Advertisement
ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಜ್ವರ ಮತ್ತು ಬೆನ್ನು ನೋವಿನಿಂದಾಗಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ ಹೈದರಾಬಾದ್ ವಿರುದ್ಧ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಈ ಎರಡೂ ಪಂದ್ಯಗಳಲ್ಲಿ ಚೆನ್ನೈ ಸೋಲನುಭವಿಸಿತ್ತು. ಧೋನಿ ಈ ವರ್ಷ ಅತ್ಯುತ್ತಮ ಫಾರ್ಮ್ನಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 22 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದ್ದರು.
Related Articles
ಬುಧವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗಿಳಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ದಾಖಲಿಸಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ 16.2 ಓವರ್‌ಗಳಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈ 80 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದು ರನ್ ಲೆಕ್ಕಾಚಾರದಲ್ಲಿ ಚೆನ್ನೈಗೆ 6ನೇ ಅತೀ ದೊಡ್ಡ ಗೆಲುವು. ಇದು ಚೆನ್ನೈಗೆ ತವರಿನ ಕೊನೆ ಪಂದ್ಯವಾಗಿತ್ತು.
ಶೇನ್ ವಾಟ್ಸನ್ ವಿಕೆಟ್ ಹೋದ ಅನಂತರ ಫಾ ಡು ಪ್ಲೆಸಿಸ್-ಸುರೇಶ್ ರೈನಾ 83 ರನ್‌ಗಳ ಜತೆಯಾಟವಾಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ಬಂದ ಧೋನಿ 22 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿ (1 ಸಿಕ್ಸರ್, 8 ಬೌಂಡರಿ) ಮತ್ತು ಜಡೇಜ 25 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.
Advertisement
ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಅವರದೇ ಹೆಚ್ಚಿನ ಗಳಿಕೆ (44). ಅದ್ಭುತ ಸ್ಟಪಿಂಗ್ ಮಾಡಿದ ಧೋನಿ ಡೆಲ್ಲಿ ನಾಯಕ ಅಯ್ಯರ್ ಹಾಗೂ ಕ್ರಿಸ್ ಮೊರಿಸ್ (0) ಬಹುದೊಡ್ಡ ವಿಕೆಟ್ ಕಿತ್ತರು. ಇಮ್ರಾನ್ ತಾಹಿರ್ (4), ರವೀಂದ್ರ ಜಡೇಜ (3) ವಿಕೆಟ್ ಕಬಳಿಸಿ ಡೆಲ್ಲಿ ತಂಡಕ್ಕೆ ಮುಳುವಾದರು.
ರಿಯಾಲಿಟಿ ಚೆಕ್: ಅಯ್ಯರ್ಪಂದ್ಯದ ಅನಂತರ ಮಾತನಾಡಿದ ಡೆಲ್ಲಿ ಕಪ್ತಾನ ಶ್ರೇಯಸ್ ಅಯ್ಯರ್, ಈ ಸೋಲು ಫ್ಲೇ ಆಫ್ ವೇಳೆ ತಂಡದ ಉತ್ತಮ ರಿಯಾಲಿಟಿ ಚೆಕ್ ಎಂದು ಹೇಳಿದ್ದಾರೆ.
ಒಂದು ರೀತಿಯ ಆರಂಭದ ಅನಂತರ (ಒಂದು ಹಂತದಲ್ಲಿ 52/2) ನಾವು ಗುರಿಯ ಹತ್ತಿರವಾದರೂ ತಲುಪಬೇಕಾಗಿತ್ತು. ಇದು ತಂಡದ ರಿಯಾಲಿಟಿ ಚೆಕ್. ಎಲ್ಲಿ ಎಡವಿದೆವು ಎಂದು ಅರಿತುಕೊಂಡು ಮತ್ತೆ ಬಲಿಷ್ಠವಾಗಿ ಮೂಡಿಬರಬೇಕು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಸಂಕ್ಷಿಪ್ತ ಸ್ಕೋರ್: ಚೆನ್ನೈ ಸೂಪರ್ ಕಿಂಗ್ಸ್-4 ವಿಕೆಟಿಗೆ 179. ಡೆಲ್ಲಿ ಕ್ಯಾಪಿಟಲ್ಸ್- 16.2 ಓವರ್‌ಗಳಲ್ಲಿ 99 ರನ್‌ಗೆ ಅಲೌಟ್ (ಶ್ರೇಯಸ್ ಅಯ್ಯರ್ 44, ಶಿಖರ್ ಧವನ್ 14, ಇಮ್ರಾನ್ ತಾಹಿರ್ 12ಕ್ಕೆ4, ಜಡೇಜ 9ಕ್ಕೆ3, ಹರ್ಭಜನ್ 28ಕ್ಕೆ1). ಪಂದ್ಯಶ್ರೇಷ್ಠ: ಎಂ.ಎಸ್. ಧೋನಿ. ಏಕ್ಸ್‌ಟ್ರಾ ಇನ್ನಿಂಗ್ಸ್
ಚೆನ್ನೈ-ಡೆಲ್ಲಿ
* ಚಿಪಾಕ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್/ಡೇರ್‌ಡೆವಿಲ್ಸ್ ವಿರುದ್ಧ ಸತತ 6ನೇ ಬಾರಿಗೆ ಜಯ ಸಾಧಿಸಿದೆ. ಡೆಲ್ಲಿ 2008 ಮತ್ತು 2010ರಲ್ಲಿ ಇಲ್ಲಿ ಮೊದೆಲೆರಡು ಪಂದ್ಯಗಳನ್ನು ಜಯಿಸಿತ್ತು. 2011ರಿಂದ ಆಡಿದ ಎಲ್ಲ ಪಂದ್ಯಗಳಲ್ಲೂ ಸೋತಿದೆ.
