ಶಹಾಬಾದ: ಧ್ಯಾನ್‌ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರಿಕ್ ಮೆಡಲ್‌ಗಳನ್ನು ತಂದು ಕೊಟ್ಟ ದೇಶ ಹೆಮ್ಮೆಯ ಪುತ್ರ ಎಂದು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.
ನಗರದ ಎಸ್.ಎಸ್.ನಂದಿ ಪ್ರೌಢಶಾಲೆ ಹಾಗೂ ಎಸ್.ಜಿ.ವಿ ಹಿಂದಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇಜರ್ ಧ್ಯಾನ್‌ಚಂದ್‌ರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್‌ಚಂದ್ ಕುಸ್ತಿಯಲ್ಲಿ ಯಾವಾಗಲೂ ಮಗ್ನರಾಗುತ್ತಿದ್ದರು. ಆದರೆ ಅವರನ್ನು ಪ್ರಸಿದ್ಧ ಕ್ರೀಡಾಪಟು ಅಂತ ಮಾಡಿದ್ದು ರಾಷ್ಟ್ರೀಯ ಕ್ರೀಡೆ ಹಾಕಿ. ಹದಿನಾರನೇ ವಯಸ್ಸಿನಲ್ಲಿಯೇ ಭಾರತೀಯ ಸೈನ್ಯಕ್ಕೆ ಸೇರಿದರು. ಆ ಸಂದರ್ಭದಲ್ಲಿ ಭಾರತೀಯ ಸೈನ್ಯಗಳ ವಿವಿಧ ರೆಜಿಮೆಂಟ್‌ಗಳ ನಡುವೆ ಹಾಕಿಯ ಸ್ನೇಹಪರವಾದ ಟೂರ್ನಿಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದರು. ಆಗ ಇವರ ಆಟದ ಸೊಬಗು, ನಿಖರತೆ, ವೈಶಿಷ್ಟ್ಯತೆ ಹಾಗೂ ಶ್ರದ್ಧೆಯನ್ನು ಕಂಡು ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
1928ರಲ್ಲಿ ನೆದರ್‌ಲ್ಯಾಂಡನಲ್ಲಿ, 1932ರಲ್ಲಿ ಅಮೇರಿಕಾದಲ್ಲಿ ಹಾಗೂ 1936ರಲ್ಲಿ ಜರ್ಮನಿಯಲ್ಲಿ ನಡೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಟ್ಟ ಮಹಾನ್ ಕ್ರೀಡಾಪಟು ಧ್ಯಾನ್‌ಚಂದ್ ಎಂದು ಸ್ಮರಿಸಿದರು.
ಎಸ್‌ಜಿವಿ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಬಾಬಾಸಾಹೇಬ ಸಾಳುಂಕೆ, ಎಸ್‌ಜಿವಿ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ, ಎಸ್. ಎಸ್. ನಂದಿ ಪ್ರೌಢಶಾಲೆಯ ಮುಖ್ಯಗುರುಗಳಾದ ಸುಧಿಧೀರ ಕುಲಕರ್ಣಿ, ಮಹೇಶ್ವರಿ ಗುಳಿಗಿ, ಗೀತಾ ಸಿಪ್ಪಿ, ವಿಜಯಲಕ್ಷ್ಮೀ ವೆಂಕಟೇಶ, ರಾಜೇಶ್ವರಿ ಎಂ, ಸುಕನ್ಯಾ, ಸುರೇಖಾ, ಲತಾ ಸಾಳುಂಕೆ, ರಮೇಶ ಜೋಗದನಕರ್ ಸೇರಿದಂತೆ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಇದ್ದರು.