ದಾವಣಗೆರೆ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರಕಾರ ಹೊಸ ತುರ್ತು ಸ್ಪಂದನ ಸಹಾಯ ವ್ಯವಸ್ಥೆ(ಸಹಾಯವಾಣಿ-112)ಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು ಇದಕ್ಕಾಗಿ 13 ತುರ್ತು ಸೇವಾ ವಾಹನಗಳು ಕಾರ್ಯನಿರತವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತುರ್ತು ಸ್ಪಂದನ ವ್ಯವಸ್ಥೆ ಕುರಿತು ವಿವರಣೆ ನೀಡಿದರು. ಅ. 1ರಿಂದಲೇ ಈ ನೂತನ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಈ ವ್ಯವಸ್ಥೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದ್ದು ಇದರಲ್ಲಿ ದಾವಣಗೆರೆ ಜಿಲ್ಲೆಯೂ ಒಂದು ಎಂದರು.
ಪೊಲೀಸ್ ನೆರವು, ಅಗ್ನಿಶಾಮಕದಳದ ನೆರವು ಅಥವಾ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನ ಸಹಾಯವಾಣಿ ಸಂಖ್ಯೆ 112ಕ್ಕೆ ಸಾರ್ವಜನಿಕರು ಕರೆ ಮಾಡಿದರೆ ಸಾಕು ಪೊಲೀಸರುರಕ್ಷಣೆ, ಸಹಾಯಕ್ಕೆ (ಇಆರ್‌ಎಸ್‌ಎಸ್) ಎಮೆರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಯಡಿ ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸಲಾಗುತ್ತದೆ. 112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕೀಕೃತ ತುರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15ನಿಮಿಷಗಳಲ್ಲಿಯೇ ಇಆರ್‌ಎಸ್‌ಎಸ್ ವಾಹನ ಅಲ್ಲಿಗೆ ತಲುಪಿ, ಸಂಕಷ್ಟದಲ್ಲಿರುವವವರಿಗೆ ತುರ್ತು ನೆರವು ಒದಗಿಸುವ ವ್ಯವಸ್ಥೆ ಇದಾಗಿದೆ ಎಂದರು.
ತುರ್ತು ಸಹಾಯ ಒದಗಿಸುವ ಉದ್ದೇಶಕ್ಕಾಗಿಯೇ ಜಿಲ್ಲೆಗೆ ಆರು ಸ್ಕಾರ್ಪಿಯೋ, ಏಳು ಇನ್ನೋವಾ ಸೇರಿ ಒಟ್ಟು 13ಬೀಟ್ ವಾಹನಗಳನ್ನು ಪೂರೈಸಲಾಗಿದೆ. ಇಆರ್‌ಎಸ್‌ಎಸ್ ಸೇವೆ ನೀಡುವ ಈ ವಾಹನಕ್ಕೆಹೊಯ್ಸಳ ಎಂದು ಹೆಸರಿಡಲಾಗಿದೆ. ಒಂದು ವಾಹನದಲ್ಲಿ ಒಬ್ಬ ಎಎಸ್‌ಐ, ಒಬ್ಬ ಕಾನ್ಸ್ ಟೇಬಲ್ ಹಾಗೂ ವಾಹನ ಚಾಲಕ ಸೇರಿ ಮೂವರು ಸಿಬ್ಬಂದಿ ಇರುತ್ತಾರೆ. ಸಂರಕ್ಷಣಾ ಸಲಕರಣೆಗಳು ವಾಹನದಲ್ಲಿರುತ್ತವೆ. 24/7 ತುರ್ತು ಸ್ಪಂದನಾ ಕರ್ತವ್ಯಕ್ಕಾಗಿ ಈಗಾಗಲೇ 65 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, 26 ಚಾಲಕರಿಗೆ ತರಬೇತಿ ನೀಡಲಾಗಿದೆ. ದಿನದ 24ತಾಸು ಪ್ರಾಯೋಗಿಕ ಚಟುವಟಿಕೆ ಪ್ರಾರಂಭಿಸಲಾಗಿದ್ದು ಎರಡು ತಾಸಿಗೊಮ್ಮೆ ಇಆರ್‌ಎಸ್‌ಎಸ್ ವಾಹನ ನಿಲುಗಡೆ ಸ್ಥಳ ಬದಲಾಯಿಸಲಾಗುತ್ತದೆ. ಎರಡು ಶಿಫ್ಟ್‌ಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ವ್ಯವಸ್ಥೆ ಆರಂಭಿಸಿದ ಎರಡು ದಿನಗಳಲ್ಲಿಯೇ ಎಂಟು ಪ್ರಕರಣಗಳಿಗೆ ಸ್ಪಂದನ ಸೇವೆ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದರು.
ಇನ್ನು ಮುಂದೆ ಪೊಲೀಸ್ ಕಂಟ್ರೋಲ್ ರೂಮ್‌ನ 100 ಸಹಾಯವಾಣಿ , ಅಗ್ನಿಶಾಮಕದಳದ 101 ಸಹಾಯವಾಣಿ ಹಾಗೂ ಆರೋಗ್ಯ ಇಲಾಖೆಯ 108 ಸಹಾಯವಾಣಿ 108 ಎಲ್ಲವೂ ನೂತನ ಸಹಾಯವಾಣಿ ಸಂಖ್ಯೆ 112ರಲ್ಲಿ ವಿಲೀನವಾಗಿದೆ. ಯಾವುದೇಸಮಸ್ಯೆ ಇದ್ದರೂ ಸಾರ್ವಜನಿಕರು 112ಕ್ಕೆ ಕರೆ ಮಾಡಬಹುದು. ಅಥವಾ ಕೆಎಸ್‌ಪಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಿಂದಲೂ ಇಲ್ಲವೇ erss112ktk@ksp.gov.in ಮೂಲಕವೂ ಸಂದೇಶ ರವಾನಿಸಬಹುದಾಗಿದೆ ಎಂದು ತಿಳಿಸಿದರು.
ಪೊಲೀಸ್ ಉಪಾಧೀಕ್ಷಕ ಬಸವರಾಜ್, ಅಗ್ನಿಶಾಮಕದಳ ಜಿಲ್ಲಾ ನಿರೀಕ್ಷಕ ಬಸವಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.