Advertisement

ಡೊಂಬಿವಲಿಯ ಮಂದಿರದ ವಜ್ರಮಹೋತ್ಸವಕ್ಕೆ ಚಾಲನೆ

03:54 PM Mar 28, 2018 | Team Udayavani |

ಡೊಂಬಿವಲಿ: ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಇಂತಹ ಜನ್ಮ ಪಡೆದ ನಾವು ಧರ್ಮದಿಂದ ನಡೆದರೆ ಮಾತ್ರ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನುಡಿದರು.

Advertisement

ಮಾ. 25ರಂದು ಸಂಜೆ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಡೊಂಬಿವಲಿಯ ಶ್ರೀ ರಾಧಾಕೃಷ್ಣ ಭಜನ ಮಂಡಳಿ ಸಂಚಾಲಿತ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರದ ವಜ್ರಮಹೋತ್ಸವ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಲಿಯುಗದಲ್ಲಿ ಶ್ರೀ ಶನೀಶ್ವರನ ಮಹಿಮೆ ಅಪಾರವಾಗಿದ್ದು, ಶ್ರೀ ಶನೀಶ್ವರನು ನಮಗೆ ಕಷ್ಟಗಳನ್ನೇ ಕೊಡುತ್ತಾನೆ ಎಂಬ ನಂಬಿಕೆ ಹುರುಳಿಲ್ಲದ್ದು. ಅವು ಪರಮಾತ್ಮನು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು. ಡೊಂಬಿವಲಿ ಒಂದು ತುಳುನಾಡಿದ್ದಂತೆ. ಇಲ್ಲಿನ ತುಳು-ಕನ್ನಡಿಗರಲ್ಲಿರುವ ಒಗ್ಗಟ್ಟು ಬೇರೆ ಎಲ್ಲಿಯೂ ಕಾಣಸಿಗದು.  ಡೊಂಬಿವಲಿಯ ಕನ್ನಡಿಗರ ಪ್ರಮುಖ 32 ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂದು ವಜ್ರಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ರಾಧಾಕೃಷ್ಣ ಭಜನ ಮಂಡಳಿ ಸಂಚಾಲಿತ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರ ಸಂಸ್ಥೆಯೂ ಒಂದಾಗಿದ್ದು, ಈ ಸಂಸ್ಥೆಯ ವಿನೂತನ ಸ್ವಂತ ಮಂದಿರದ ಕನಸು ಆದಷ್ಟು ಬೇಗ ನನಸಾಗಲಿ ಎಂದು ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಡ್ಕ ಕರುಣಾಕರ ಶೆಟ್ಟಿ ಇವರು ಮಾತನಾಡಿ, ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದ್ದು, ಏಳು ಜನ್ಮಗಳ ಆನಂತರ 8ನೇ ಜನ್ಮ ಮಾನವ ಜನ್ಮವಾಗಿದೆ. ಇಂತಹ ಪರಮಶ್ರೇಷ್ಠ ಜನ್ಮದಲ್ಲಿ ಜನಿಸಿದ ನಾವು ಸತ್ಯ, ನಿಷ್ಠೆ ಹಾಗೂ ಧರ್ಮದಿಂದ ನಡೆದಾಗ ಮಾತ್ರ ನಮಗೆ ಮುಕ್ತಿ ಸಿಗಲು ಸಾಧ್ಯ. ಮಠ, ಮಂದಿರಗಳು ಶ್ರದ್ಧಾಕೇಂದ್ರಗಳಾಗಿ ಅನ್ನ ಹಾಗೂ ಜ್ಞಾನ ದಾಸೋಹದ ಕೇಂದ್ರಗಳಾಗಬೇಕು. ದೀನ ದಲಿತರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕು. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರ ಶತಮಾನೋತ್ಸವವನ್ನು ಆಚರಿಸಿ, ತುಳು-ಕನ್ನಡಿಗರ ಶ್ರದ್ಧಾಕೇಂದ್ರವಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಇವರು ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಶ್ರೀ ರಾಧಾಕೃಷ್ಣ ಭಜನ ಮಂಡಳದ ಕಾರ್ಯ ಅಭಿನಂದನೀಯ. ಸ್ವಂತ ನಿವೇಶನದಲ್ಲಿ ಭವ್ಯ ಮಂದಿರ ನಿರ್ಮಾಣದ ಕನಸು ಸಮಸ್ತ ತುಳು-ಕನ್ನಡಿಗರ ಸಹಾಯ- ಸಹಕಾರದಿಂದ ನನಸಾಗುವುದು ನಿಶ್ಚಿತ ಎಂದರು.

