Advertisement

ಆಯುರ್ವೇದ ತಣ್ತೀಗಳನ್ನು ಆಧರಿಸಿ ಮಧುಮೇಹ ತಡೆ ಮತ್ತು ನಿರ್ವಹಣೆ

11:04 PM Mar 26, 2022 | Team Udayavani |

ಆಧುನಿಕ ಜೀವನ ಶೈಲಿಯಿಂದ ಉದ್ಭವಿಸುವ ಅನೇಕ ಸಂಕಟಮಯ ಅನಾರೋಗ್ಯ ಸ್ಥಿತಿಗಳಲ್ಲಿ ಮಧುಮೇಹ ಕೂಡ ಒಂದು. ಅಸಮರ್ಪಕ ಆಹಾರ ಶೈಲಿ ಮತ್ತು ಜೀವನಶೈಲಿಯಿಂದಾಗಿ ಉದ್ಭವಿಸುವ ಈ ಕಾಯಿಲೆ ಮನುಕುಲದ ಅತೀ ದೊಡ್ಡ ಶತ್ರು ಎಂಬುದಾಗಿ ಪರಿಗಣಿತವಾಗಿದೆ. ಆಗಾಗ ಇದನ್ನು “ನಿಶ್ಶಬ್ದ ಕೊಲೆಗಾರ’ ಎನ್ನಲಾಗುತ್ತದೆ. ಮಧುಮೇಹ ಮತ್ತು ಅದರಿಂದ ಉಂಟಾಗುವ ಸಂಕೀರ್ಣ ಸಮಸ್ಯೆಗಳು ಜಾಗತಿಕವಾಗಿ ಸಾರ್ವಜನಿಕ ಆರೋಗ್ಯ ಸಂಪನ್ಮೂಲಗಳಿಗೆ ಭಾರೀ ಸವಾಲನ್ನು ಒಡ್ಡುತ್ತಿವೆ. ಸಾಂಪ್ರದಾಯಿಕ ಮಧುಮೇಹ ತಡೆ ಕಾರ್ಯತಂತ್ರಗಳ ಮೂಲಕ ಮಧುಮೇಹ ನಿರ್ವಹಣೆಯಲ್ಲಿ ಪ್ರಶಂಸಾರ್ಹ ಪ್ರಗತಿ ಆಗಿದ್ದರೂ ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಮೂಲಗಳ ಉತ್ಪನ್ನಗಳಿಗಾಗಿ ಶೋಧ ನಡೆದೇ ಇದೆ.

