ಶಿರಸಿ: ಡಯಾಲಿಸಿಸ್ ರೋಗಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿ ಒಂದು ವಾರ ಕಳೆದರೂ ಎಲ್ಲಿಯೂ ಚಿಕಿತ್ಸೆ ಸಿಗದೆ ಪುನಃ ಮನೆಗೆ ಕರೆದುಕೊಂಡು ಹೋದ ಅಮಾನವೀಯ ಘಟನೆ ಶಿರಸಿಯಲ್ಲಿ ನಡೆದಿದ್ದು, ರೋಗಿ ಕುಟುಂಬದವರ ಕಣ್ಣ ಮುಂದೆಯೇ ನರಳುವಂಥ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಹನುಮಂತಿಯ 53 ವರ್ಷದ ವ್ಯಕ್ತಿಯೊಬ್ಬರು ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿದ್ದು, ನಂತರ ಅವರಿಗೆ ಎಲ್ಲಿಯೂ ಡಯಾಲಿಸೀಸ್ ಸೇವೆ ಲಭ್ಯವಾಗಿಲ್ಲ. ಇದರಿಂದ ವ್ಯಕ್ತಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅನಿವಾರ್ಯವಾಗಿ ಮನೆಗೆ ಕರೆದುಕೊಂಡು ಹೋಗಲಾಗಿದೆ.
ಕೋವಿಡ್ ಸೋಂಕು ಹರಡಿದ ಕಾರಣ ಶಿರಸಿ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ರೋಗಿಗೆ ಡಯಾಲಿಸೀಸ್ ಸೇವೆ ನೀಡಲು ನಿರಾಕರಿಸಿದ್ದಾರೆ. ತದ ನಂತರ ರೋಗಿಯನ್ನು ತಾತ್ಕಾಲಿಕ ಸೇವೆಗಾಗಿ ಶಿರಸಿಯ ಸ್ಕಾನ್ ಸೆಂಟರ್‌ಗೆ ಸೇರಿಸಲಾಗಿದೆ. ಆದರೆ ಅಲ್ಲಿ ಡಯಾಲಿಸೀಸ್ ಸೇವೆ ಇರದ ಕಾರಣ ಜಿಲ್ಲಾಡಳಿತದ ಮೊರೆ ಹೋಗಲಾಗಿದೆ. ಆದರೆ ಎಲ್ಲಿಯೂ ಸೇವೆ ಸಿಗದೇ ಈಗ ಪುನಃ ಮನೆಗೆ ಕರೆದುಕೊಂಡು ಹೋಗಲಾಗಿದ್ದು, ಕುಟುಂಬದವರ ಎದುರೇ ರೋಗಿ ಒದ್ದಾಡುತ್ತಿದ್ದರು ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಸಂತೋಷ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿದ್ದು, ನಂತರ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ನಂತರ ನಾವು ಖುದ್ದು ಜಿಲ್ಲಾಡಳಿತ ಸಂಪರ್ಕಿಸಿದರೂ ಕೇವಲ ಆಶ್ವಾಸನೆ ಮಾತ್ರ ದೊರೆಯಿತು. ಡಿಎಚ್‌ಒ ಸಹ ಡಯಾಲಿಸೀಸ್ ಸೇವೆ ನೀಡಲು ನಿರಾಕರಿಸಿದರು. ಇದರಿಂದ ರೋಗಿ ಸ್ಥಿತಿ ತೀರಾ ಹದಗೆಟ್ಟಿದ್ದು, ಹಾಸಿಗೆ ತುಂಬಿಕೊಂಡು ಅವರನ್ನು ಕರೆದುಕೊಂಡು ಹೋಗುವಂತಾಗಿದೆ.
16 ಪಾಸಿಟಿವ್-ಇಬ್ಬರ ಸಾವು
ಹೊನ್ನಾವರ: ತಾಲೂಕಿನಲ್ಲಿ ಬುಧವಾರ 16 ಜನರಿಗೆ ಹೊಸದಾಗಿ ಸೋಂಕು ಕಂಡುಬಂದಿದೆ. ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಯಾಗಿದ್ದು, ಹೊಸದಾಗಿ ಇಬ್ಬರು ಸೇರ್ಪಡೆಯಾಗಿದ್ದಾರೆ. 98 ಜನ ಮನೆಯಲ್ಲಿ ಏಕಾಂತದಲ್ಲಿ ಉಳಿದುಕೊಂಡಿದ್ದು, ಆಸ್ಪತ್ರೆಯಲ್ಲಿ 17 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ತಾಲೂಕಿನ ಇಬ್ಬರು ಮೃತಪಟ್ಟಿದ್ದಾರೆ.