ಪಾಣಿಪತ್ (ಹರ್ಯಾಣ): “ಕಾಂಗ್ರೆಸ್ ಪಕ್ಷ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಇಡೀ ದೇಶವನ್ನೇ ಜೈಲನ್ನಾಗಿ ಮಾಡಿತ್ತು. ಇದಕ್ಕಾಗಿ ಕಾಂಗ್ರೆಸ್ ಯಾವತ್ತಾದರೂ ಕ್ಷಮೆಯಾಚಿಸಿದೆಯೇ? ಕಾಂಗ್ರೆಸ್ ಗೆ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕಿದೆ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಉಡುಪಿ ರೈಲು ನಿಲ್ದಾಣದಲ್ಲಿ ಕಳ್ಳತನ : ಇಬ್ಬರು ಕಳ್ಳಿಯರನ್ನು ಬಂಧಿಸಿದ ಪೊಲೀಸರು
ಹರ್ಯಾಣದ ಪಾಣಿಪತ್ ನಲ್ಲಿ ಆರ್ ಎಸ್ ಎಸ್ ಆಯೋಜಿಸಿದ್ದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್)ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಹೊಸಬಾಳೆ ಅವರು, ಲಂಡನ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಂಸದ, ಹಿರಿಯ ರಾಜಕಾರಣಿ. ತಾವು ನೀಡುವ ಹೇಳಿಕೆಗಳನ್ನು ಜವಾಬ್ದಾರಿಯುತವಾಗಿ ನೀಡಬೇಕು. 1975ರಲ್ಲಿ ಅವರ ಪಕ್ಷ (ಕಾಂಗ್ರೆಸ್) ತುರ್ತು ಪರಿಸ್ಥಿತಿಯನ್ನು ಹೇರಿತ್ತು. ಸಾವಿರಾರು ಜನರನ್ನು ಜೈಲಿಗೆ ಅಟ್ಟಲಾಗಿತ್ತು. ನಾನು ಹಲವು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದೆ. ಅಂದು ಇಡೀ ದೇಶವನ್ನೇ ಕೈದಿಗಳ ಸೆರೆಮನೆಯನ್ನಾಗಿ ಪರಿವರ್ತಿಸಲಾಗಿತ್ತು ಎಂದು ಹೊಸಬಾಳೆ ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವದ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿರುವ ಹೊಸಬಾಳೆ ಅವರು, ಭಾರತದಲ್ಲಿ ಚುನಾವಣೆಗಳು ನಡೆಯುತ್ತಿದೆ, ಸಂಸತ್ ಕಲಾಪವೂ ನಡೆಯುತ್ತಿದೆ..ಹಾಗಾದರೆ ಇದು ಪ್ರಜಾಪ್ರಭುತ್ವವಲ್ಲವೇ? ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2020ರಲ್ಲಿ ಘೋಷಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಗಾಗಿ 6,000 ಪಂಚಾಯ್ತಿಗಳಿಂದ ಸಲಹೆಗಳನ್ನು ಪಡೆಯಲಾಗಿದೆ. ಈ ನೀತಿಯನ್ನು ಸಲಹಾ ಮಂಡಳಿ ನೀಡಿದ ಸಲಹೆ ಮೇರೆಗೆ ಜಾರಿಗೊಳಿಸಬಹುದಿತ್ತು. ಇದು ಪ್ರಜಾಪ್ರಭುತ್ವವಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.