ಕೆ.ಆರ್.ಪುರ: ಸಾಂಕ್ರಾಮಿಕ ಕ್ಷಯ ರೋಗ ನಿರ್ಮೂಲನೆಗಾಗಿ ಬೆಂಗಳೂರು ಪೂರ್ವ ತಾಲೂಕಿನಾದ್ಯಂತ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.
ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣ ವಿಭಾಗದಿಂದ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್‌ಇಎ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡಿದ್ದ ಕ್ಷಯ ರೋಗ ನಿರ್ಮೂಲನೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
2030ರೊಳಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಸರ್ಕಾರ ಜು.27ರವರೆಗೆ ಕ್ಷಯ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಂಡಿದೆ. ಈ ಸಂಬಂಧ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡ 108 ತಂಡಗಳನ್ನು ರಚಿಸಲಾಗಿದೆ. ಈ ಸಿಬ್ಬಂದಿ ತಾಲೂಕಿನದ್ಯಾಂತ ಸಂಚರಿಸಿ ಪ್ರತಿ ಮನೆಗೆ ಭೇಟಿ ನೀಡಿ ರೋಗದ ಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆತಂದು ಅವರ ಕಫ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು.
ಕ್ಷಯ ರೋಗದ ಲಕ್ಷಣ ಪತ್ತೆಯಾದಲ್ಲಿ ಆ ವ್ಯಕ್ತಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಕ್ಷಯ ರೋಗವು ಸೂಕ್ಷ್ಮ ಬ್ಯಾಕ್ಟೀರಿಯಾದಿಂದ ಹರಡುವ ಒಂದು ಸಾಂಕ್ರಮಿಕ ರೋಗವಾಗಿದೆ. ಸೋಂಕು ಹೊಂದಿರುವ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯ ಮೂಲಕ ಸೋಂಕು ಮತ್ತೂಬರಿಗೆ ಹರಡುತ್ತದೆ. ಪ್ರಸ್ತುತ ಬೆಂಗಳೂರು ಪೂರ್ವ ತಾಲೂಕಿನಲ್ಲಿ 108 ವ್ಯಕ್ತಿಗಳಲ್ಲಿ ಕ್ಷಯ ಪತ್ತೆಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಎರಡು ವಾರಕ್ಕೂ ಹೆಚ್ಚು ಸಮಯದವರೆಗೆ ಕೆಮ್ಮು, ಕಫದ ಜತೆಗೆ ರಕ್ತ ಬರುವುದು, ಸಂಜೆ ವೇಳೆ ಜ್ವರ, ಬೆವರು, ದೇಹದ ತೂಕ ಕಡಿಮೆಯಾಗುವುದು ಮತ್ತು ಹಸಿವಾಗದೆ ಇರುವುದು ಕ್ಷಯ ರೋಗದ ಲಕ್ಷಣಗಳಾಗಿವೆ. ರೋಗ ಹೊಂದಿರುವವರು ಆತಂಕಕ್ಕೆ ಒಳಗಾಗದೆ ನಿರಂತರ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗುತ್ತಾರೆ. ಸರ್ಕಾರದಿಂದ ಕಡಿಮೆ ದರದಲ್ಲಿ ಔಷಧ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕೊಳಚೆ ಪ್ರದೇಶದ ನಿವಾಸಿಗಳು, ಬೀಡಿ ಕಾರ್ಮಿಕರು, ನೇಕಾರರ ಸಮುದಾಯ, ಎಚ್‌ಐವಿ ಸೋಂಕಿತರು, ಮಧುಮೇಹಿಗಳು, ತಂಬಾಕು ಸೇವಿಸುವವರು, ವೃದ್ಧಾಪ್ಯ ಕೇಂದ್ರ ಮತ್ತು ನಿರಾಶ್ರಿತರ ಶಿಬಿರಗಳ ನಿವಾಸಿಗಳು, ಬೀದಿ ಬದಿ ವಾಸಿಸುವ ಮಕ್ಕಳು ಹಾಗೂ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಸಮೀಕ್ಷೆ ನಡೆಸಿ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಚಂದ್ರಶೇಖರ್ ಮಾಹಿತಿ ನೀಡಿದರು.