Advertisement

ಅನಾದಿ ಕಾಲದಿಂದ ಆಯುರ್ವೇದವು ಉತ್ತಮ ಆರೋಗ್ಯನ್ನು ಕಾಪಾಡಿಕೊಳ್ಳುವುದಕ್ಕೆ ಆಹಾರಾಭ್ಯಾಸ ಮತ್ತು ಜೀವನಶೈಲಿಗಳ ಪ್ರಾಮುಖ್ಯದ ಬಗ್ಗೆ ಒತ್ತು ನೀಡಿ ಪ್ರತಿಪಾದಿಸುತ್ತಲೇ ಬಂದಿದೆ. ಆಯುರ್ವೇದದ ಪ್ರಕಾರ, “ಪ್ರತಿದಿನವೂ ಆರೋಗ್ಯಕರ ಆಹಾರಾಭ್ಯಾಸ ಮತ್ತು ಜೀವನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವನು, ಸಂಪೂರ್ಣ ಮತ್ತು ಅಸಂಪೂರ್ಣಗಳ ನಡುವೆ ವ್ಯತ್ಯಾಸವನ್ನು ಗುರುತಿಸಿ ತಕ್ಕಂತೆ ವ್ಯವಹರಿಸುವವನು, ಐಹಿಕ ವ್ಯವಹಾರಗಳಿಗೆ ಅತಿಯಾಗಿ ಅಂಟಿಕೊಳ್ಳದವನು ಹಾಗೂ ದಾನ ಗುಣವನ್ನು ಬೆಳೆಸಿಕೊಂಡಿರುವವನು, ಎಲ್ಲರನ್ನೂ ಸಮಾನವಾಗಿ ಕಾಣುವವನು, ಸತ್ಯಸಂಧನಾಗಿರುವವನು, ಕ್ಷಮಾಗುಣ ಹೊಂದಿರುವವನು ಮತ್ತು ಸಜ್ಜನರ ಸಂಗದಲ್ಲಿರುವವನು ಉತ್ತಮ ಆರೋಗ್ಯವನ್ನು ಹೊಂದಿರುತ್ತಾನೆ’. ಆರೋಗ್ಯ ಮತ್ತು ಅನಾರೋಗ್ಯ – ಈ ಎರಡೂ ಸ್ಥಿತಿಗಳಲ್ಲಿ ಸಂಪೂರ್ಣತೆ ಮತ್ತು ಅಸಂಪೂರ್ಣತೆಗಳ ಬಗ್ಗೆ ಮುಖ್ಯವಾಗಿ ಗಮನ ಹರಿಸಬೇಕಾಗುತ್ತದೆ. ಯಾಕೆಂದರೆ ಸರಿಯಾದ ಆಹಾರ ಕ್ರಮವಿಲ್ಲದೆ ಯಾವುದೇ ಔಷಧ ಬಳಕೆಯಿಂದ ಏನೂ ಪ್ರಯೋಜನ ಆಗುವುದಿಲ್ಲ.

ಈ ಹಿಂದೆ ಹೇಳಿದ ಹಾಗೆಯೇ ಆಯುರ್ವೇದದ ಪ್ರಕಾರ ಉತ್ತಮ ಗುಣಮಟ್ಟದ ಆರೋಗ್ಯವನ್ನು ಕಾಯ್ದುಕೊಳ್ಳುವುದಕ್ಕೆ ಸರಿಯಾದ ಜೀವನ ವಿಧಾನಕ್ಕೂ ಒತ್ತು ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೇಹ ಮತ್ತು ಮನಸ್ಸಿಗೆ ಸೂಕ್ತ ತರಬೇತಿಯನ್ನು ಒದಗಿಸುವುದು ಮುಖ್ಯವಾಗುತ್ತದೆ. ಯಾಕೆಂದರೆ ಮನಸ್ಸಿನ ತೊಡಗಿಸುವಿಕೆ ಮತ್ತು ಮನಸ್ಸಿನ ಸರಿಯಾದ ಭೂಮಿಕೆ ಇಲ್ಲದೆ ನಮ್ಮ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಆದ್ದರಿಂದ ವ್ಯಕ್ತಿಯ ದೈನಿಕ ಅಗತ್ಯಗಳಿಗೆ ತಕ್ಕಂತೆ ಸರಿಯಾದ ಜೀವನ ಶೈಲಿಯನ್ನು ಯೋಜಿಸುವುದು ಅತ್ಯಂತ ನಿರ್ಣಾಯಕವಾಗಿರುತ್ತದೆ.

