ವೆಲ್ಲಿಂಗ್ಟನ್: ಮೊನ್ನೆ ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್ನಲ್ಲಿ ಚೆನ್ನೈ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ವಿಚಿತ್ರವಾಗಿ ಔಟಾಗಿದ್ದರು. ಅವರು ಕ್ರೀಸ್‌ನೊಳಗೆ ಇದ್ದರೆನ್ನುವುದು ತೃತೀಯ ಅಂಪೈರ್ ಪರಿಶೀಲನೆಯಲ್ಲಿ ಕಂಡುಬಂದಿದ್ದರೂ, ಅವರನ್ನು ರನೌಟ್ ಎಂದು ತೀರ್ಮಾನಿಸಲಾಗಿತ್ತು.
ಇದರಿಂದ ಚೆನ್ನೈ ಸೋತು ಹೋಗಿತ್ತು. ಇದರ ವಿರುದ್ಧ ಚೆನ್ನೈ ಅಭಿಮಾನಿಗಳು ಭಾರೀ ಟೀಕಾ ಪ್ರಹಾರ ನಡೆಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ನ್ಯೂಜಿಲೆಂಡ್ ಆಲ್ರೌಂಡರ್ ಜಿಮ್ಮಿ ನೀಶಮ್, ಬರೀ ಒಂದು ಚಿತ್ರ ನೋಡಿ, ಧೋನಿ ಔಟ್ ಹೌದೋ, ಅಲ್ಲವೋ ಎಂದು ಹೇಗೆ ನಿರ್ಧರಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಇದರಿಂದ ಚೆನ್ನೈ ಅಭಿಮಾನಿಗಳು ಸಿಟ್ಟಾಗಿದ್ದರಿಂದ ಟ್ವೀಟನ್ನು ಅಳಿಸಿ ಹಾಕಿದ್ದರು.
ಧೋನಿ ಕ್ರೀಸ್‌ನೊಳಗೆ ಇದ್ದ ಚಿತ್ರವನ್ನೇ ಅಭಿಮಾನಿಗಳು ಬಳಸಿಕೊಂಡು, ಮೇಲಿನಂತೆ ಚರ್ಚಿಸುತ್ತಿದ್ದರು. ಅದನ್ನೇ ನೀಶಮ್ ಪ್ರಶ್ನಿಸಿದರು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ನೀಶಮ್‌ರನ್ನು ಟ್ವೀಟ್ ಮೂಲಕ ಕಾಡತೊಡಗಿದರು. ಕಡೆಗೆ ರೋಸಿ ಹೋದ ನೀಶಮ್ ತಮ್ಮ ಟ್ವೀಟನ್ನು ಅಳಿಸಿ ಹಾಕಿದರು. ಆದರೂ ಅದಕ್ಕವರು ಸ್ಪಷ್ಟೀಕರಣ ನೀಡಿದ್ದಾರೆ. ನಾನೇನು ಹೆದರಿ ಓಡಿ ಹೋಗುತ್ತಿಲ್ಲ, ಯಾರಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಓದಿದ್ದನ್ನೇ ಮತ್ತೆ ಮತ್ತೆ ಓದಲು ಬೇಸರವಾಗುತ್ತದೆ, ಅದಕ್ಕೆ ಅಳಿಸುತ್ತೇನೆ ಎಂದು ಹೇಳಿ ಪ್ರಕರಣವನ್ನು ಮುಗಿಸಿದ್ದಾರೆ.