ಬೆಂಗಳೂರು: ತೀವ್ರ ಚರ್ಚೆಗೆ ಗುರಿಯಾಗಿದ್ದ ವಿಧಾನ ಸೌಧ ವಜ್ರಮಹೋತ್ಸವದ ಅದ್ಧೂರಿ ಆಚರಣೆಗೆ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ರೇಕ್ ಹಾಕಿದ್ದಾರೆ.
ಮಂಗಳವಾರ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಸಿಎಂ ಸಿದ್ದರಾಮಯ್ಯ ‘ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ವೇಳೆಯಲ್ಲಿ ಅದ್ಧೂರಿ ಆಚರಣೆ ನಡೆಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದು ಸರಿಯಲ್ಲ’ ಎಂದರು.
ಕಾರ್ಯಕ್ರಮಕ್ಕಾಗಿ ವಿಧಾನಸಭೆ ಸಚಿವಾಲಯವು ಹಣಕಾಸು ಇಲಾಖೆಗೆ ಪ್ರಸ್ತಾಪವ ಸಲ್ಲಿಸಿದ್ದ 26 ಕೋಟಿ ರೂಪಾಯಿ ನೀಡಲು ಸಾಧ್ಯವಿಲ್ಲ ಎಂದಿರುವ ಸಿಎಂ, ಕಾರ್ಯಕ್ರಮದಲ್ಲಿ ಶಾಸಕರಿಗೆ ಯಾವುದೇ ಉಡುಗೊರೆ ನೀಡದೇ ಇರುವ ತೀರ್ಮಾನಕ್ಕೆ ಬಂದಿದ್ದಾರೆ. ಕಾರ್ಯಕ್ರಮವನ್ನು 1 ದಿನಕ್ಕೆ ನಿಗದಿ ಮಾಡಿ 10 ಕೋಟಿ ರೂಪಾಯಿ ಖರ್ಚಿನೊಳಗೆ ಕಾರ್ಯಕ್ರಮ ಮುಗಿಸಲು ತೀರ್ಮಾನಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್ ಕೆ.ಬಿ.ಕೋಳಿವಾಡ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಮಾತುಕತೆ ನಡೆಸಿ ಅದ್ಧೂರಿ ಅಚರಣೆ ನಡೆಸದೆ ಇರುವ ತೀರ್ಮಾನ ಕೈಗೊಂಡು ವಿಪಕ್ಷಗಳು ಸೇರಿದಂತೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಕೆ.ಬಿ.ಕೋಳಿವಾಡ ಅವರು ಮಾತನಾಡಿ ‘ಕಾರ್ಯಕ್ರಮ ಅದ್ದೂರಿಯೋ, ಏನು ಎನ್ನುವುದನ್ನು ಕಾದು ನೋಡಿ, ಹೇಗೆ ಮಾಡುತ್ತೇವೆ ನೋಡಿ’ ಎಂದರು.