Advertisement

ಡಯಾಲಿಸಿಸ್‌ ಕೇಂದ್ರ ಕಗ್ಗಂಟು

10:48 AM Feb 14, 2020 | Suhan S |

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಂತಲಾನಗರ ವಾರ್ಡ್‌ನಲ್ಲಿ ಮೂತ್ರಪಿಂಡ ಡಯಾಲಿಸಿಸ್‌ (ಕೃತಕ ಶುದ್ಧೀಕರಣ)ಕೇಂದ್ರ ನಿರ್ಮಿಸುವ ಯೋಜನೆ ನಾನಾ ಕಾರಣಗಳಿಂದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

Advertisement

ಬೆಂಗಳೂರು ಪುಟ್ಬಾಲ್‌ ಕ್ರೀಡಾಂಗಣದ ಮುಂಭಾಗದಲ್ಲಿರುವ ಪಾಲಿಕೆಯ ನಿವೇಶನದಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ 2018-19ನೇ ಚಿಂತನೆ ನಡೆದಿತ್ತು. 2019-20ನೇ ಸಾಲಿನಲ್ಲಿ ಪಾಲಿಕೆ ಈ ಯೋಜನೆಗೆ 2 ಕೋಟಿ ರೂ. ಅನುದಾನವನ್ನೂ ಮೀಸಲಿಟ್ಟಿತ್ತು. ಆದರೆ, ಶಾಂತಿನಗರದ ಶಾಸಕರಾದ ಎನ್‌.ಎ.ಹ್ಯಾರಿಸ್‌ ಸಂಚಾರ ಪೊಲೀಸ್‌ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡುವ ವಿಚಾರ ಪ್ರಸ್ತಾಪಿಸಿದ್ದರು. ಇದು ಯೋಜನೆ ಕಗ್ಗಂಟಾಗಲು ಕಾರಣವಾಯಿತು ಎನ್ನಲಾಗಿದೆ.

ಚರ್ಚೆ ನಡೆಸಿದ ನಂತರ ನೆಲ ಮಹಡಿಯಲ್ಲಿ ಡಯಾಲಿಸಿಸ್‌ ಕೇಂದ್ರ ಹಾಗೂ ಮೊದಲನೆಯ ಮಹಡಿಯಲ್ಲಿ ಸಂಚಾರ ಪೊಲೀಸರ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡುವುದು ಎಂದು ಅಂತಿಮವಾಗಿತ್ತು. ಇದಾದ ಮೇಲೂ ಈ ಭಾಗದಲ್ಲಿ ಡಯಾಲಿಸಿಸ್‌ ಸೆಂಟರ್‌ ಸ್ಥಾಪನೆ ಮಾಡುವ ಕಾಮಗಾರಿ ಚುರುಕು ಪಡೆದುಕೊಳ್ಳಲಿಲ್ಲ.

ಪ್ರತಿಷ್ಠೆಯೇ ಸಮಸ್ಯೆಗೆ ಮೂಲ ಕಾರಣ: ಈ ಭಾಗದಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳ ಆರೋಗ್ಯ ಕಾಪಾಡುವಂತಹ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವುದರ ಹಿಂದೆ “ರಾಜಕೀಯ ಇಚ್ಛಾಶಕ್ತಿಯೂ ಇದೆ’ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಮಾಜಿ ಮೇಯರ್‌ ಹೇಳಿದ್ದಾರೆ. ಇಲ್ಲಿ ಡಯಾಲಿಸಿಸ್‌ ಸೆಂಟರ್‌ ಸ್ಥಾಪನೆಯಾದರೆ ಶಾಸಕರ ವರ್ಚಸ್ಸು ಕಡಿಮೆಯಾಗಲಿದೆ ಅಥವಾ ಡಯಾಲಿಸಿಸ್‌ ಸೆಂಟರ್‌ ಸ್ಥಾಪನೆ ಮಾಡಿದ ಶ್ರೇಯಸ್ಸು ಬಿಜೆಪಿ ಸದಸ್ಯರಿಗೆ ಸಿಗಲಿದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ನ ಶಾಸಕ ಹ್ಯಾರಿಸ್‌ ಅವರು ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ಶಾಸಕರು ತಳ್ಳಿಹಾಕಿದ್ದಾರೆ.

