Advertisement

ಕೊರೊನಾ ಮುಂಜಾಗ್ರತೆ

01:48 PM Mar 05, 2020 | Naveen |

ಧಾರವಾಡ: ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಫೆ.20ರಿಂದಲೇ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್‌ ಮತ್ತು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಆರು ಹಾಸಿಗೆಯ ಪ್ರತ್ಯೇಕ ವಾರ್ಡ್‌ ಸಿದ್ಧಗೊಳಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್‌ ನಿಯಂತ್ರಣ ಕುರಿತು ಅಂತರ್‌ ಇಲಾಖೆಗಳ ಸಮನ್ವಯ ಸಮಿತಿ ಸಭೆ ಜರುಗಿಸಿ, ಅವರು ಮಾತನಾಡಿದರು. ಈ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ತಜ್ಞ ವೈದ್ಯರಿಗೆ, ಆರೋಗ್ಯ ಸಹಾಯಕರಿಗೆ, ಸಿಬ್ಬಂದಿಗೆ ಅಗತ್ಯ ಮಾಹಿತಿ, ತರಬೇತಿ ನೀಡಲಾಗಿದೆ. ಕೊರೊನಾ ಬಾ ಧಿತರ ಚಿಕಿತ್ಸೆಗಾಗಿ ಸಿಬ್ಬಂದಿಗೆ ಅಗತ್ಯವಿರುವ ಎನ್‌ 95 ಮಾಸ್ಕ್, ಪಿಪಿಇ ಕಿಟ್‌ಗಳನ್ನು ಕಾಯ್ದಿರಿಸಲಾಗಿದೆ. ಶಂಕಿತ ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹಿಸಲು ಅಗತ್ಯವಿರುವ ಪರಿಕರಗಳ ದಾಸ್ತಾನು ಇರಿಸಲಾಗಿದೆ ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 20ರಿಂದಲೇ ಆರೋಗ್ಯ ಸಹಾಯ ಕೇಂದ್ರ ತೆರೆಯಲಾಗಿದ್ದು, ನಿತ್ಯ ಆಗಮಿಸುವ ಪ್ರಯಾಣಿಕರಿಗೆ ಆರೋಗ್ಯ ಸಿಬ್ಬಂದಿ ಕೊರೊನಾ ವೈರಸ್‌ ಕುರಿತು ತಿಳಿವಳಿಕೆ ನೀಡಿ, ಜಾಗೃತಿ ಮೂಡಿಸಲಾಗುತ್ತಿದೆ. ಜನಸಂದಣಿ ಹೆಚ್ಚಿಗೆ ಇರುವ ಬಸ್‌ನಿಲ್ದಾಣ, ಸಾರ್ವಜನಿಕ ಸ್ಥಳ, ಖಾಸಗಿ ಮತ್ತು ಸರಕಾರಿ ಆಸ್ಪತ್ರೆ, ಶಾಲೆಗಳು, ವಸತಿನಿಲಯ, ಸರಕಾರಿ ಕಚೇರಿಗಳಲ್ಲಿ ಆರೋಗ್ಯ ಇಲಾಖೆಯಿಂದ ಕರಪತ್ರ, ಭಿತ್ತಿಪತ್ರ ಅಂಟಿಸಲಾಗಿದೆ.ಮುಂಜಾಗ್ರತೆ ವಹಿಸುವುದಕ್ಕಾಗಿ ವ್ಯಾಪಕ ಪ್ರಚಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೊರೊನಾ ವೈರಸ್‌ ಕುರಿತು ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ಸಾರ್ವಜನಿಕರಿಗೆ ಯಾವುದೇ ಭಯ ಬೇಡ. ಜಿಲ್ಲಾಡಳಿತ ಈಗಾಗಲೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾಮಾಜಿಕ ಜಾಲತಾಣ ಅಥವಾ ಇತರೆ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ವದಂತಿ, ಊಹಾಪೋಹಗಳಿಗೆ ಕಿವಿಗೊಡಬಾರದು. ಮತ್ತು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಕೊರೊನಾ ಬಾಧಿ ತ ಪ್ರದೇಶ ಹಾಗೂ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರು ಜಿಲ್ಲಾಸ್ಪತ್ರೆ ಅಥವಾ ಕಿಮ್ಸ್‌ ಆಸ್ಪತ್ರೆಗೆ ತೆರಳಿ ಸ್ವಯಂ ಪ್ರೇರಣೆಯಿಂದ ವರದಿ ಮಾಡಿಕೊಳ್ಳಬೇಕು. ಇದರಿಂದ ಅನಗತ್ಯ ಸಂಶಯಕ್ಕೆ ಆಸ್ಪದವಾಗದೇ ಅಗತ್ಯವಾದರೆ ಸೂಕ್ತ ಚಿಕಿತ್ಸೆ, ಮುಂಜಾಗ್ರತೆಗೆ ಅನುಕೂಲವಾಗುತ್ತದೆ. ಸಾರ್ವಜನಿಕರು ಕೊರೊನಾ ವೈರಸ್‌ ಬಗ್ಗೆ ಹೆಚ್ಚು ಮಾಹಿತಿ ಅಗತ್ಯವಿದ್ದಲ್ಲಿ ಆರೋಗ್ಯ ಸಹಾಯವಾಣಿ 104 ಕ್ಕೆ ಉಚಿತ ಕರೆ ಮಾಡಿ, ಯಾವುದೇ ಸಮಯದಲ್ಲಿ ಮಾಹಿತಿ ಪಡೆಯಬಹುದು. ದೀರ್ಘ‌ ಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ವಯೋವೃದ್ಧರು ಹೆಚ್ಚು ಕಾಳಜಿ ವಹಿಸಬೇಕು. ಅವರಿಗೆ ಯಾವುದೇ ಸಹಾಯ ಬೇಕಾದಲ್ಲಿ ತಕ್ಷಣ ಜಿಲ್ಲಾಸ್ಪತ್ರೆ ಅಥವಾ ಕಿಮ್ಸ್‌ ಆಸ್ಪತ್ರೆ ಸಂಪರ್ಕಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ, ಉಪ ಪೊಲೀಸ್‌ ಆಯುಕ್ತ ಪಿ.ಕೃಷ್ಣಕಾಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಶಿವಕುಮಾರ ಮಾನಕರ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂತರದಾನಿ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next