Advertisement
ನಾವು ನಡೆದಾಡುವಾಗ ಅಥವಾ ಚಲಿಸುವಾಗ ನಮ್ಮ ಇಡೀ ದೇಹದ ಭಾರವನ್ನು ಹೊರುವಂತೆ ಪಾದಗಳು ವಿನ್ಯಾಸಗೊಂಡಿವೆ. ಮಧುಮೇಹ ರೋಗಿಯು ತನ್ನ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅಶಕ್ತನಾದಾಗ ಅವರ ಪಾದಗಳಲ್ಲಿರುವ ನರಗಳಿಗೆ ಘಾಸಿಯಾಗುತ್ತದೆ. ಇದನ್ನು “ಡಯಾಬಿಟಿಕ್ ಪೆರಿಫರಲ್ ನ್ಯೂರೋಪತಿ’ ಎಂದು ಕರೆಯುತ್ತಾರೆ. ಮುಂದುವರಿದು, ಪಾದಗಳ ನರಗಳಿಗೆ ಉಂಟಾಗುವ ಈ ಹಾನಿ (ನ್ಯೂರೋಪತಿ)ಯನ್ನು ಸಂವೇದನ, ಚಲನ ಮತ್ತು ಆಟೊನಾಮಿಕ್ ನ್ಯೂರೋಪತಿ ಎಂದು ವರ್ಗೀಕರಿಸಲಾಗಿದೆ.
Related Articles
Advertisement
- ಎಲ್ಲ ಮಧುಮೇಹಿಗಳಿಗೂ ಪಾದಗಳ ಆರೈಕೆ ಅಗತ್ಯವೇ? ಉತ್ತರ: ಪ್ರತೀ ಮಧುಮೇಹಿಯೂ ಪ್ರತೀ 3-6 ತಿಂಗಳುಗಳಿಗೆ ಒಮ್ಮೆ ತನ್ನ ಪಾದಗಳ ಆರೋಗ್ಯವನ್ನು ಮಧುಮೇಹ ಪಾದ ರೋಗಗಳ ಆರೈಕೆಯಲ್ಲಿ ತಜ್ಞರಾದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಪಾದಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದರೆ ಅವರು ಶಿಫಾರಸು ಮಾಡಲಾದ ಚಿಕಿತ್ಸೆಯನ್ನು ಪಡೆಯಬೇಕು.
- ಮಧುಮೇಹ ಪಾದ ಸಿಂಡ್ರೋಮ್‌ನ ಚಿಹ್ನೆಗಳೇನು? ಉತ್ತರ: ಮಧುಮೇಹ ಪಾದ ಸಿಂಡ್ರೋಮ್ ಅನೇಕ ಸ್ವರೂಪಗಳಲ್ಲಿ ಇರಬಹುದು. ರೋಗಿಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ರೋಗಲಕ್ಷಣಗಳೆಂದರೆ, ಪಾದದ ಚರ್ಮ ಶುಷ್ಕವಾಗುವುದು/ ಬಣ್ಣ ಬದಲಾಗುವುದು/ ತುರಿಕೆ, ಪಾದಗಳಲ್ಲಿ ಸೂಜಿಯಿಂದ ಚುಚ್ಚಿದಂತಾಗುವುದು/ ಜುಮುಗುಡುವುದು/ ಉರಿ/ ಜೋಮು ಹಿಡಿದಂತಾಗುವುದು, ಮುಂಪಾದದ ಚಲನೆ ಕಷ್ಟವಾಗುವುದು, ಪಾದರಕ್ಷೆಗಳು ಜಾರುವುದು, ಪಾದಗಳಲ್ಲಿ ಅತಿಯಾದ ಬೆವರುವಿಕೆ, ಪಾದ ಮತ್ತು ಪಾದಗಂಟು ಸುತ್ತಮುತ್ತ ಊತ, ಪಾದದ ಚರ್ಮ ಬಿರುಸಾಗುವುದು, ಆಗಾಗ ಆಣಿ/ಗಾಯ/ ಚರ್ಮ ಒರಟಾಗುವುದು (ಕ್ಯಾಲಸ್)/ ಗಾಯ ಇತ್ಯಾದಿ ಕಾಣಿಸಿಕೊಳ್ಳುವುದು.
- ನನ್ನ ಮಧುಮೇಹ ಪಾದ ಸಿಂಡ್ರೋಮ್ ಪೂರ್ತಿಯಾಗಿ ಗುಣವಾಗುತ್ತದೆಯೇ? ಉತ್ತರ: ಮಧುಮೇಹವು ಬೆಳವಣಿಗೆ ಹೊಂದುವ ಒಂದು ಅನಾರೋಗ್ಯ ಸ್ಥಿತಿಯಾಗಿರುವುದರಿಂದ ಮಧುಮೇಹ ಪಾದ ಸಿಂಡ್ರೋಮ್ ಪೂರ್ಣವಾಗಿ ಗುಣ ಹೊಂದುವುದು ಸಂಭಾವ್ಯವಲ್ಲ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸುವುದರಿಂದ ಈ ಲಕ್ಷಣಗಳನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸುವಂತೆ ಮಾಡಬಹುದು.
- ನಾನು ನನ್ನ ಪಾದವನ್ನು ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಮುಳುಗಿಸಿ ಇಡಬಹುದೇ? ಉತ್ತರ: ಬೇಡ, ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ಪಾದವನ್ನು ಮುಳುಗಿಸಿ ಇರಿಸಬಾರದು.
