Advertisement
ಧೋನಿಯೇ ನೀಡಿದ ಹೇಳಿಕೆ ಪ್ರಕಾರ, ಅವರಿನ್ನು ಕೇವಲ ಸಾಮಾನ್ಯ ಆಟಗಾರ ಮಾತ್ರ. ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ-20 ತಂಡಗಳೆರಡರ ಆಯ್ಕೆಗೂ ಲಭ್ಯರಿರುತ್ತಾರೆ. ಅಂದಮೇಲೆ ಧೋನಿ ಇನ್ನು ಬೇರೆಯವರ ನಾಯಕತ್ವದಲ್ಲಿ ಆಡಲು ಸಿದ್ಧ ಎಂದಂತಾಯಿತು. ಆದರೆ ಎಷ್ಟು ಕಾಲ ಹೀಗೆ ಸಾಮಾನ್ಯ ಆಟಗಾರನಾಗಿ ಇರುತ್ತಾರೆ ಎಂಬುದು ಮುಖ್ಯ ಪ್ರಶ್ನೆ. ಅಷ್ಟೇ ನಿಗೂಢ ಕೂಡ. ಏಕೆಂದರೆ ಆರಂಭದಲ್ಲೇ ಉಲ್ಲೇಖೀಸಿದಂತೆ, ಧೋನಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವ ವರ್ಗಕ್ಕೆ ಸೇರಿದವರು!
ಧೋನಿ ಏಕದಿನ ಹಾಗೂ ಟಿ-20 ನಾಯಕತ್ವ ತೊರೆದಿರುವ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಅವರೇಕೆ ಈ ನಿರ್ಧಾರಕ್ಕೆ ಬಂದರು, ಇಂಗ್ಲೆಂಡ್ ಸರಣಿ ಧೋನಿ ಪಾಲಿನ ವಿದಾಯ ಸರಣಿ ಆಗಬಹುದುದೇ, ಮುಂದಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಬಹುದೇ, 2019ರ ವಿಶ್ವಕಪ್ ತನಕ ತಂಡದಲ್ಲಿ ಉಳಿಯಬಹುದೇ… ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ದಾಳಿ ಮಾಡುತ್ತವೆ. ಆದರೆ ಇದಕ್ಕೆ ನಿರ್ದಿಷ್ಟ ಉತ್ತರ ಕಂಡುಕೊಳ್ಳುವುದು ಮಾತ್ರ ಆಸಾಧ್ಯ. ಧೋನಿ ನಾಯಕತªದ ವಿಚಾರದಲ್ಲಿ ಎಷ್ಟೊಂದು ತಣ್ಣಗೆ ಇರುತ್ತಾರೋ, ಇಂಥ ನಿರ್ಧಾರಗಳ ವಿಷಯದಲ್ಲಿ ನಿಗೂಢವಾಗಿಯೇ ಗೋಚರಿಸುತ್ತರೆ. ಹೊತ್ತಲ್ಲದ ಹೊತ್ತಿನಲ್ಲಿ, ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡ ಪ್ರಕಟಗೊಳ್ಳುವ ಮೊದಲೇ ಅಥವಾ ಸರಣಿ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ಬೈ ಹೇಳಿದರೂ ಆಶ್ಚರ್ಯವಿಲ್ಲ. ಅದಕ್ಕೇ ಹೇಳಿದ್ದು, ಧೋನಿಯ ಆಟ ಬಲ್ಲವರ್ಯಾರು ಎಂದು!
Related Articles
ನಾಯಕತ್ವ ಬಿಡುವ ನಿರ್ಧಾರಕ್ಕೂ ಮುನ್ನ ಧೋನಿ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಜತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಆದರೆ ಇವರಿಬ್ಬರ ನಡುವೆ ಏನೆಲ್ಲ ಮಾತುಕತೆಗಳಾದವು ಎಂಬುದು ಸದ್ಯಕ್ಕೆ ಸಸ್ಪೆನ್ಸ್!