ಮಂಡಳದ ಉಪಾಧ್ಯಕ್ಷ ರವಿ ಸನಿಲ್‌ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಸೋಮನಾಥ ಪೂಜಾರಿ ಅವರು ಸಂಸ್ಥೆಯು ನಡೆದು ಬಂದ ಬಗೆಯನ್ನು ವಿವರಿಸಿದರು. ಜಗದೀಶ್‌ ನಿಟ್ಟೆ ತಂಡದವರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ವಸಂತ ಸುವರ್ಣ ಇವರು ಕಾರ್ಯಕ್ರಮ ನಿರ್ವಹಿಸಿ, ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.

Advertisement

ಸಮಾರಂಭದಲ್ಲಿ ಮಂಡಳದ ಹಿರಿಯ ಸದಸ್ಯರಾದ ಭೋಜ ಎಸ್‌. ಶೆಟ್ಟಿ, ಕೆ. ಕೆ. ಮಧುಸೂದನ್‌, ಶಂಕರ್‌ ಕೆ. ಕೋಟ್ಯಾನ್‌, ಆನಂದ ಎಸ್‌. ಬಂಗೇರ, ದಿನೇಶ್‌ ಪ್ರಭು, ಜಯರಾಮ ಕುಕ್ಯಾನ್‌ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಮ್ಮಾನಿತರಾದ ಆನಂದ ಬಂಗೇರ, ದಿನೇಶ್‌ ಪ್ರಭು, ಭೋಜ ಶೆಟ್ಟಿ ಇವರು ಮಾತನಾಡಿದರು.
ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಭಂಡಾರಿ, ಯಕ್ಷಕಲಾ ಸಂಸ್ಥೆ ಜಗದಂಬಾ ಮಂದಿರ ಡೊಂಬಿವಲಿ ಅಧ್ಯಕ್ಷ ಹರೀಶ್‌ ಶೆಟ್ಟಿ, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ  ರವೀಂದ್ರ ಶೆಟ್ಟಿ, ಬಂಟರ  ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ, ಸಮಾಜ ಸೇವಕ ರೋಹಿತ್‌ ಆರ್‌. ಸುವರ್ಣ ಪಲಿಮಾರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರವಿ ಸನಿಲ್‌, ಸೋಮನಾಥ ಪೂಜಾರಿ, ಶೇಖರ್‌ ಪುತ್ರನ್‌, ಪ್ರಕಾಶ್‌ ಭಟ್‌ ಕಾನಂಗಿ, ಶೇಖರ್‌ ಕೋಟ್ಯಾನ್‌, ಶೇಖರ್‌ ಪುತ್ರನ್‌ ಮೊದಲಾದವರು ಉಪಸ್ಥಿತರಿದ್ದರು. ಗಣ್ಯರುಗಳಾದ ಅಶೋಕ್‌ ದಾಸು ಶೆಟ್ಟಿ, ಮೋಹನ್‌ ಸಾಲ್ಯಾನ್‌, ದೇವದಾಸ್‌ ಕುಲಾಲ್‌, ನ್ಯಾಯವಾದಿ ಆರ್‌. ಎಂ. ಭಂಡಾರಿ, ಸನತ್‌ ಕುಮಾರ್‌ ಜೈನ್‌, ರಾಜೇಶ್‌ ಕೋಟ್ಯಾನ್‌, ರಮೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಜ್ರಮಹೋತ್ಸವದ ಅಂಗವಾಗಿ  ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ರಿತಿಕಾ ಸುವರ್ಣ, ಆರ್‍ನಾ ಪುರಂದರ ಕೋಟ್ಯಾನ್‌, ಸವಿತಾ ಸಾಲ್ಯಾನ್‌ ಬಳಗ, ರಾಧಾಕೃಷ್ಣ ಭಜನ ಮಂಡಳ ಮಹಿಳಾ ವಿಭಾಗ, ಜಗದಂಬಾ ಮಂದಿರದ ಯುವ ವಿಭಾಗದಿಂದ ನೃತ್ಯ ರೂಪಕ, ನೃತ್ಯ ವೈವಿಧ್ಯ ನಡೆಯಿತು. ನಂದಿನಿ 
ಆರ್ಟ್ಸ್ ಹೆಜಮಾಡಿ ಬಳಗದವರಿಂದ ಶಾಂಭವಿ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಸಭಾಗೃಹವು ಕಿಕ್ಕಿರಿದು ತುಂಬಿತ್ತು.       

