ಕಳೆದ ಒಂದೂವರೆ ವರ್ಷದಿಂದ ಕೊರೊನಾ ಮಹಾಮಾರಿ ಎಲ್ಲ ಸ್ಟಾರ್ ಗಳ ಅದ್ಧೂರಿ ಬರ್ತ್‌ಡೇ ಗೆ ಬ್ರೇಕ್ ಹಾಕಿದೆ. ಈ ವರ್ಷ ಕೂಡ ಬಹುತೇಕ ಎಲ್ಲ ಸ್ಟಾರ್ ಸರಳವಾಗಿ ತಮ್ಮ ಬರ್ತ್‌ಡೇ ಆಚರಣೆಗೆ ಅಭಿಮಾನಿಗಳಿಗೆ ಕರೆ ನೀಡಿದ್ದು, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಪವರ್‌ಸ್ಟಾರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿದ್ದಾರೆ. ಈಗ ಈ ಸರದಿ ನಟ ಧ್ರುವ ಸರ್ಜಾ ಅವರದ್ದು.
ಇದೇ ಅಕ್ಟೋಬರ್ 6ರಂದು ನಟ ಧ್ರುವ ಸರ್ಜಾ ಅವರ ಬರ್ತ್‌ಡೇ. “ಅದ್ಧೂರಿ’ ಚಿತ್ರದ ಬಳಿಕ ಧ್ರುವ ಸರ್ಜಾ ಬರ್ತ್‌ಡೇಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಕಳೆದ ವರ್ಷದಿಂದ ಕೋವಿಡ್ ಆತಂಕ ಧ್ರುವ ಸರ್ಜಾ ಅವರ ಅದ್ಧೂರಿ ಬರ್ತ್‌ಡೇಗೂ ಬ್ರೇಕ್ ಹಾಕಿದೆ. ಕಳೆದ ವರ್ಷದಂತೆ, ಈ ವರ್ಷ ಕೂಡ ಧ್ರುವ ಸರ್ಜಾ ಸರಳವಾಗಿ ತಮ್ಮ ಜನ್ಮದಿನ ಆಚರಿಸಲು ನಿರ್ಧರಿಸಿದ್ದಾರೆ.
ತಮ್ಮ ಜನ್ಮದಿನಕ್ಕೂ ಎರಡು ದಿನಗಳ ಮುಂಚೆ, ಇನ್ಸಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, “ಇದೇ ಅ. 6 ನೇ ತಾರಿಖು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲಿಬ್ರೆಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ’ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ:ಮನೆ ಮಗಳ ಮೊದಲ ಚಿತ್ರಕ್ಕೆ ಫ್ಯಾಮಿಲಿ ಸಾಥ್
ವಿಡಿಯೋದಲ್ಲಿ ಮಾತನಾಡಿರುವ ಧ್ರುವ ಸರ್ಜಾ, “ಕೋವಿಡ್ ಕಾರಣದಿಂದಾಗಿ ಹಾಗೂ ನಾನು ಊರಿನಲ್ಲಿ ಇರುವುದಿಲ್ಲ. ಶೂಟಿಂಗ್‌ಗಾಗಿ ವಿಶಾಖಪಟ್ಟಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ನಿಮ್ಮ ಮನೆಯ ಹುಡುಗ ಎಂದು ನನ್ನ ಎಲ್ಲಾ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಎಲ್ಲಾ ತಾಯಂದಿರು ಹೇಗೆ ಆಶೀರ್ವಾದ ಮಾಡಿದ್ದೀರಿ. ಹಾಗೇ ಈ ಬಾರಿಯೂ ನನಗೆ ಆಶೀರ್ವಾದ ಮಾಡಿ. ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ನನಗೆ ಶ್ರೀರಕ್ಷೆ’ ಎಂದಿದ್ದಾರೆ.