“ಪ್ರಮೇಹ’ ಎಂಬುದು ಎರಡು ಭಾಗಗಳನ್ನು ಒಳಗೊಂಡಿದೆ. “ಪ್ರ’ ಎಂದರೆ ವಿಪುಲ ಮತ್ತು “ಮೇಹ’ ಎಂದರೆ “ಭಾರೀ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ’. ಕುತೂಹಲದ ವಿಚಾರ ಎಂದರೆ ಮಧುಮೇಹಕ್ಕೆ ಇಂಗ್ಲಿಷ್‌ ಪದವಾಗಿರುವ “ಡಯಾಬಿಟೀಸ್‌’ನ ಮೂಲ ಗ್ರೀಕ್‌ ಭಾಷೆಯ “ಡಯಾಬೈನನ್‌’ ಎಂಬ ಪದ. ಇದರ ಅರ್ಥ “ಸೈಫ‌ನ್‌ ಮೂಲಕ ಹರಿಯುವುದು’ ಅಂದರೆ, ನೀರಿನ ಸರಾಗವಾದ ಹರಿಯುವಿಕೆ; ಪರೋಕ್ಷವಾಗಿ ಇದು ದೊಡ್ಡ ಪ್ರಮಾಣದಲ್ಲಿ ಮೂತ್ರ ಹೊರಹಾಕುವುದು ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಹೀಗಾಗಿ “ಪ್ರಮೇಹ’ ಮತ್ತು “ಡಯಾಬಿಟೀಸ್‌’ ಪದಗಳು ಸಮಾನ ಅರ್ಥವನ್ನು ಹೊಂದಿವೆ. ವಿಶೇಷವೆಂದರೆ, “ಮಧುಮೇಹ’ ಮತ್ತು “ಡಯಾಬಿಟೀಸ್‌ ಮೆಲ್ಲಿಟಸ್‌’ ಪದಗಳು ಕೂಡ ಸಮಾನಾರ್ಥವನ್ನು ಹೊಂದಿದ್ದು, “ಮೆಲ್ಲಿಟಸ್‌’ ಎಂದರೆ ಜೇನು ಎಂದರ್ಥ. ಅಂದರೆ ಮಧುಮೇಹ ಮತ್ತು ಡಯಾಬಿಟೀಸ್‌ ಮೆಲ್ಲಿಟಸ್‌ ಈ ಎರಡೂ ಪದಗಳು ದೊಡ್ಡ ಪ್ರಮಾಣದಲ್ಲಿ ಸಿಹಿ ಮೂತ್ರವನ್ನು ವಿಸರ್ಜಿಸುವುದು ಎಂಬರ್ಥವನ್ನು ಕೊಡುತ್ತವೆ. ಹೀಗಾಗಿ “ಪ್ರಮೇಹ’ ಮತ್ತು “ಮಧುಮೇಹ’ ಕೂಡ ಸಮಾನಾರ್ಥಕ ಪದಗಳಾಗಿವೆ.
ಆಯುರ್ವೇದದ ಪ್ರಕಾರ ದೇಹದಲ್ಲಿ ಕಫ‌ ಹೆಚ್ಚಳವಾಗಲು ಕಾರಣವಾಗುವ ಎಲ್ಲ ಅಂಶಗಳು (ಆಹಾರಗಳು ಮತ್ತು ಅಭ್ಯಾಸಗಳು) ಕಾಯಿಲೆಗಳು ಉಂಟಾಗಲು ಮೂಲ ಕಾರಣಗಳಾಗಿರುತ್ತವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಆಲಸಿ ಜೀವನಕ್ರಮ, ಸಿಹಿ ಮತ್ತು ಕೊಬ್ಬನ್ನು ಹೆಚ್ಚು ಸೇವಿಸುವುದು. ಯಾವುದೇ ವ್ಯಾಯಾಮ ಮಾಡದಿರುವವರು ಮತ್ತು ನಿಯಮಿತವಾಗಿ ಉಧ್ವರ್ತನ ಮಾಡದೆ ಇರುವವರು ಮಧುಮೇಹಕ್ಕೆ ತುತ್ತಾಗುತ್ತಾರೆ ಎಂಬುದಾಗಿ ಆಯುರ್ವೇದ ಗ್ರಂಥಗಳಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಮಧುಮೇಹ ತಡೆ ಮತ್ತು ನಿರ್ವಹಣೆಗೆ ಸರಿಯಾದ ಆಹಾರಾಭ್ಯಾಸ ಮತ್ತು ಜೀವನಕ್ರಮದ ಪ್ರಾಮುಖ್ಯವನ್ನು ಇದು ಒತ್ತಿ ಹೇಳುತ್ತದೆ.