ಹದಿನೈದು ವರ್ಷಗಳ ಹಿಂದೆ ಶ್ರೀ ರಾಧಾಕೃಷ್ಣ ಭಜನ ಮಂಡಳದ ಸಮಾರಂಭಕ್ಕೆ ಅತಿಥಿಯಾಗಿ ಬಂದ ನಾನು ಈ ಮಂಡಳದ ಕಾರ್ಯವೈಖರಿ ಮೆಚ್ಚಿ ಸದಸ್ಯನಾದೆ. ಅಷ್ಟೇ ಅಲ್ಲಾ ಕಳೆದ 11 ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು, ಭಕ್ತಿ ಮಾರ್ಗದ ಸಹಾಯ, ಸಹಕಾರದಿಂದಲೇ ನಮ್ಮ ಈ ಸಂಸ್ಥೆ ಇಂದು  ತುಳು-ಕನ್ನಡಿಗರ ಶ್ರದ್ಧಾ ಕೇಂದ್ರವಾಗಿದೆ. ನಮ್ಮ ಭವ್ಯ ಮಂದಿರದ ಕನಸು ನನಸಾಗಲು ತುಳು-ಕನ್ನಡಿಗರು, ಸಹೃದಯ ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ 
– ಎಸ್‌. ಟಿ. ವಿಜಯಕುಮಾರ್‌ (ಅಧ್ಯಕ್ಷರು : ಶ್ರೀ ರಾಧಾಕೃಷ್ಣ ಭಜನ ಮಂಡಳಿ ಡೊಂಬಿವಲಿ).

ಆರು ದಶಕಗಳ ಹಿಂದೆ ನಮ್ಮ ಹಿರಿಯರು ನೆಟ್ಟ ಸಸಿ ಇಂದು ವಿಶಾಲ ವಟವೃಕ್ಷವಾಗಿ ಬೆಳೆದು ನಿಂತಿದೆ. ಸ್ವಂತ ನಿವೇಶನದಲ್ಲಿ ಭವ್ಯ ಮಂದಿರ ನಿರ್ಮಾಣದ ರೂಪುರೇಷೆ ಸಿದ್ಧವಾಗಿದ್ದು, ಭಕ್ತರ ಸಹಾಯ-ಸಹಕಾರದಿಂದ ಭವ್ಯ ಮಂದಿರ ನಿರ್ಮಾಣದ ಕನಸು ನನಸಾಗಲಿದೆ 
– ವೇ| ಮೂ| ಪ್ರಕಾಶ್‌ ಭಟ್‌ ಕಾನಂಗಿ  
(ಪ್ರಧಾನ ಅರ್ಚಕರು : ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಶನೀಶ್ವರ ಮಂದಿರ)

ಚಿತ್ರ,ವರದಿ: ಗುರಾಜ್‌ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next