ಮ್ಯಾಂಚೆಸ್ಟರ್: ಮಹೇಂದ್ರ ಸಿಂಗ್ ಧೋನಿ ಹಾಗೂ ಕರಾಚಿ ಮೂಲದ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೊ) ಅವರ ನಡುವಿನ ಬಾಂಧವ್ಯ 2011ರಲ್ಲಿ ಮೊಹಾಲಿ ಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಿಂದ ಬೆಳೆಯು ತ್ತಲೇ ಸಾಗಿದೆ. ರವಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಭಾರತ-ಪಾಕಿಸ್ಥಾನ ಪಂದ್ಯಕ್ಕೆ ಬಶೀರ್ ಶಿಕಾಗೋದಿಂದ 6,000 ಕಿ.ಮೀ. ಹಾರಿ ಬಂದಿದ್ದಾರೆ. “ನಿನ್ನೆ ಇಲ್ಲಿಗೆ ಬಂದೆ. ಈ ಪಂದ್ಯದ ಟಿಕೆಟ್‌ಗಾಗಿ ಅಭಿಮಾನಿಗಳು 800ರಿಂದ 900 ಪೌಂಡ್ ನೀಡಲೂ ಸಿದ್ಧರಿದ್ದಾರೆ. ಶಿಕಾಗೊ ವಿಮಾನದ ಟಿಕೆಟ್ ಕೂಡ ಇಷ್ಟೇ ಇದೆ. ಧೋನಿ ಅವರ ಕೃಪೆಯಿಂದಾಗಿ ನಾನು ಪಂದ್ಯದ ಟಿಕೆಟ್‌ಗಾಗಿ ಪರದಾಡಬೇಕಿಲ್ಲ’ ಎಂದು 63ರ ಹರೆಯದ ಬಶೀರ್ ಹೇಳಿದ್ದಾರೆ.
ಅಚ್ಚರಿಯ ಉಡುಗೊರೆ!
2011ರಲ್ಲಿ ಧೋನಿ ಬಶೀರ್‌ಗೆ ಟಿಕೆಟ್ ಕೊಡಿಸಿದಲ್ಲಿಂದ ಈ ಸ್ನೇಹ ಬೆಳೆದಿದೆ. “ಅವರು ಬ್ಯುಸಿ ಇರುತ್ತಾರೆ. ಹಾಗಾಗಿ ಕರೆ ಮಾಡುವುದಿಲ್ಲ. ಸಂದೇಶ ಕಳುಹಿಸುತ್ತೇನೆ. ಈ ಪಂದ್ಯದ ಟಿಕೆಟ್ ಕೊಡಿಸುವುದಾಗಿ ಧೋನಿ ಹೇಳಿದ್ದಾರೆ. ಈ ಹೃದಯವಂತನಿಗಾಗಿ ನಾನೂ ಒಂದು ಅಚ್ಚರಿಯ ಉಡುಗೊರೆ ತಂದಿದ್ದೇನೆ’ ಎಂದು ಬಶೀರ್ ತಿಳಿಸಿದ್ದಾರೆ.
ಮ್ಯಾಂಚೆಸ್ಟರ್‌ನಲ್ಲಿ ಬಶೀರ್ ಪಾಕಿಸ್ಥಾನ ಆಟಗಾರರನ್ನೂ ಭೇಟಿ ಮಾಡಿದ್ದಾರೆ. ಶೋಯಿಬ್ ಮಲಿಕ್-ಸಾನಿಯಾ ಮಿರ್ಜಾ ಜತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಶೀರ್ ಅವರ ಪತ್ನಿ ಹೈದರಾ ಬಾದ್‌ನವರು. ಧೋನಿಗಾಗಿ ಭಾರತವನ್ನು ಬೆಂಬಲಿಸುತ್ತಿದ್ದು, ಎರಡೂ ದೇಶಗಳ ನಡುವೆ ಶಾಂತಿ ಬಯಸುತ್ತಾರೆ.