- ನನ್ನ ಪಾದಕ್ಕೆ ಪೆಡಿಕ್ಯೂರ್ ಮಾಡಿಸಿಕೊಳ್ಳಬಹುದೇ? ಉತ್ತರ: ಬೇಡ, ಪಾರ್ಲರ್/ ಸೆಲೂನ್/ ಸ್ಪಾಗಳಲ್ಲಿ ಪಾದಕ್ಕೆ ಪೆಡಿಕ್ಯೂರ್ ಮಾಡಿಸಿಕೊಳ್ಳಬಾರದು.
- ನಾನು ಪಾದದ ಬೆರಳುಗಳ ಉಗುರು ಬೆಳೆಸಿಕೊಳ್ಳಬಹುದೇ? ಉತ್ತರ: ಬೇಡ, ಪಾದದ ಬೆರಳುಗಳ ಉಗುರುಗಳನ್ನು ತೀರಾ ಉದ್ದಕ್ಕೆ ಬೆಳೆಸಿಕೊಳ್ಳಬಾರದು. ಉಗುರುಗಳನ್ನು ನೈಲ್‌ಕಟ್ಟರ್ ಉಪಯೋಗಿಸಿ ಕತ್ತರಿಸಿಕೊಳ್ಳಬೇಕು, ಅಂಚುಗಳನ್ನು ಸರಿಪಡಿಸಿಕೊಳ್ಳಬೇಕು.
- ಪಾದದ ಬೆರಳುಗಳಲ್ಲಿ ಉಗುರುಗಳು ಬಿರುಸಾಗಿದ್ದರೆ/ ತಿರುಚಿಕೊಂಡಿದ್ದರೆ ಏನು ಮಾಡಬೇಕು? ಉತ್ತರ: ಚೂರಿ/ಬ್ಲೇಡ್/ ನೈಲ್ ಕಟ್ಟರ್ ಉಪಯೋಗಿಸಿ ಮನೆಯಲ್ಲಿಯೇ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬಾರದು. ಉಗುರುಗಳು ಉದ್ದಕ್ಕೆ ಬೆಳೆದಿದ್ದರೆ ಅಥವಾ ಬಿರುಸಾಗಿದ್ದು ತಿರುಚಿಕೊಂಡಿದ್ದರೆ ಪೊಡಿಯಾಟ್ರಿ ಆರೈಕೆಗಾಗಿ ವೈದ್ಯರನ್ನು ಭೇಟಿಯಾಗಬೇಕು.
- ಬರಿಗಾಲಿನಲ್ಲಿ ನಡೆಯಬಹುದೇ? ಉತ್ತರ: ಬೇಡ. ಮನೆಯೊಳಗೂ ಹೊರಗೂ ಬರಿಗಾಲಿನಲ್ಲಿ ನಡೆಯಬಾರದು. ನಿಮ್ಮ ವೈದ್ಯರು ಸೂಚಿಸಿರುವಂತೆ ಹಿತಕರವಾದ ಪಾದರಕ್ಷೆಗಳನ್ನು ಧರಿಸಿಯೇ ನಡೆದಾಡಬೇಕು. ಹೂದೋಟ/ಬೀಚ್/ ಧಾರ್ಮಿಕ ಸ್ಥಳಗಳಲ್ಲಿ ಕೂಡ ಬರಿಗಾಲಿನಲ್ಲಿ ನಡೆದಾಡುವುದು ಬೇಡ.
- ದಿನವೂ ಪಾದರಕ್ಷೆಗಳನ್ನು ಏಕೆ ತಪಾಸಣೆ ಮಾಡಿಕೊಳ್ಳಬೇಕು? ಉತ್ತರ: ಪಾದದ ಅಡಿಭಾಗದಲ್ಲಿ ಉಂಟಾಗುವ ಗಾಯ/ ಬಿರುಕುಗಳು ಅನೇಕ ಮಧುಮೇಹಿಗಳ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಿ ದಿನವೂ ಸಣ್ಣ ಕನ್ನಡಿ ಉಪಯೋಗಿಸಿ ಪಾದ, ಪಾದದ ಅಡಿಭಾಗವನ್ನು ದಿನವೂ ತಪಾಸಣೆ ಮಾಡಿಕೊಳ್ಳಬೇಕು.
- ನಿಮ್ಮ ಪಾದವನ್ನು ಸ್ವಯಂ ತಪಾಸಣೆ ಮಾಡಿಕೊಳ್ಳುವುದು ಹೇಗೆ? ಉತ್ತರ: ನಿಮ್ಮ ಪಾದವನ್ನು ನೀವೇ ತಪಾಸಣೆ ಮಾಡಿಕೊಳ್ಳಬಹುದು. ಕುರ್ಚಿ/ ಸೋಫಾದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಒಂದು ಕಾಲನ್ನು ಇನ್ನೊಂದರ ಮೇಲೆ ಎತ್ತಿಟ್ಟುಕೊಂಡು ಸಣ್ಣ ಕನ್ನಡಿ ಉಪಯೋಗಿಸಿ ಪಾದದ ಅಡಿಭಾಗದ ಚರ್ಮವನ್ನು ಪರೀಕ್ಷಿಸಿಕೊಳ್ಳಿ. ದೃಷ್ಟಿ ದೋಷ ಅಥವಾ ಚಲನೆಗೆ ಕಷ್ಟವಾಗಿದ್ದರೆ ಕುಟುಂಬ ಸದಸ್ಯರು/ ಆರೈಕೆದಾರರ ಸಹಾಯವನ್ನು ಪಡೆದು ನಿಯಮಿತವಾಗಿ ಪಾದದ ತಪಾಸಣೆಯನ್ನು ಮಾಡಿಕೊಳ್ಳಿ.