ಸ್ವತಃ ಧೋನಿಗೆ ತಮ್ಮ ಕ್ರಿಕೆಟ್ ಮೇಲಿನ ವಿಶ್ವಾಸ ಹೊರಟು ಹೋಗಿದೆಯೇ, ನೇರವಾಗಿ ಕೈಬಿಡುವ ಬದಲು ಆಯ್ಕೆಗಾರರೇ ಕೆಲವು “ಠರಾವು’ಗಳನ್ನು ಮಂಡಿಸಿದರೇ, ಬಿಸಿಸಿಐಯಲ್ಲಿ ಸಂಭವಿಸಿದ “ಸುಪ್ರೀಂ ಬದಲಾವಣೆ’ಗಳು ಧೋನಿ ಮೇಲೆ ನೇರ ಪರಿಣಾಮ ಬೀರಿದವೇ, ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆಲುವಿನ ಓಟ ಬೆಳೆಸುತ್ತಿರುವುದರಿಂದ ತಾನಿನ್ನು ಮೂಲೆಗುಂಪಾಗಲಿದ್ದೇನೆ ಎಂದು ಅನಿಸಿದೆಯೇ, ಯುವ ಕೀಪರ್‌ಗಳಾದ ರಿಷಬ್ ಪಂತ್, ಇಶಾನ್ ಕಿಶಾನ್ ಅವರ ಬೆಳವಣಿಗೆ ತನಗೆ ತೊಡರುಗಾಲಾಗುತ್ತದೆಂದು ಭಾವಿಸಿದರೇ… ಯಾವುದಕ್ಕೂ ಉತ್ತರ ಸಿಗುತ್ತಿಲ್ಲ. ಅಥವಾ ಇವೆಲ್ಲದಕ್ಕೂ ಉತ್ತರ “ಹೌದು’ ಎಂದಾಗಿರಲೂಬಹುದು!
ಧೋನಿ ಇನ್ನೂ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾದರೆ ಅವರ ಫಾರ್ಮ್ ಮತ್ತು ಫಿಟ್‌ನೆಸ್ ನಿರ್ಣಾಯಕವಾಗುತ್ತದೆ. ಅವರ ದೈಹಿಕ ಕ್ಷಮತೆ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಬ್ಯಾಟಿಂಗ್ ಫಾರ್ಮ್ ಮಾತ್ರ ಮೊದಲಿನಂತಿಲ್ಲ ಎಂಬುದು ಗುಟ್ಟೇನಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿ ಧೋನಿ ಭವಿಷ್ಯವನ್ನು ನಿರ್ಧರಿಸಲಿದೆ ಎಂದಷ್ಟೇ ಹೇಳಬಹುದು.
Advertisement
ಲಾಸ್ಟ್ ಬಾಲ್: ಧೋನಿ ದಿಢೀರ್ ನಿರ್ಧಾರಗಳನ್ನು ಯಾಕಾಗಿ ತೆಗೆದುಕೊಂಡರು ಎಂಬುದು ಸ್ಪಷ್ಟಗೊಳ್ಳಬೇಕಾದರೆ “ಎಂ.ಎಸ್. ಧೋನಿ-2′ ಸಿನೆಮಾ ತನಕ ಕಾಯಬೇಕಾಗಬಹುದು!
ಕೂಲ್ ಕ್ಯಾಪ್ಟನ್ ಮೈಲುಗಲ್ಲುಗಳು…* ಮಹೇಂದ್ರ ಸಿಂಗ್ ಧೋನಿ ಐಸಿಸಿಯ ಎಲ್ಲ ಪ್ರಮುಖ 3 ಕ್ರಿಕೆಟ್ ಪಂದ್ಯಾವಳಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ. ಧೋನಿ ನಾಯಕತ್ವದಲ್ಲಿ ಭಾರತ ಟಿ-20 ವಿಶ್ವಕಪ್ (2007). ಏಕದಿನ ವಿಶ್ವಕಪ್ (2011) ಮತ್ತು ಚಾಂಪಿಯನ್ಸ್ ಟ್ರೋಫಿ (2013) ಚಾಂಪಿಯನ್ ಆಗಿತ್ತು. * ಧೋನಿ ನಾಯಕತ್ವದ ವೇಳೆ, 5 ಅಥವಾ ಅದಕ್ಕಿಂತ ಹೆಚ್ಚಿನ ತಂಡಗಳು ಪಾಲ್ಗೊಂಡ ಸೀಮಿತ ಓವರ್‌ಗಳ ಟೂರ್ನಿಯಲ್ಲಿ ಭಾರತ 4 ಸಲ ಪ್ರಶಸ್ತಿ ಜಯಿಸಿದೆ. * ಧೋನಿ 110 ಏಕದಿನ ಪಂದ್ಯಗಳಲ್ಲಿ ಜಯ ಸಾಧಿಸಿ, ಈ ಸಾಧಕರ ಯಾದಿಯ 2ನೇ ಸ್ಥಾನ ಅಲಂಕರಿಸಿದ್ದಾರೆ. 165 ಪಂದ್ಯಗಳಲ್ಲಿ ಗೆಲುವು ಕಂಡ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. 