ಮುದ್ದೇಬಿಹಾಳ: ಮಠಾಧೀಶರು ಧರ್ಮವನ್ನು ಬೆಳೆಸುವುದರ ಜೊತೆಗೆ ಜನರನ್ನೂ ಬೆಳೆಸುತ್ತಾರೆ.ರಾಜಕಾರಣಿಗಳು ಜನರ ಸೇವೆ ಮಾಡುತ್ತಾರೆ. ನಿಸ್ವಾರ್ಥದಿಂದ ಜನಸೇವೆ ಮಾಡುವವರೇ ನಿಜವಾದ ಮಠಾಧೀಶರು, ರಾಜಕಾರಣಿಗಳುಎನ್ನಿಸಿಕೊಳ್ಳುತ್ತಾರೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕು ಯರಝರಿ ಗ್ರಾಮದಲ್ಲಿನ ಯಲ್ಲಾಲಿಂಗೇಶ್ವರ ಮಠದಲ್ಲಿ ಶುಕ್ರವಾರ ನವರಾತ್ರೋತ್ಸವ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ವಾರ್ಥ ಸಾಧನೆಗೋಸ್ಕರ ಮಠಾಧೀಶರು,ರಾಜಕಾರಣಿಗಳು ಇರಬಾರದು. ನಿಸ್ವಾರ್ಥದಿಂದ ಜನಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು.ಮಠಾಧೀಶರು, ರಾಜಕಾರಣಿಗಳ ನಡುವಿನ ಸಂಬಂಧ ಮಧುರವಾಗಿರಬೇಕು ಎಂದರು.
ಈ ಭಾಗದಲ್ಲಿ ಕೃಷ್ಣಾ ನದಿ ಇರುವುದರಿಂದ ಹೆಚ್ಚಿನ ರೈತರು ಕಬ್ಬು ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಆದರೆ ಕಬ್ಬನ್ನು ವೈಜ್ಞಾನಿಕವಾಗಿ ಹೇಗೆ ಬೆಳೆಯಬೇಕು ಎನ್ನುವುದನ್ನು ಅರಿತುಕೊಂಡರೆ ಹೆಚ್ಚು ಇಳುವರಿ ಪಡೆಯಬಹುದು. ಬರಡು ಭೂಮಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಪಡಿಸಲು ನನ್ನ ಜೊತೆ ಕೈಜೋಡಿಸಬೇಕು. ಈ ಭಾಗ ಸಂಪೂರ್ಣ ಸಂಪದ್ಭರಿತವಾಗಲು ಯೋಜನೆ ರೂಪಿಸಿದ್ದು, ಶೀಘ್ರ ಚಾಲನೆ ದೊರಕಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ದೇಶದ ಸಂಸ್ಕೃತಿ, ಹಿಂದುತ್ವ ಮತ್ತು ಮಠಮಾನ್ಯಗಳ ಸಂಪ್ರದಾಯ ಹಾಗೂ ಕೋವಿಡ್ ಕಠಿಣ ಪರಿಸ್ಥಿತಿ ಎದುರಿಸಿರುವ ಕುರಿತು ಮಾತನಾಡಿದರು.
ಶ್ರೀಮಠದ ಪೀಠಾಧಿಪತಿ ಮಲ್ಲಾರಲಿಂಗ ಮಹಾಪ್ರಭುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಅಹಿಲ್ಯಾಬಾಯಿ ಹೋಳ್ಕರ್ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಿಪಿಐ ಆನಂದ ವಾಘ್ಮೋರೆ, ಜಿಪಂ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಪಿಎಂಸಿ ಮಾಜಿ ಅಧ್ಯಕ್ಷಮುತ್ತಣ್ಣ ಮುತ್ತಣ್ಣವರ್, ಪಿಡಿಒ ವಿಜಯಾ ಮುದಗಲ್ಲ, ಗಣ್ಯರಾದ ಸಿದ್ದಪ್ಪ ಮಾಸ್ತರ ಹುಲ್ಲೂರ, ನಾಗಪ್ಪ ರೂಢಗಿ, ಬಸವರಾಜ ಬಾಗೇವಾಡಿ, ಮಲ್ಲಿಕಾರ್ಜುನ ಗುರುವಿನ ಸರೂರ, ಬಸವರಾಜ ಹೊನವಾಡ ವೇದಿಕೆಯಲ್ಲಿದ್ದರು.
ಜಾತ್ರಾ ಕಮಿಟಿ ಅಧ್ಯಕ್ಷ ಬಿಜೆಪಿ ಧುರೀಣ ಮಲಕೇಂದ್ರಗೌಡ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹಂಚಲಿ, ಮಹಾಂತೇಶ ಪಟ್ಟಣದ ನಿರೂಪಿಸಿದರು. ಮುತ್ತು ಕಡಕೋಳ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತರಾದ ಸತ್ಯಭಾಮ ಮತ್ತು ಪಾಂಡುರಂಗ ಪೂಜಾರಿ ದಂಪತಿ ಶ್ರೀಗಳಪಾದಪೂಜೆ ನಡೆಸಿಕೊಟ್ಟರು. ಇದೇ ವೇಳೆ ಮೂರು ಜೋಡಿ ಮದುವೆಯಾಗಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.