೇಮಮಾಲಿನಿ ಅವರ ಗ್ರಾಮಕ್ಕೆ ಬಂದ ಬಳಿಕ ಇದುವರೆಗೆ ಬರಲಿಲ್ಲವಂತೆ.
ಜಾತಿ ಲೆಕ್ಕಾಚಾರ: ಒಟ್ಟು ಜನಸಂಖ್ಯೆಯ ಶೇ.19.9 ಮಂದಿ ಎಸ್‌ಸಿ ಸಮುದಾಯ, ಎಸ್‌ಟಿ ಸಮುದಾಯ ಶೇ.0.1ರಷ್ಟು ಇದ್ದಾರೆ. ಇದರ ಜತೆಗೆ ಜಾಟ್, ಮುಸ್ಲಿಂ, ಒಬಿಸಿ, ಠಾಕೂರ್ ಸಮುದಾಯದವರು ಯಾವುದೇ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ.70ರಷ್ಟು ಮಂದಿ ಜೀವಿಸುತ್ತಿದ್ದರೆ, ಶೇ.29.7ರಷ್ಟು ಮಂದಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
2014ರ ಫಲಿತಾಂಶ
ಹೇಮಮಾಲಿನಿ (ಬಿಜೆಪಿ) 5,74,633
ಜಯಂತ್ ಚೌಧರಿ (ಆರ್‌ಎಲ್‌ಡಿ) 2,43, 890