* ಚೆನ್ನೈಗೆ 80 ರನ್‌ಗಳ ಜಯ ಐಪಿಎಲ್‌ನಲ್ಲಿ ರನ್ ಲೆಕ್ಕಾಚಾರದಲ್ಲಿ 6ನೇ ಅತೀ ದೊಡ್ಡ ಗೆಲುವು. ಈ 6 ಗೆಲುವುಗಳಲ್ಲಿ 4 ಜಯಗಳು ಡೆಲ್ಲಿ ವಿರುದ್ಧ ಒಲಿದಿವೆ.
* ಎಂ.ಎಸ್. ಧೋನಿ 17 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ರೋಹಿತ್ ಶರ್ಮ ಅವರೊಂದಿಗೆ ಜಂಟಿ ದಾಖಲೆ. ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಯಾದಿಯಲ್ಲಿ ಕ್ರಿಸ್ ಗೇಲ್ ಮೊದಲಿಗರು (21). ದ್ವಿತೀಯ ಸ್ಥಾನದಲ್ಲಿ ಎಬಿ ಡಿ ವಿಲಿಯರ್ (20).
* ಸುರೇಶ್ ರೈನಾ ಐಪಿಎಲ್‌ನಲ್ಲಿ 100 ಕ್ಯಾಚ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಡೆಲ್ಲಿ ಇನ್ನಿಂಗ್ಸ್ ಮೊದಲ ಓವರ್‌ನಲ್ಲಿ ಪೃಥ್ವಿ ಶಾ ಅವರ ಕ್ಯಾಚ್ ಪಡೆಯುವ ಮೂಲಕ ರೈನಾ ಈ ಮೈಲುಗಲ್ಲು ತಲುಪಿದರು. 99ನೇ ಕ್ಯಾಚ್ ಪಡೆದ ಬಳಿಕ 100ನೇ ಕ್ಯಾಚ್‌ಗೆ ರೈನಾ 9 ಪಂದ್ಯಗಳನ್ನು ಕಾಯಬೇಕಾಯಿತು ಎನ್ನುವುದು ಗಮನಾರ್ಹ.
* 59 ರನ್ ಬಾರಿಸುವ ಮೂಲಕ ರೈನಾ ಟಿ20 ಕ್ರಿಕೆಟಿನಲ್ಲಿ 50ನೇ ಫಿಫ್ಟಿ ಪ್ಲಸ್ ರನ್ ದಾಖಲಿಸಿದರು. ಅವರು ಟಿ20ಯಲ್ಲಿ 50 ಅರ್ಧಶತಕ ಬಾರಿಸಿದ 5ನೇ ಭಾರತೀಯ ಕ್ರಿಕೆಟಗರಾಗಿದ್ದಾರೆ.
* ರೈನಾ 59 ರನ್ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ 300 ರನ್ ದಾಖಲಿಸಿದರು. ಅವರು ಎಲ್ಲ 12 ಆವೃತ್ತಿಗಳಲ್ಲಿಯೂ 300 ರನ್ ಗಳಿಸಿದ ಏಕೈಕ ಆಟಗಾರ. 2018ರ ಆವೃತ್ತಿ ಹೊರತುಪಡಿಸಿ ಉಳಿದೆಲ್ಲ ಆವೃತ್ತಿಗಳಲ್ಲಿಯೂ ರೋಹಿತ್ ಶರ್ಮ 300 ಪ್ಲಸ್ ರನ್ ಹೊಡೆದಿದ್ದರು.
* ಇಮ್ರಾನ್ ತಾಹಿರ್ ಟಿ20 ಕ್ರಿಕೆಟಿನಲ್ಲಿ 11 ಬಾರಿ 4 ವಿಕೆಟ್‌ಗಳ ಹೌಲ್ ಗಳಿಸಿದ್ದಾರೆ. ಇದು ಲೆಗ್ ಸ್ಪಿನ್ನರ್‌ಗಳ ಪೈಕಿ ಶಾಹಿದ್ ಅಫ್ರಿದಿಯೊಂದಿಗೆ ಜಂಟಿ ದಾಖಲೆ. ಒಟ್ಟಾರೆಯಾಗಿ ಟಿ20ರಲ್ಲಿ 11 ನಾಲ್ಕು ವಿಕೆಟ್ ಹೌಲ್ ಜಂಟಿ 4ನೇ ಸ್ಥಾನವಾಗಿದೆ. ತಾಹಿರ್‌ಗಿಂತ ಲಸಿತ ಮಾಲಿಂಗ (14), ಶಕೀಬ್ ಅಲ್ ಹಸನ್ (12), ಸುನೀಲ್ ನಾರಾಯಣ್ (12) ಟಿ20ಯಲ್ಲಿ ಅತ್ಯಧಿಕ 4 ವಿಕೆಟ್‌ಗಳ ಹೌಲ್ ಹೊಂದಿದ್ದಾರೆ. ಉಮರ್ ಗುಲ್ ಮತ್ತು ಡ್ವೇನ್ ಬ್ರಾವೊ ಅವರು 11 ಬಾರಿ 4 ವಿಕೆಟ್‌ಗಳ ಹೌಲ್ ದಾಖಲಿಸಿದ್ದಾರೆ.