ಬೆಂಗಳೂರು: ಶುಕ್ರವಾರ(ಫೆ.19) ದಿಂದ ಬೆಳ್ಳಿ ಪರದೆ ಮೇಲೆ ಅಬ್ಬರ ಶುರು ಮಾಡಿರುವ ‘ಪೊಗರು’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಕೋವಿಡ್ ಸಂಕಷ್ಟ ನಿವಾರಣೆಯ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಬಿಗ್ ಸಿನಿಮಾ ಪೊಗರು ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆಹೊಡೆಯುತ್ತಿದೆ. ಕೋಟಿಗಟ್ಟಲೆ ಹಣ ಬಾಚಿಕೊಂಡು ಗೆಲುವಿನ ನಗೆ ಬೀರಿದೆ. ಹಾಗಾದರೆ ಎರಡು ದಿನದಲ್ಲಿ ಪೊಗರು ಗಳಿಸಿದ ಹಣ ಎಷ್ಟು ಗೊತ್ತಾ ?
ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೊಗರು ರಿಲೀಸ್ ಆಗಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಬರೋಬ್ಬರಿ 10.05 ಕೋಟಿ ಹಣ ಹರಿದು ಬಂದಿದೆ. ಎರಡನೇ ದಿನವೂ ಕೂಡ ಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಅಂದರೆ ಎರಡು ದಿನಕ್ಕೆ 21 ಕೋಟಿ ರೂ.ಜಮಾಯಿಸಿದೆ ಈ ಸಿನಿಮಾ. ಇದು ಕರ್ನಾಟಕದ ಕಲೆಕ್ಷನ್ ಮಾತ್ರ. ಹೊರ ರಾಜ್ಯಗಳಲ್ಲಿ ಪೊಗರು ಚಿತ್ರದ ಗಳಿಕೆಯ ಬಗ್ಗೆ ಚಿತ್ರತಂಡ ರಿವೀಲ್ ಮಾಡಿಲ್ಲ.
ಚಿತ್ರದ ಎರಡನೇ ದಿನದ ಗಳಿಕೆ ಬಗ್ಗೆ ಸ್ವತಃ ನಟ ಧ್ರುವ ಸರ್ಜಾ ಅವರೇ ಸಂತಸದಿಂದ ಹಂಚಿಕೊಂಡಿದ್ದಾರೆ. ಜತೆಗೆ ಟ್ವಿಟರ್ ಮೂಲಕ ಕರ್ನಾಟಕದ ಸಿನಿಮಾ ಪ್ರೇಮಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು ಈ ಚಿತ್ರಕ್ಕೆ ನಂದ ಕಿಶೋರ ನಿರ್ದೇಶನ ಮಾಡಿದ್ದು, ಬಿ.ಕೆ ಗಂಗಾಧರ ಹಣ ಹೂಡಿದ್ದಾರೆ. ಅದ್ದೂರಿ, ಬಹದ್ದೂರ ಹಾಗೂ ಭರ್ಜರಿ ನಂತರ ನಟ ಧ್ರುವ ಸರ್ಜಾ ಪೊಗರು ಚಿತ್ರದಲ್ಲಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ.