ಲೀಡ್ಸ್: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂಪಾಯರ್ ಬಳಿಯಿಂದ ಚೆಂಡು ಕೇಳಿ ಪಡೆದ ಮಾತ್ರಕ್ಕೆ ನಿವೃತ್ತಿ ಆಗುತ್ತಾರೆಂದು ಅರ್ಥವಲ್ಲ ಎಂದು ಭಾರತ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.
“ಈ ಚೆಂಡನ್ನು ಧೋನಿ ಬೌಲಿಂಗ್ ಕೋಚ್ ಭರತ್ ಅರುಣ್ ಅವರಿಗೆ ತೋರಿಸಲು ಬಯಸಿದ್ದರು. ಐದಕ್ಕೂ ಹೆಚ್ಚು ಓವರ್ ಬಾಕಿ ಇರುವಾಗಲೇ ಪಂದ್ಯ ಮುಗಿದಿತ್ತು. ಆಗ ಚೆಂಡಿನ ಸ್ಥಿತಿ ಗತಿಯನ್ನು ಗಮನಿಸುವುದು ಧೋನಿಯ ಉದ್ದೇಶವಾಗಿತ್ತು, ಅಷ್ಟೇ. ಇಷ್ಟಕ್ಕೇ ನಿವೃತ್ತಿಯ ಕತೆ ಕಟ್ಟುವುದು ಶುದ್ಧ ನಾನ್‌ಸೆನ್ಸ್…’ ಎಂದು ರವಿಶಾಸ್ತ್ರಿ ತುಸು ಖಾರವಾಗಿಯೇ ಹೇಳಿದರು.
ಇಂಗ್ಲೆಂಡ್ ಎದುರಿನ 3ನೇ ಏಕದಿನ ಪಂದ್ಯ ಮುಗಿದ ಅನಂತರ ಧೋನಿ ಅಂಪಾಯರ್‌ಗಳ ಬಳಿ ಹೋಗಿ ಚೆಂಡನ್ನು ಕೇಳಿ ಪಡೆದುಕೊಂಡಿದ್ದಾರೆ. ಅವರ ಈ ಕ್ರಮವನ್ನು ವಿಪರೀತವಾಗಿ ಅರ್ಥ ಮಾಡಿಕೊಂಡಿರುವ ಅಭಿಮಾನಿಗಳು, “ಧೋನಿ ತಮ್ಮ ಕಳಫೆ ಫಾರ್ಮ್ನಿಂದ ನೊಂದಿದ್ದಾರೆ. ಆದ್ದರಿಂದ ನಿವೃತ್ತಿ ಹೇಳಲು ಚಿಂತಿಸಿರಬಹುದು. ಅದೇ ಕಾರಣದಿಂದ ನೆನಪಿಗಾಗಿ ಚೆಂಡನ್ನು ಅಂಪಾಯರ್‌ಗಳಿಂದ ಕೇಳಿ ಪಡೆದುಕೊಂಡಿದ್ದಾರೆ’ ಎಂದು ಊಹಿಸಿದ್ದಾರೆ.
ಧೋನಿ 2014ರಲ್ಲಿ ದಿಢೀರನೆ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ ಎಲ್ಲರನ್ನೂ ಆಘಾತಕ್ಕೆ ತಳ್ಳಿದ್ದರು. ಅದೇ ರೀತಿ ಇಲ್ಲೂ ಆಗಬಹುದು ಎಂಬ ಊಹೆ ಅಭಿಮಾನಿಗಳದ್ದು. ಇದನ್ನೀಗ ರವಿಶಾಸ್ತ್ರಿ ತಳ್ಳಿಹಾಕಿದ್ದಾರೆ.
ಧೋನಿಯೇ ನಾಯಕ!
ಇದು ಧೋನಿಗೆ ಸಂಬಂಧಿಸಿದ ಸ್ವಾರಸ್ಯಕರ ಸುದ್ದಿ. ಅದೇನೆಂದರೆ, ಅವರು ಈಗಲೂ ಭಾರತ ತಂಡದ ನಾಯಕ! ಹೀಗೆ ದಾಖಲಾಗಿರುವುದು ಬೇರೆಲ್ಲೂ ಅಲ್ಲ, ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ!
ಧೋನಿಯ ಪ್ರೊಫೈಲ್‌ನಲ್ಲಿ ಇಂಥದೊಂದು ಎಡವಟ್ಟನ್ನು ಈಗಲೂ ಕಾಣಬಹುದು. ಎಂ.ಎಸ್. ಧೋನಿ, ಕ್ಯಾಪ್ಟನ್,ಇಂಡಿಯಾ ಎಂದೇ ಧೋನಿಯನ್ನು ಪರಿಚಯಿಸಲಾಗಿದೆ. ಧೋನಿ ನಾಯಕತ್ವದಿಂದ ಕೆಳಗಿಳಿದು ಈಗಾಗಲೇ 2 ವರ್ಷಗಳು ಉರುಳಿವೆ. ಅಲ್ಲಿಂದೀಚೆ ಬಿಸಿಸಿಐ ವೆಬ್‌ಸೈಟ್ “ಅಪ್‌ಡೇಟ್’ ಆಗಲೇ ಇಲ್ಲವೇ ಎಂಬುದು ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ಪ್ರಶ್ನೆ!