ಆಹಾರ
ಮಧುಮೇಹವನ್ನು ನಿಯಂತ್ರಿಸಲು, ಚಿಕಿತ್ಸೆ ನೀಡಲು ಮತ್ತು ತಡೆಯಲು ಆಯುರ್ವೇದವು ಈ ಕೆಳಗಿನ ಆಹಾರಾಭ್ಯಾಸ ಪರಿಕಲ್ಪನೆಗಳನ್ನು ಶಿಫಾರಸು ಮಾಡುತ್ತದೆ.

Advertisement

ಆಯುರ್ವೇದವು ಆಹಾರದ ಪ್ರಮಾಣವನ್ನು ಅದರಲ್ಲಿರುವ ಕ್ಯಾಲೊರಿಗಳ ಆಧಾರದಲ್ಲಿ ಶಿಫಾರಸು ಮಾಡುವುದಿಲ್ಲ; ಬದಲಾಗಿ ವ್ಯಕ್ತಿಯ ಅಗ್ನಿಬಲ (ಜೀರ್ಣ ಸಾಮರ್ಥ್ಯ) ಆಧಾರದಲ್ಲಿ ಒತ್ತು ನೀಡುತ್ತದೆ. ಆದ್ದರಿಂದ ಎಲ್ಲ ಮಧುಮೇಹಿಗಳಿಗೆ ಆಹಾರಾಭ್ಯಾಸ ಸಲಹೆಯು ಒಂದೇ ರೀತಿಯಾಗಿರುವುದಿಲ್ಲ ಮತ್ತು ಅದು ಕೇವಲ ಸಕ್ಕರೆಯಂಶನ್ನು ಮಾತ್ರ ಆಧರಿಸದೆ ವ್ಯಕ್ತಿಯ ಜೀರ್ಣ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಆದ್ದರಿಂದ ಆಹಾರ ಪಟ್ಟಿಯು ವ್ಯಕ್ತಿಯ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿರುತ್ತದೆ.

ಬೇಳೆಕಾಳು ಮತ್ತು ಧಾನ್ಯಗಳು (ಅನ್ನವರ್ಗ): ಯವ (ಬಾರ್ಲಿ), ಗೋಧುಮ (ಗೋಧಿ), ಶಾಲಿ ಶಷ್ಟಿಕ (ಅನ್ನ), ಕುಲತ್ಥ (ಹುರುಳಿ), ಮುದ್ಗ (ಹೆಸರು ಕಾಳು), ಚನಕ (ಕಡಲೆ ಕಾಳು), ಅಧಕಿ (ತೊಗರಿ ಬೇಳೆ), ಸರ್ಶಪ ತೈಲ (ಸಾಸಿವೆ ಎಣ್ಣೆ), ಸಕು¤ (ಬೇಳೆಗಳ ಪುಡಿ.

ಶಾಕವರ್ಗ (ತರಕಾರಿಗಳು): ತಿಕ್ತಶಾಕ ಪತೋಲ (ಹೀರೆಕಾಯಿ), ಮೇಥಿಕ (ಮೆಂತೆಸೊಪ್ಪು), ಕರ್ವೆಲ್ಲಕ (ಹಾಗಲಕಾಯಿ), ಓಕ್ರ (ಬೆಂಡೆಕಾಯಿ).

ಫ‌ಲವರ್ಗ (ಹಣ್ಣುಗಳು): ಜಂಬೂ (ಜಾಮು), ದದಿಮಾ (ದಾಳಿಂಬೆ), ಆಮಲಕಿ (ನೆಲ್ಲಿ), ಕಪಿತ್ಥ (ವಾಟೆಹುಳಿ).
ಶುಷ್ಕಾನ್ನ /ಲಾಜಗಳಲ್ಲಿ ಧಾನಿ (ಜೋಳದ ಪಾಪ್‌ಕಾರ್ನ್), ದಾಲಿಯ (ಹುರಿದ ಕಡಲೆ), ಮಮರ (ಅರಳು), ಮರೀಚ (ಕಾಳುಮೆಣಸು), ಸೈಂಧವ (ಪೆಟ್ಲುಪ್ಪು) ಮತ್ತು ಹಿಂಗು (ಇಂಗು) ಸೇರಿವೆ.

