ಧಾರವಾಡ: ಮಾಳಮಡ್ಡಿಯ ಪ್ರಹ್ಲಾದ ವಿದ್ಯಾರ್ಥಿ ನಿಲಯದ ವಜ್ರ ಮಹೋತ್ಸವ ಕಾರ್ಯಕ್ರಮ ಶ್ರೀ ವನವಾಸಿ ರಾಮಮಂದಿರದಲ್ಲಿ ಜು. 14ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಸ್.ಆರ್. ಕೌಲಗುಡ್ಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಖಿಲ ಭಾರತ ಮಧ್ವ ಮಹಾ ಮಂಡಳ, ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನ, ಪ್ರಹ್ಲಾದ ವಿದ್ಯಾರ್ಥಿ ನಿಲಯ ಹಿಂದಿನ ವಿದ್ಯಾರ್ಥಿಗಳ ಸಂಘ ಹಾಗೂ ನಿಲಯ ಫೌಂಡೇಷನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಸಂಶೋಧಕ ಡಾ| ಪ್ರಭಂಜನಾಚಾರ್ಯ ವ್ಯಾಸನಕೆರೆ, ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ, ಧಾರವಾಡ ತಾಲೂಕಾ ಬ್ರಾಹ್ಮಣ ಸಭಾದ ಅಧ್ಯಕ್ಷ ರಾಜೀವ ಪಾಟೀಲ ಕುಲಕರ್ಣಿ ಆಗಮಿಸಲಿದ್ದಾರೆ. ಅಖಿಲ ಭಾರತ ಮಧ್ವ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಡಾ| ಎಚ್.ಎನ್. ನಾರಾಯಣರಾವ್, ವಿ.ಆರ್. ಮಠದ ಸೇರಿದಂತೆ ನಿಲಯದ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಜೆ 4 ಗಂಟೆಗೆ ಶ್ರೀಗಳ ಶೋಭಾಯಾತ್ರೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 1955ರಲ್ಲಿ ಪ್ರಹ್ಲಾದ ವಿದ್ಯಾರ್ಥಿ ನಿಲಯ ಸ್ಥಾಪಿಸುವ ನಿರ್ಣಯ ಕೈಗೊಂಡಾಗ ಅವರಿಗೆ ಕೇವಲ 24 ವರ್ಷವಾಗಿತ್ತು. ಶ್ರೀಗಳ ಸಂಕಲ್ಪದಿಂದ ನಿಲಯ ಸ್ಥಾಪನೆಗೊಂಡು ಇದೀಗ ವಜ್ರ ಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ. ಶ್ರೀಗಳು ಸ್ಥಾಪಿಸಿದ ಮೊದಲ ಸಂಸ್ಥೆ ಇದಾಗಿದೆ. ಈ ನಿಲಯದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಂಡು ವಿದ್ಯೆ ಪಡೆದುಕೊಂಡಿದ್ದಾರೆ. ಪ್ರಭಂಜನಾಚಾರ್ಯ ವ್ಯಾಸನಕೆರೆ, ಪಂ| ನಾರಾಯಣಾಚಾರ್ಯ ಧೂಳಖೇಡ ಸೇರಿದಂತೆ ಮೊದಲಾದ ಶ್ರೇಷ್ಠರು ಈ ನಿಲಯದ ವಿದ್ಯಾರ್ಥಿಗಳಾಗಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
ನಿಲಯ ಫೌಂಡೇಶನ್: ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಈ 60 ವರ್ಷಗಳಲ್ಲಿ ಓದಿ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿಂದಿನ ವಿದ್ಯಾರ್ಥಿಗಳಲ್ಲಿ ಕೆಲವರು ಕೂಡಿಕೊಂಡು 15 ವರ್ಷದ ಹಿಂದೆ ‘ನಿಲಯ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟು ಹಾಕಿದರು. ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರತಿ ವರ್ಷ ನಿಲಯಕ್ಕೆ 1500 ರೂ. ನೀಡುವುದರ ಮೂಲಕ ಅಕ್ಷಯ ಪಾತ್ರೆ ಯೋಜನೆಯಲ್ಲಿ ಭಾಗವಹಿಸಬಹುದು. ಇದರಿಂದ ನಿಲಯದ ವಿದ್ಯಾರ್ಥಿಗಳ ಮತ್ತು ಅವರ ಪಾಲಕರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ದಾನಿಗಳು ಸೂಚಿಸಿದ ದಿನದಂದು ಈ ಹಣ ಉಪಯೋಗಿಸಲಾಗುತ್ತದೆ ಎಂದು ಡಾ| ಕೌಲಗುಡ್ಡ ತಿಳಿಸಿದರು.
ಹಳೇ ವಿದ್ಯಾರ್ಥಿ ಹ.ವೆ. ಕಾಖಂಡಕಿ ಮಾತನಾಡಿ, ಸದ್ಯ ನಿಲಯದಲ್ಲಿ 60 ವಿದ್ಯಾರ್ಥಿಗಳಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಿಲಯ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ವಜ್ರ ಮಹೋತ್ಸವ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಗುರುರಾವ್ ಕುಲಕರ್ಣಿ (ಮೊ:9980541495), ವಿದ್ಯಾಸಾಗರ ದೀಕ್ಷಿತ (ಮೊ:8310372548), ಮಹೇಶ ದೇಶಪಾಂಡೆ (ಮೊ:9448064123), ರಂಗನಾಥ ಯಾದವಾಡ (ಮೊ:9448049909) ಆನಂದತೀರ್ಥ ಗುತ್ತಲ (ಮೊ:9845968032), ಆರ್.ವೈ. ಕಟ್ಟಿ (ಮೊ: 9448821802) ಸಂಪರ್ಕಿಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿಲಯ ಧರ್ಮದರ್ಶಿ ಕೆ.ಆರ್. ದೇಶಪಾಂಡೆ, ವಿದ್ಯಾಸಾಗರ ದೀಕ್ಷಿತ, ಸಮೀರ ಜೋಶಿ ಇದ್ದರು.