ಮೈಸೂರು: ಮೈಸೂರು ಜಯದೇವ ಹೃದ್ರೋಗ ಸಂಸ್ಥೆಗೆ ಬ್ಯಾಂಕ್‌ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.ಕೊಡುಗೆಯಾಗಿ ನೀಡಿರುವ ಸುಮಾರು 54.25 ಲಕ್ಷ ರೂ. ವೆಚ್ಚದ ಒಂದು ಡಯಾಲಿಸೀಸ್ ಯಂತ್ರ ಹಾಗೂ 2 ಎಕೋ ಯಂತ್ರಗಳನ್ನು ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಾ.ಮಂಜುನಾಥ್, ಮೂತ್ರಪಿಂಡ ಸಮಸ್ಯೆ ಇದ್ದವರಿಗೆ ತೆರೆದ ಹೃದಯಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ ಡಯಾಲಿಸೀಸ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ರೋಗಿಗಳನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಈ ಯಂತ್ರ ಉಪಯುಕ್ತವಾಗಿದೆ ಎಂದರು.
ಸೇವೆ ಚೆನ್ನಾಗಿರಬೇಕು: ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು 600 ರಿಂದ 700 ಹೊರರೋಗಿಗಳು ಬರುತ್ತಿದ್ದಾರೆ. 300 ರಿಂದ 305 ಜನರಿಗೆ ಎಕೋ ಮಾಡಬೇಕಾಗುತ್ತದೆ. ಪ್ರತಿದಿನ 40 ರಿಂದ 50 ಜನರಿಗೆ ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದೇವೆ. 3 ಜನರಿಗೆ ತೆರೆದ ಹೃದಯಶಸ್ತ್ರ ಚಿಕಿತ್ಸೆ ಮಾಡುತ್ತಿದ್ದೇವೆ. 100 ಜನ ನುರಿತ ತಜ್ಞರು ನಮ್ಮ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಆಸ್ಪತ್ರೆಯ ಕಟ್ಟಡ ಚೆನ್ನಾಗಿದ್ದರೆ ಸಾಲದು, ರೋಗಿಗೆ ಕೊಡುವ ಸೇವೆ ಚೆನ್ನಾಗಿರಬೇಕು ಎಂದರು.
ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಿ: ಇತ್ತೀಚಿಗೆ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಹೃದಯ ಚಿಕಿತ್ಸೆಗೆ ಕರೆತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ 40 ವರ್ಷ ಮೇಲ್ಪಟ್ಟ ಗಂಡಸರು, 45 ಮೇಲ್ಪಟ್ಟ ಹೆಂಗಸರು ಪ್ರತಿವರ್ಷ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ವಾಯುಮಾಲಿನ್ಯ, ಒತ್ತಡ ಕಡಿಮೆ ಮಾಡಿ, ಮೊಬೈಲ್, ಫೇಸ್‌ಬುಕ್‌ನಿಂದ ದೂರವಿದ್ದು ನಿಯಮಿತ ಆಹಾರ, ವ್ಯಾಯಾಮ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ಗುಣಮಟ್ಟದ ಚಿಕಿತ್ಸೆ: ಬ್ಯಾಂಕ್ ನೋಟ್ ಪೇಪರ್ ಮಿಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥನ್ ಮಾತನಾಡಿ, ಸಮಾಜದ ಎಲ್ಲಾ ವರ್ಗಗಳ ಬಡಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಜಯದೇವ ಆಸ್ಪತ್ರೆ ಕಾರ್ಯ ಮೆಚ್ಚುವಂತದ್ದು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್‌ನ ಪ್ರಧಾನ ವ್ಯವಸ್ಥಾಪಕ ಧರಣಿಕುಮಾರ, ಉಪ ಪ್ರಧಾನ ವ್ಯವಸ್ಥಾಪಕ ಎಸ್. ಸುಂದರರಾಜ್, ಚೇತನ್ ಎಚ್.ಆರ್., ಲಕ್ಷಿಶಬಾಬು, ವಾದಿರಾಜ ಕುಲಕರ್ಣಿ, ಎಸ್.ಎ.ರಾಘವೇಂದ್ರ, ವೈದ್ಯಕೀಯ ಅಧೀಕ್ಷಕ ಡಾ. ಸದಾನಂದ್, ಸಿಎಂಓ ಡಾ.ಶಂಕರ್‌ಸಿರಾ, ಡಾ. ಪಾಂಡುರಂಗಯ್ಯ, ಡಾ.ಹರ್ಷಬಸಪ್ಪ, ಡಾ.ರಾಜೀತ್, ಡಾ.ದೇವರಾಜ್, ಡಾ. ವಿಶ್ವನಾಥ್, ಡಾ.ಮಂಜುನಾಥ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಓ ವಾಣಿ ಮೋಹನ್, ಸೈಯದ್ ಹಾಜರಿದ್ದರು.