100 ಗೆಲುವು ಕಂಡ ಮತ್ತೂಬ್ಬ ನಾಯಕನೆಂದರೆ ಅಲನ್ ಬೋರ್ಡರ್. * ಧೋನಿ ಅತ್ಯಧಿಕ 110 ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ನಾಯಕ. 2ನೇ ಸ್ಥಾನದಲ್ಲಿರುವವರು ಮೊಹಮ್ಮದ್ ಅಜರುದ್ದೀನ್ (90). * ಧೋನಿ ಅತೀ ಹೆಚ್ಚು 41 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ನಾಯಕನಾಗಿದ್ದಾರೆ. ಡ್ಯಾರನ್ ಸಮ್ಮಿಗೆ 2ನೇ ಸ್ಥಾನ (27 ಗೆಲುವು). * ಧೋನಿ 72 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇದೊಂದು ವಿಶ್ವದಾಖಲೆ. * ಧೋನಿ 199 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದು ಭಾರತೀಯ ದಾಖಲೆ. ಅಜರುದ್ದೀನ್‌ಗೆ ಅನಂತರದ ಸ್ಥಾನ (174). ವಿಶ್ವ ಮಟ್ಟದಲ್ಲಿ ಧೋನಿ 3ನೇ ಸ್ಥಾನದಲ್ಲಿದ್ದಾರೆ. ಇವರಿಗಿಂತ ಮುಂದಿರುವ ನಾಯಕರೆಂದರೆ ರಿಕಿ ಪಾಂಟಿಗ್ (230) ಮತ್ತು ಸ್ಟೀಫನ್ ಫ್ಲೆಮಿಂಗ್ (218). * ಧೋನಿ ಎಲ್ಲ 3 ಮಾದರಿಗಳಲ್ಲಿ 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ದೇಶವನ್ನು ಮುನ್ನಡೆಸಿದ ವಿಶ್ವದ ಏಕೈಕ ನಾಯಕ. * ಧೋನಿ ನಾಯಕನಾಗಿ ಏಕದಿನದಲ್ಲಿ 6,633 ರನ್ ಪೇರಿಸಿದ್ದಾರೆ. ಅನಂತರದ ಸ್ಥಾನದಲ್ಲಿರುವ ನಾಯಕನ ಸಾಧನೆಗಿಂತ ಇದು 3 ಪಟ್ಟು ಹೆಚ್ಚು! 2ನೇ ಸ್ಥಾನದಲ್ಲಿರುವ ಕುಮಾರ ಸಂಗಕ್ಕರ ಗಳಿಕೆ 1,756 ರನ್ ಮಾತ್ರ. * ಧೋನಿ ಟಿ-20 ಕ್ರಿಕೆಟ್‌ನಲ್ಲಿ ಕೀಪರ್ ಆಗಿದ್ದುಕೊಂಡು ಸಾವಿರ ರನ್ ಬಾರಿಸಿರುವ ವಿಶ್ವದ ಏಕೈಕ ನಾಯಕ. * ಧೋನಿ ಸರ್ವಾಧಿಕ 271 ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕ್ಯಾಪ್ಟನ್ ಕಂ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದವರ್ಯಾರೂ 100 ಪಂದ್ಯಗಳ ಗಡಿ ದಾಟಿಲ್ಲ. ಸಂಗಕ್ಕರ 2ನೇ ಸ್ಥಾನದಲ್ಲಿದ್ದಾರೆ (67). * ಏಕದಿನದಲ್ಲಿ ನಾಯಕನಾಗಿ ಧೋನಿ 53.92 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ (ಕನಿಷ್ಠ ಸಾವಿರ ರನ್ ಮಾನದಂಡ). ಈ ಸಾಧನೆಯಲ್ಲಿ ಅವರಿಗೆ 2ನೇ ಸ್ಥಾನ. ಎಬಿ ಡಿ ವಿಲಿಯರ್ ಅಗ್ರಸ್ಥಾನದಲ್ಲಿದ್ದಾರೆ (65.92). ಆದರೆ 5 ಸಾವಿರ ರನ್ ಮಾನದಂಡವ ಪ್ರಕಾರ ಇಲ್ಲಿನ 7 ನಾಯಕರಲ್ಲಿ ಧೋನಿಯೇ ನಂ.1 ಸ್ಥಾನ ಅಲಂಕರಿಸುತ್ತಾರೆ. * ಟಿ-20 ಕ್ರಿಕೆಟಿನ ಯಶಸ್ವೀ ರನ್ ಚೇಸಿಂಗ್ ವೇಳೆ ಧೋನಿ ಅತೀ ಹೆಚ್ಚು 12 ಸಲ ನಾಟೌಟ್ ಆಗಿ ಉಳಿದಿದ್ದಾರೆ. ಜಾರ್ಜ್ ಬೈಲಿಗೆ 2ನೇ ಸ್ಥಾನ (5). – ಎಚ್. ಪ್ರೇಮಾನಂದ ಕಾಮತ್