Advertisement

ಡಯಲ್‌ *121#  ಸಾವಿನ ಮನೆಯ ಕರಾಳ ಕಥೆ

11:38 AM Sep 08, 2017 | |

ಥ್ರಿಲ್ಲರ್‌ ಸಿನಿಮಾಗಳ ಸಾಲಿಗೆ ಈಗ ಮತ್ತೂಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಅದು “*121#’. ಹೌದು, ಹೀಗೊಂದು ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಈ ಚಿತ್ರವನ್ನು ದೋಸ್ತಿ ವಿ ಆನಂದ್‌ ನಿರ್ದೇಶಿಸಿದ್ದಾರೆ. ಈ ಹಿಂದೆ “ದೋಸ್ತಿ’ ಎಂಬ ಸಿನಿಮಾ ಮಾಡಿದ್ದ ಕಾರಣ ತಮ್ಮ ಹೆಸರಿನ ಮುಂದೆ ದೋಸ್ತಿ ಎಂದು ಸೇರಿಸಿಕೊಂಡಿದ್ದಾರೆ ಆನಂದ್‌. 

Advertisement

ನಿರ್ದೇಶಕ ಆನಂದ್‌ ಅವರಿಗೆ “ದೋಸ್ತಿ’ ನಂತರ ಒಂದು ಹೊಸ ಬಗೆಯ ಸಿನಿಮಾ ಮಾಡಬೇಕೆಂಬ ಮನಸ್ಸಾಯಿತಂತೆ. ಹಾಗೆ ಮಾಡಿದ ಸಿನಿಮಾ “*121#’. ಈ ಚಿತ್ರದಲ್ಲಿ ಸಾಕಷ್ಟು ಹೊಸತನವಿದ್ದು, ಅಂದುಕೊಂಡಂತೆ ಔಟ್‌ ಆಫ್ ದಿ ಬಾಕ್ಸ್‌ ತರಹದ ಸಿನಿಮಾವಾಗಿ ಇದು ಗಮನ ಸೆಳೆಯುತ್ತದೆ ಎಂಬ ವಿಶ್ವಾಸ ಆನಂದ್‌ ಅವರಿಗಿದೆ. ಸಾವಿನ ಮನೆಯಲ್ಲಿ ಕೇಕೆ ಹಾಕಿ ನಗುತ್ತಿರುವ ಕರಾಳ ಕಥೆಯನ್ನು ಈ ಸಿನಿಮಾದಲ್ಲಿ ಹೇಳಿದ್ದಾರಂತೆ. “ಚಿತ್ರದ ಪ್ರತಿ ಹಂತದಲ್ಲೂ ಟ್ವಿಸ್ಟ್‌ ಇದ್ದು, ಕುತೂಹಲದಿಂದ ಸಾಗುವ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ಇಡೀ ತಂಡ ಈ ಸಿನಿಮಾಕ್ಕಾಗಿ ಶ್ರಮಪಟ್ಟಿದೆ’ ಎನ್ನುವುದು ಆನಂದ್‌ ಅವರ ಮಾತು.

ಚಿತ್ರದ ಟೈಟಲ್‌ ಕೇಳಿದಾಗ ನಿಮಗೆ ಮೊಬೈಲ್‌ ರೀಚಾರ್ಜ್‌ ಕೋಡ್‌ ನೆನಪಾಗಬಹುದು. ಆದರೆ, ಖಂಡಿತಾ ಮೊಬೈಲ್‌ಗ‌ೂ ಈ ಸಿನಿಮಾಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ನಿರ್ದೇಶಕರು. ನಾಲ್ಕು ಜನ ಫ್ರೆಂಡ್ಸ್‌ ಒಂದು ಕ್ರೈಂ ಮಾಡಿದ ನಂತರ ಸುಳ್ಳಿನ ಅರಮನೆ ಕಟ್ಟುತ್ತಾರೆ. ಆ ನಂತರ ಅದರಿಂದ ಹೊರಗೆ ಬರ್ತಾರ ಅಥವಾ ಅದರೊಳಗೆ ಸಿಕ್ಕಿಕೊಳ್ಳುತ್ತಾರಾ ಎಂಬ ಲೈನ್‌ನೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ.
ಥ್ರಿಲ್ಲರ್‌ ಜೊತೆಗೆ ಒಂದು ಲವ್‌ಸ್ಟೋರಿಯನ್ನು ಇಟ್ಟಿದ್ದಾಗಿ  ಹೇಳಲು ನಿರ್ದೇಶಕರು ಮರೆಯಲಿಲ್ಲ. ಚಿತ್ರವನ್ನು ಕಿರಣ್‌ ಕುಮಾರ್‌ ಹಾಗೂ ರಾಧಾಕೃಷ್ಣಾಚಾರಿ ನಿರ್ಮಿಸಿದ್ದಾರೆ.

ಇಬ್ಬರು ಸಿನಿಮಾ ಚೆನ್ನಾಗಿ ಮೂಡಿಬಂದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಚಿತ್ರದಲ್ಲಿ ವಿನಯ್‌ ಚಂದರ್‌ ನಾಯಕರಾಗಿ ನಟಿಸಿದ್ದಾರೆ. ಇವರಿಗಿದು ಮೊದಲ ಸಿನಿಮಾ. ಸಿನಿಮಾದಲ್ಲಿ ನಟಿಸಬೇಕೆಂಬ ಇವರ ಆಸೆಗೆ ನಿರ್ದೇಶಕ ಆನಂದ್‌ ಹಾಗೂ ನಿರ್ಮಾಪಕರು ಅವಕಾಶ ಕೊಟ್ಟಿದ್ದಾಗಿ ಹೇಳಿದರು.  ಅವರದು ಇಲ್ಲಿ ತುಂಬಾ ಗೊಂದಲದಲ್ಲಿರುವ ಪಾತ್ರವಂತೆ. ಚಿತ್ರದಲ್ಲಿ ವಿದ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಾಯಕಿಯ ಸ್ನೇಹಿತೆಯಾಗಿ ನಟಿಸಿರುವ ವಿದ್ಯಾ ಅವರಿಗೆ ಇದು ನಾಯಕಿಯಾಗಿ ಮೊದಲ ಸಿನಿಮಾ. ತಾನು ಸಪೂರ ಇರುವುದರಿಂದ ತನಗೆ ಸಿನಿಮಾದಲ್ಲಿ ಅವಕಾಶ ಸಿಗೋದಿಲ್ಲ ಎಂದು ಭಾವಿಸಿಕೊಂಡ ವಿದ್ಯಾಗೆ ನಿರ್ದೇಶಕರು ಧೈರ್ಯ ತುಂಬಿ ಅವಕಾಶ ಕೊಟ್ಟರಂತೆ. ಇಲ್ಲಿ ಅವರಿಗೆ ಸವಾಲನ್ನು ಎದುರಿಸುವ ಪಾತ್ರವಂತೆ. ಚಿತ್ರದಲ್ಲಿ ನಟಿಸಿದ ನವೀನ್‌ ಹಾಗೂ ರವಿಸಿಂಗ್‌ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರಕ್ಕೆ ಕಾರ್ತಿಕ್‌ ಮಲ್ಲೂರ್‌
ಛಾಯಾಗ್ರಹಣ, ರಾಘವೇಂದ್ರ ಹಾಗೂ ಅರವಿಂದ್‌ ಜಾಧವ್‌ ಅವರ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next