ವಿಹಾರ: ವ್ಯಾಯಾಮ, ಯೋಗ ಮತ್ತು
ಅಭ್ಯಂಗಗಳ ಮೂಲಕ ಮಧುಮೇಹ
ನಿರ್ವಹಣೆ
ನಡಿಗೆ, ಯೋಗಗಳಂತಹ ಸರಳ ವ್ಯಾಯಾಮಗಳ ಜತೆಗೆ ರೋಗಿಯನ್ನು ಒತ್ತಡಮುಕ್ತಗೊಳಿಸಲು ಉತ್ತಮವಾದ ಆಪ್ತಸಮಾಲೋಚನೆಯಿಂದ ಮಧುಮೇಹಿಗಳ ರೋಗನಿರ್ವಹಣೆಯಲ್ಲಿ ಅದ್ಭುತವನ್ನು ಸಾಧಿಸಬಹುದಾಗಿದೆ. ಈ ಸಲಹೆಗಳ ಜತೆಗೆ ದಿನಚರ್ಯ ಅಥವಾ ಜೈವಿಕ ಗಡಿಯಾರಕ್ಕೆ ಪ್ರಾಮುಖ್ಯ ನೀಡಿ ಉತ್ತಮ ದೈನಿಕ ಜೀವನವನ್ನು ನಡೆಸುವುದಕ್ಕೆ ಸಂಬಂಧಿಸಿದಂತಹ ದಿನನಿತ್ಯದ ರೂಢಿಗತ ಸಲಹೆಗಳಿಗೂ ಆಯುರ್ವೇದ ವಿಜ್ಞಾನದಲ್ಲಿ ಅಪಾರ ಪ್ರಾಮುಖ್ಯವಿದೆ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಇಷ್ಟೇ ಪ್ರಾಮುಖ್ಯವನ್ನು ಅಭ್ಯಂಗ (ಅಂಗ ಮರ್ದನ) ಮಾಡಿಸಿಕೊಳ್ಳುವುದು, ಉಧ್ವರ್ತನಗಳಿಗೂ ನೀಡಲಾಗಿದೆ. ಇವು ದೇಹದಿಂದ ವಿಷಾಂಶಗಳನ್ನು ಹೊರಹಾಕಲು ಸಹಾಯ ಮಾಡುವುದಲ್ಲದೆ ದೇಹಕ್ಕೆ ಚೈತನ್ಯ ನೀಡಿ ಸದೃಢ, ಆರೋಗ್ಯಸಂಪನ್ನರನ್ನಾಗಿ ಮಾಡುತ್ತವೆ. ಆರೋಗ್ಯವೇ ಭಾಗ್ಯವಾಗಿರುವುದರಿಂದ ಇದು ಬಹಳ ಮುಖ್ಯವಾಗಿದೆ.

-ಡಾ| ಅನುಪಮಾ ವಿ. ನಾಯಕ್‌
ಸೀನಿಯರ್‌ ಲೆಕ್ಚರರ್‌,
ಆಯುರ್ವೇದ ವಿಭಾಗ
ರೇಣುಕಾ
ಪಿಎಚ್‌ಡಿ ವಿದ್ಯಾರ್ಥಿನಿ, ಸೆಂಟರ್‌ ಫಾರ್‌ ಇಂಟಗ್ರೇಟಿವ್‌ ಮೆಡಿಸಿನ್‌ ಆ್ಯಂಡ್‌ ರಿಸರ್ಚ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next