ಬೆಂಗಳೂರು: ಆದಾಯ ತೆರಿಗೆ ಇಲಾಖೆ ಕೆಲವರನ್ನು ಗುರಿ ಇಟ್ಟುಕೊಂಡು ದಾಳಿ ಮಾಡುವುದು ಆ ಇಲಾಖೆ ಮೇಲೆ ಸಾರ್ವಜನಿಕರ ನಂಬಿಕೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಈ ದೇಶದಲ್ಲಿ ಸಾಕಷ್ಟು ಜನರ ಆಸ್ತಿಯಲ್ಲಿ ಏಕಾಏಕಿ ಹೆಚ್ಚಳವಾಗಿರುತ್ತದೆ. ಅನೇಕರು ಆದಾಯದ ಮೂಲ ತೋರಿಸದೇ ಶ್ರೀಮಂತರಾಗಿರುತ್ತಾರೆ. ಕಾರ್ಪೋರೇಟ್ ಕಂಪನಿಗಳು, ಖಾಸಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಏಕೆ ಐಟಿ ಅಧಿಕಾರಿಗಳು ದಾಳಿ ನಡೆಸುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಎಲ್ಲ ಜನಪ್ರತಿನಿಧಿಗಳೂ ತಮ್ಮ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿರುತ್ತಾರೆ. ಆ ಸಂದರ್ಭದಲ್ಲಿ ಅವರ ಆದಾಯ ದಿಢೀರ್ ಏರಿಕೆ ಹೇಗಾಯಿತು ಎಂದು ಯಾವತ್ತಾದರೂ, ಆದಾಯ ಇಲಾಖೆಯವರು ಪ್ರಶ್ನಿಸಿದ್ದಾರಾ ? ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆಯೇ ?
ಈ ರೀತಿ ಯಾವುದೋ ಕಾರಣಕ್ಕೆ ಗುರಿ ಇಟ್ಟುಕೊಂಡು ದಾಳಿ ಮಾಡಿದರೆ, ಆ ಇಲಾಖೆ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಈ ದೇಶದಲ್ಲಿ ಡಿ.ಕೆ.ಶಿವಕುಮಾರ್ ಒಬ್ಬರೇ ಅಸ್ತಿ ಮಾಡಿದ್ದಾರಾ? ಎಷ್ಟು ಜನರ ಆಸ್ತಿ ನೂರಾರು ಪಟ್ಟು ಹೆಚ್ಚಳವಾಗಿಲ್ಲಾ. ಅವರೆಲ್ಲಾ ಯಾಕೆ ಕಂಡಿಲ್ಲ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಇದೆಲ್ಲವನ್ನು ಎದುರಿಸುವ ಶಕ್ತಿ ಇದೆ. ಅವರು ಧೈರ್ಯದಿಂದ ಎದುರಿಸುತ್ತಾರೆ. ನಮ್ಮಂಥ ಬಡಪಾಯಿಗಳ ಮೇಲೆ ದಾಳಿ ಮಾಡಿದರೆ, ಹೇಗೆ ತಡೆದುಕೊಳ್ಳೋದು ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.