ಗೌಹಾತಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗ ಇಂದು ಇನ್ನೊಂದು ತಿರುವು ಲಭಿಸಿದೆ. ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ಸರಕಾರದ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರು ಮಾಡಿರುವ ಒಂದು ಟ್ವೀಟ್ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಗೌಹಾತಿಯಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯ ವಿಡಿಯೋ ಒದನ್ನು ಟ್ಯಾಗ್ ಮಾಡಿ ಟ್ವೀಟ್ ಒಂದನ್ನು ಮಾಡಿರುವ ಸೋನಾವಾಲ್ ಅವರು,
‘ಅಸ್ಸಾಂ ನೆಲದ ಮಗನಾಗಿ, ನಾನು ಯಾವುದೇ ವಿದೇಶಿಯರನ್ನು ನನ್ನ ಮಣ್ಣಿನಲ್ಲಿ ಬಂದಿರಲು ಅವಕಾಶ ನೀಡುವುದಿಲ್ಲ. ಸರ್ಬಾನಂದ ಸೋನೋವಾಲ್ ಆಗಿರುವ ನಾನು ಅದಕ್ಕೆ ಯಾವತ್ತೂ ಅವಕಾಶ ನೀಡಲಾರೆ…’ ಎಂದು ಬರೆದುಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಿಂದ ಭಾರತಕ್ಕೆ 2014ರ ಮೊದಲು ಬಂದು ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದುದಾಗಿದೆ.
ಹಾಗಾದರೆ ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವವನ್ನು ಪಡೆದುಕೊಳ್ಳಲಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ವಲಸಿಗರಿಗೆ ಅಸ್ಸಾಂ ರಾಜ್ಯದಲ್ಲಿ ನೆಲೆ ನೀಡುವುದಕ್ಕೆ ಬಿಜೆಪಿಯ ಮುಖ್ಯಮಂತ್ರಿಯೇ ವಿರೋಧ ವ್ಯಕ್ತಪಡಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈಗಾಗಲೇ ಕೇರಳ, ಪಶ್ಚಿಮ ಬಂಗಾಲ ರಾಜ್ಯಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ.