ಬೆಂಗಳೂರು: ನಟ ಧ್ರುವ ಕುಟುಂಬಕ್ಕೆ ಮುದ್ದಾದ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿಯನ್ನು ಆ್ಯಕ್ಷನ್ ಪ್ರಿನ್ಸ್ ಹಂಚಿಕೊಂಡಿದ್ದಾರೆ.
ಶನಿವಾರ ಸಂಜೆ ಧ್ರುವ ಪತ್ನಿ ಪ್ರೇರಣಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ( ಭಾನುವಾರ) ಬೆಳಗ್ಗೆ ಆಪರೇಷನ್ ಕೊಠಡಿಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಶುಭ ಸುದ್ದಿಗಾಗಿ ಆಸ್ಪತ್ರೆಯ ಕೊಠಡಿ ಹೊರಗೆ ಕಾಯುತ್ತಾ ನಿಂತಿದ್ದ ಧ್ರುವ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಹೆಣ್ಣು ಮಗುವಿಗೆ ತಂದೆಯಾದ ಸುದ್ದಿಯನ್ನು ಧ್ರುವ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದ ಸ್ಟೋರಿಗಳಲ್ಲಿ ಧ್ರುವ ಈ ಬಗ್ಗೆ “ತಾಯಿ ಮಗು ಆರೋಗ್ಯವಾಗಿದ್ದಾರೆ. ಪತ್ನಿಗೆ ನಾರ್ಮಲ್ ಡೆಲಿವರಿ ಆಗಿದೆ. ಜೈ ಹನುಮಾನ್ ಎಂದು ಹೇಳಿ ಡಾಕ್ಟರ್ ಗೆ ಧನ್ಯವಾದ ಹೇಳಿದ್ದಾರೆ.
2019 ರಲ್ಲಿ ಧ್ರುವ – ಪ್ರೇರಣಾ ವಿವಾಹವಾಗಿದ್ದರು. ಚಿರು ನಿಧನರಾದ ಬಳಿಕ ಸರ್ಜಾ ಕುಟುಂಬದಲ್ಲಿ ದೊಡ್ಡ ಶುಭಕಾರ್ಯ ಆಗಿರಲಿಲ್ಲ. ಈಗ ಧ್ರುವ ದಂಪತಿಗೆ ಹೆಣ್ಣು ಮಗು ಆಗಿದೆ. ಕುಟುಂಬದಲ್ಲಿ ಮತ್ತೆ ಹರ್ಷ ಮನೆ ಮಾಡಿದೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಧ್ರುವ ತಮಗೆ ಯಾವ ಮಗುವಾದರೂ ಇಷ್ಟ, ವೈಯಕ್ತಿಕವಾಗಿ ಹೆಣ್ಣು ಮಗು ಎಂದರೆ ಇಷ್ಟ ಎಂದು ಹೇಳಿದ್ದರು.