ಚಿತ್ರವೊಂದಕ್ಕೆ ಒಳ್ಳೆಯ ಬರಹಗಾರ ಕೂಡಾ ಮುಖ್ಯವಾಗುತ್ತದೆ. ಅದೇ ಕಾರಣದಿಂದ ಬಹುತೇಕರು ಸ್ಕ್ರಿಪ್ಟ್ ಗೆ, ಬರಹಗಾರನಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಸದ್ಯ ಕನ್ನಡ ಚಿತ್ರರಂಗದ ಬರಹಗಾರರ ಸಾಲಿನಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವ ಹೆಸರು ಮಾಸ್ತಿ ಅವರದು.
ಹೌದು, ಮಾಸ್-ಕ್ಲಾಸ್ ಎರಡೂ ಕೆಟಗರಿಯ ಸಿನಿಮಾಗಳಿಗೆ ಸಂಭಾಷಣೆಗೆ ಬರೆದು ಸೈ ಎನಿಸಿಕೊಂಡವರು ಮಾಸ್ತಿ. ಚಿತ್ರರಂಗಕ್ಕೆ ಸಂಭಾಷಣೆಕಾರರಾಗಿ ಎಂಟ್ರಿಕೊಟ್ಟ ದಿನದಿಂದಲೇ ತಮ್ಮ ಬರವಣಿಗೆಯ ಮೂಲಕ ಸ್ಯಾಂಡಲ್‌ವುಡ್ ಸಿನಿಮಂದಿಯ ಗಮನ ಸೆಳೆದು ಬಿಝಿ ಡೈಲಾಗ್ ರೈಟರ್ ಆಗಿರುವ ಮಾಸ್ತಿ ಈಗ “ಬ್ಯಾಡ್ ಮ್ಯಾನರ್ಸ್’ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
ಈಗಾಗಲೆ “ಕಡ್ಡಿಪುಡಿ’, “ಟಗರು’, “ಸಲಗ’, “ಅಯೋಗ್ಯ’, “ಕಾಲೇಜ್ ಕುಮಾರ’, “ಗುರು ಶಿಷ್ಯರು’ ಥರ ಸಿನಿಮಾಗಳಿಗೂ ಸಂಭಾಷಣೆ ಬರೆದು ಮೆಚ್ಚುಗೆ ಪಡೆದಿದ್ದಾರೆ. ಈಗ “ಬ್ಯಾಡ್ ಮ್ಯಾನರ್ಸ್’ ಸರದಿ. ಈ ಕುರಿತು ಮಾತನಾಡುವ ಮಾಸ್ತಿ, “ಬ್ಯಾಡ್ ಮ್ಯಾನರ್ಸ್’ ಚಿತ್ರದ ಸಂಭಾಷಣೆ ಬರೆದಿದ್ದೇನೆ . ನನ್ನೊಂದಿಗೆ ಆ ಚಿತ್ರದ ಸಹ ನಿರ್ದೇಶಕಿ ಅಮ್ರಿ ಸಹ ಬರವಣಿಗೆಯಲ್ಲಿ ಕೈಜೋಡಿಸಿದ್ದಾರೆ.
ನಿರ್ದೇಶಕರು ತೆರೆಯ ಮೇಲೆ ಬದುಕಿನ ಮತ್ತು ಬಂದೂಕಿನ ಹಸಿವನ್ನು ಹಸಿಹಸಿಯಾಗಿ ತೋರಿಸಿದ್ದಾರೆ. ಸಂಭಾಷಣೆಕಾರನಾಗಿ ಸೂರಿಯವರ ಕಾಂಬಿನೇಷನ್‌ನಲ್ಲಿ ನನಗಿದು ಮೂರನೆಯ ಚಿತ್ರ . ಶಿವಣ್ಣನ ಕಡ್ಡೀಪುಡಿ , ಟಗರು , ಮತ್ತೆ ಈಗ ತೆರೆಕಾಣಲಿರುವ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ . ಸೂರಿಯವರ ದುನಿಯಾ ಸಿನಿಮಾದಿಂದಲೂ ಅವರ ಜೊತೆ ಇದೀನಿ. ಸೂರಿ ನನಗೆ ಕೆಲಸ ಕೊಡಿಸಿದ ಗೆಳೆಯನೂ ಹೌದು, ಕೆಲಸ ಕಲಿಸಿದ ಗುರುವೂ ಹೌದು . ನನಗೆ ಸೂರಿಯವರ ಜೊತೆ ಕೆಲಸ ಮಾಡುವುದು ತುಂಬಾನೇ ವಿಶೇಷ . ಅವರೊಬ್ಬ ಹೆಸರಾಂತ ನಿರ್ದೆಶಕರಾಗಿದ್ದೂ ಖುದ್ದು ಬರಹಗಾರನಾಗಿದ್ದೂ ನನಗೆ ಸಂಭಾಷಣೆಯ ಜವಾಬ್ದಾರಿ ವಹಿಸೋದು ವೈಯಕ್ತಿಕವಾಗಿ ನನಗೆ ಖುಷಿ ಮತ್ತೆ ಹೆಮ್ಮೆಯ ವಿಷಯ . ಶ್ರೀನಿ ನಿರ್ದೆಶನದ ಶಿವಣ್ಣನ ಘೋಸ್ಟ್ ಚಿತ್ರದ ಗೆಲುವು ನನಗೆ ಇನ್ನೂ ಒಂದಷ್ಟು ಚಿತ್ರಗಳನ್ನು ಬರೆಯಲಿಕ್ಕೆ ಹುಮ್ಮಸ್ಸು ತುಂಬಿದೆ. ಮುಂದೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮ , ದರ್ಶನ್ ಅವರು ನಟಿಸಿರುವ ಕಾಟೇರ ಚಿತ್ರದ ಅಂತಿಮ ಹಂತದ ಕೆಲಸಗಳು ಭರದಿಂದ ನಡೆಯುತ್ತಲಿವೆ’ ಎನ್ನುತ್ತಾರೆ ಮಾಸ್ತಿ.