ಈ ಹಿಂದೆ ಬಿಬಿಎಂಪಿ ಆಯುಕ್ತರಾದ ಮಂಜುನಾಥ್‌ ಪ್ರಸಾದ್‌ ಅವರು ಶಾಸಕರಾದ ಎನ್‌.ಎ.ಹ್ಯಾರೀಸ್‌ ಹಾಗೂ ಪಾಲಿಕೆ ಸದಸ್ಯರಾದ ಎಂ.ಬಿ. ದ್ವಾರಕನಾಥ್‌ ಇಬ್ಬರೂ ಒಪ್ಪಿಕೊಳ್ಳುವಂತಹ ಸರಳ ಸೂತ್ರವನ್ನು ಸೂಚಿಸಿದ್ದರು. ನೆಲ ಮಹಡಿಯಲ್ಲಿ ಡಯಾಲಿಸಿಸ್‌ ಸೆಂಟರ್‌ ಹಾಗೂ ಮೊದಲೆಯ ಮಹಡಿಯಲ್ಲಿ ಸಂಚಾರ ನಿಯಂತ್ರಣ ಕೊಠಡಿ ಎಂದು ಅಂತಿಮವಾಗಿತ್ತು. ಇದಾದ ನಂತರವೂ ಯೋಜನೆ ಪ್ರಾರಂಭಕ್ಕೆ ವಿಘ್ನಗಳು ತಪ್ಪುತ್ತಿಲ್ಲ. ಹೀಗಾಗಿ, ಇಂದಿಗೂ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಕನಸಾಗೇ ಉಳಿದಿದೆ.

Advertisement

ದೇವಸ್ಥಾನದವರಿಂದ ಸಮಸ್ಯೆ?: ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ಈಗ ಇಲ್ಲಿನ ದೇವಸ್ಥಾನವೊಂದರ ಮಾಲೀಕರಿಂದ ತೊಂದರೆ ಉಂಟಾಗುತ್ತಿದೆ ಎಂದು ಪಾಲಿಕೆ ಸದಸ್ಯರಾದ ಎಂ.ಬಿ.ದ್ವಾರಕನಾಥ್‌ ಆರೋಪಿಸಿದ್ದಾರೆ. ಉದ್ದೇಶಿತ ಕೇಂದ್ರ ಸ್ಥಾಪನೆ ಮಾಡುವ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಡಯಾಲಿಸಿಸ್‌ ಕೇಂದ್ರ ಯೋಜನೆಗೆ ಹಿನ್ನೆಡೆ ಉಂಟಾಗಿದೆ ಎಂದು ಹೇಳಿದ್ದಾರೆ.

ಆರೋಗ್ಯ ಕೇಂದ್ರಕ್ಕೂ ಬಿಡುಗಡೆ ಭಾಗ್ಯವಿಲ್ಲ! : ಒಂದೆಡೆ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಯೋಜನೆ ಕಗ್ಗಂಟಾಗಿದ್ದಾರೆ. ಮತ್ತೂಂದೆಡೆ ಇದೇ ವಾರ್ಡ್‌ನ ಮಾರ್ಕ್‌ ಹ್ಯಾಮ್‌ ರಸ್ತೆಯ 7ನೇ ಮುಖ್ಯರಸ್ತೆಯಲ್ಲಿ ಪಾಲಿಕೆ ವತಿಯಿಂದ ಎರಡು ಅಂತಸ್ತಿನ “ನಗರ ಆರೋಗ್ಯ ಕೇಂದ್ರ’ ನಿರ್ಮಾಣ ಮಾಡಿ ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಎರಡು ವರ್ಷಗಳ ಹಿಂದೆ ಮಾರ್ಕ್‌ಹ್ಯಾಮ್‌ ರಸ್ತೆಯ 7ನೇ ಮುಖ್ಯರಸ್ತೆಯಲ್ಲಿ ಎರಡು ಅಂತಸ್ತಿನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಕೆಲಸ ಪ್ರಾರಂಭಿಸಲಾಗಿತ್ತು. ವರ್ಷದ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದರೂ ಸೇವೆ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡುವುದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಜಾಗಕ್ಕೆ ಸಂಬಂಧಿಸಿದಂತೆ ಗೊಂದಲ ಇರುವುದರಿಂದ ಸದ್ಯ ಯಾವುದೇ ಕಾಮಗಾರಿ ಪ್ರಾರಂಭಿಸಿಲ್ಲ.  –ಎನ್‌.. ಹ್ಯಾರೀಸ್ಶಾಸಕ

ನಾನು ಮೇಯರ್‌ ಆಗಿ ಆಯ್ಕೆಯಾದ ಮೇಲೆ ಡಯಾಲಿಸಿಸ್‌ ಕೇಂದ್ರ ಯೋಜನೆಯ ಬಗ್ಗೆ ಚರ್ಚೆಯಾಗಿಲ್ಲ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ.  –ಎಂ.ಗೌತಮ್ಕುಮಾರ್‌, ಮೇಯರ್

 

-ಹಿತೇಶ್ವೈ

Advertisement

Udayavani is now on Telegram. Click here to join our channel and stay updated with the latest news.

Next