ನವದೆಹಲಿ: ಇನ್ನು ಮುಂದೆ ಬ್ಯಾಂಕುಗಳು ವಹಿವಾಟು ಸ್ಥಗಿತಗೊಳಿಸಿದಲ್ಲಿ ಠೇವಣಿದಾರರು ಆತಂಕಗೊಳ್ಳಬೇಕಾಗಿಲ್ಲ. 90 ದಿನಗಳಲ್ಲಿ ಅವರ ಹಣವನ್ನು ವಾಪಸ್ ಮಾಡುವ ಬಗ್ಗೆ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಅದರಂತೆ, ಠೇವಣಿ ಮೇಲಿನ ವಿಮೆಯ ಮೊತ್ತವನ್ನು ಹಾಲಿ ಇರುವ ಒಂದು ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!
ಇದಕ್ಕಾಗಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಕಾಯ್ದೆ 1961(ಡಿಐಸಿಜಿಸಿ)ಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಈ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿಯೇ ಘೋಷಣೆ ಮಾಡಿದ್ದರು. ಈಗ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಮುಂಗಾರು ಅಧಿವೇಶನದಲ್ಲೇ ಮಂಡಿಸಿ ಒಪ್ಪಿಗೆ ಪಡೆಯಲು ಯತ್ನಿಸಲಾಗುತ್ತದೆ ಎಂದು ಸಂಪುಟ ಸಭೆ ಬಳಿಕ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್, ಯೆಸ್ ಬ್ಯಾಂಕ್, ಲಕ್ಷ್ಮೀ ವಿಲಾಸ ಬ್ಯಾಂಕುಗಳು ನಷ್ಟಕ್ಕೀಡಾಗಿದ್ದರಿಂದ ಠೇವಣಿದಾರರ ಹಣಕ್ಕೆ ಆತಂಕ ಬಂದಿತ್ತು. ಇದರಿಂದಾಗಿ ಈ ಬ್ಯಾಂಕುಗಳಲ್ಲಿ ಹಣ ಇಟ್ಟಿದ್ದವರು ಆತಂಕಗೊಂಡಿದ್ದರು. ಇದನ್ನುಮನಗಂಡುಕೇಂದ್ರ ಸರ್ಕಾರ ಠೇವಣಿ ಮೇಲಿನ ವಿಮಾ ಮೊತ್ತವನ್ನು ಐದು ಪಟ್ಟು ಹೆಚ್ಚಿಸಿದೆ. ಜತೆಗೆ ಬ್ಯಾಂಕೊಂದು ನಷ್ಟಕ್ಕೀಡಾಗಿದೆ ಎಂದು ವ್ಯವಹಾರವನ್ನು ಸ್ಥಗಿತ ಮಾಡಿದ 90 ದಿನದಲ್ಲಿ ಠೇವಣಿದಾರರಿಗೆ ಹಣವನ್ನು ವಾಪಸ್ ಮಾಡಲಾಗುತ್ತದೆ.
ಈ ಸೌಲಭ್ಯ ಉಳಿತಾಯ, ಚಾಲ್ತಿ, ನಿಶ್ಚಿತ, ಆವರ್ತನ ಠೇವಣಿಗಳಿಗೆ ಅನ್ವಯವಾಗುತ್ತದೆ. ಪ್ರಿನ್ಸಿಪಲ್ ಮೊತ್ತದ ಜತೆಗೆ ಬಡ್ಡಿಗೂ ವಿಮಾ ಸೌಲಭ್ಯ ಸಿಗಲಿದೆ. ಇದರ ಜತೆಗೆ ಸೀಮಿತ ಹೊಣೆಗಾರಿಕೆ ಕಾಯ್ದೆಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಇದರಿಂದ ಪಾಲುದಾರಿಕೆಯಲ್ಲಿ ಕಂಪನಿ ನಡೆಸುವವರಿಗೆ ಅನುಕೂಲವಾಗಲಿದೆ.