Advertisement

ಧೋನಿ ಅನುಪಸ್ಥಿತಿ ಕಾಡಿತು: ಫ್ಲೆಮಿಂಗ್‌

09:12 AM Apr 29, 2019 | Team Udayavani |

ಚೆನ್ನೈ: ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಗೈರು ತಂಡವನ್ನು ಕಾಡಿತು ಎಂಬುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ತನ್ನದೇ ಅಂಗಳದಲ್ಲಿ ಚೆನ್ನೈ 46 ರನ್ನುಗಳ ಸೋಲನುಭವಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

“ಧೋನಿ ಗೈರು ಯಾವುದೇ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದೇ ಇರದು. ಅವರಿಂದ ತೆರವಾದ ಸ್ಥಾನವನ್ನು ತುಂಬುವುದು ಸುಲಭವಲ್ಲ. ಅಲ್ಲೊಂದು ದೊಡ್ಡ ಶೂನ್ಯವೇ ಆವರಿಸುತ್ತದೆ. ಧೋನಿ ಸ್ಥಾನಕ್ಕೆ ಯಾರು ಎಂಬುದೇ ದೊಡ್ಡ ಪ್ರಶ್ನೆ. ಅವರು ಕಳೆದ ಅನೇಕ ವರ್ಷಗಳಿಂದ ಚೆನ್ನೈ ತಂಡದ ಆಧಾರ ಸ್ತಂಭವಾಗಿದ್ದಾರೆ. ಅವರ ಸ್ಥಾನ ತುಂಬಲು ನಾವು ಪ್ರಯತ್ನ ಮಾಡುತ್ತಿಲ್ಲ ಎಂದರ್ಥವಲ್ಲ. ಆದರೆ ಅದೊಂದು ಬೃಹತ್‌ ಕಂದಕ…’ ಎಂಬುದಾಗಿ ಫ್ಲೆಮಿಂಗ್‌ ಹೇಳಿದರು.

ಶುಕ್ರವಾರ ರಾತ್ರಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 4 ವಿಕೆಟಿಗೆ 155 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಚೆನ್ನೈ 17.4 ಓವರ್‌ಗಳಲ್ಲಿ 109 ರನ್ನಿಗೆ ಕುಸಿಯಿತು. ಲಸಿತ ಮಾಲಿಂಗ 37ಕ್ಕೆ 4, ಕೃಣಾಲ್‌ ಪಾಂಡ್ಯ 7ಕ್ಕೆ 2 ಮತ್ತು ಬುಮ್ರಾ 10 ರನ್ನಿಗೆ 2 ವಿಕೆಟ್‌ ಹಾರಿಸಿ ಘಾತಕವಾಗಿ ಪರಿಣಮಿಸಿದರು. ಚೆನ್ನೈ ಪರ ಆರಂಭಿಕನಾಗಿ ಇಳಿದ ಮುರಳಿ ವಿಜಯ್‌ ಅವರದೇ ಸರ್ವಾಧಿಕ ಗಳಿಕೆ (38). ರೋಹಿತ್‌ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (67). ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಮನೋಬಲ ಹೆಚ್ಚಿಸುವ ಧೋನಿ
“ಧೋನಿ ಆಡದ ಎರಡೂ ಪಂದ್ಯಗಳಲ್ಲಿ ತಂಡದ ನಿರ್ವ ಹಣೆ ಸಾಮಾನ್ಯ ಮಟ್ಟ ದಲ್ಲಿತ್ತು. ಧೋನಿ ಬ್ಯಾಟಿಂಗ್‌ ಮಾಡದಿದ್ದರೂ ಪರಾÌಗಿಲ್ಲ, ಅವರು ತಂಡದಲ್ಲಿದ್ದರೆ ಸಾಕು, ಉಳಿದ ಆಟಗಾರರ ಮನೋಬಲ ಸಹಜವಾಗಿ ಹೆಚ್ಚುತ್ತದೆ. ಕಳೆದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ ಮಾಡಿರಲಿಲ್ಲ, ಆದರೂ ನಾವು ಗೆಲುವು ಸಾಧಿಸುವಲ್ಲಿ ಯಶಸ್ವಿ ಯಾಗಿದ್ದೆವು. ಒಟ್ಟಾರೆ, ಧೋನಿ ತಂಡದ ಲ್ಲಿರಬೇಕು, ಅಷ್ಟೇ…’ ಎಂದು ಫ್ಲೆಮಿಂಗ್‌ ಹೇಳಿದರು.

ಸಂಕ್ಷಿಪ್ತ ಸ್ಕೋರ್‌
ಮುಂಬೈ-4 ವಿಕೆಟಿಗೆ 155. ಚೆನ್ನೈ-17.4 ಓವರ್‌ಗಳಲ್ಲಿ 109 (ವಿಜಯ 38, ಸ್ಯಾಂಟ್ನರ್‌ 22, ಬ್ರಾವೊ 20, ಮಾಲಿಂಗ 37ಕ್ಕೆ 4, ಕೃಣಾಲ್‌ 7ಕ್ಕೆ 2, ಬುಮ್ರಾ 10ಕ್ಕೆ 2).
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ

Advertisement

ಧೋನಿ ಗೈರಲ್ಲಿ 2 ಸೋಲು
ಮುಂಬೈ ಎದುರಿನ ಈ ಪಂದ್ಯದಲ್ಲಿ ಸುರೇಶ್‌ ರೈನಾ ಚೆನ್ನೈತಂಡವನ್ನು ಮುನ್ನಡೆಸಿದ್ದರು. ಇದಕ್ಕೂ ಮುನ್ನ ಹೈದರಾಬಾದ್‌ ಎದುರಿನ ಎ. 17ರ ಪಂದ್ಯದಲ್ಲೂ ಧೋನಿ ಆಡಿರಲಿಲ್ಲ. ಆಗಲೂ ರೈನಾ ಅವರೇ ನಾಯಕರಾಗಿದ್ದರು. ಆದರೆ ಈ ಎರಡೂ ಪಂದ್ಯಗಳನ್ನು ಚೆನ್ನೈ ಸೋತಿತು.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ತವರಿನ ಚಿಪಾಕ್‌ ಅಂಗಳದಲ್ಲಿ ಆಡಿದ ಕಳೆದ 19 ಪಂದ್ಯಗಳಲ್ಲಿ ಚೆನ್ನೈ ಕೇವಲ 2ನೇ ಸೋಲನುಭವಿಸಿತು. ಎರಡೂ ಸಲ ಜಯ ಸಾಧಿಸಿದ ತಂಡವೆಂಬ ಹೆಗ್ಗಳಿಕೆ ಮುಂಬೈನದ್ದಾಗಿದೆ. 2015ರ ಪಂದ್ಯದಲ್ಲಿ ಮುಂಬೈ 5 ವಿಕೆಟ್‌ಗಳ ಜಯ ಸಾಧಿಸಿತ್ತು.
* ತವರಿನ ಅಂಗಳದಲ್ಲಿ ಚೆನ್ನೈ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಯಿತು (109). ಇದಕ್ಕೂ ಮುನ್ನ 2008-2012ರ ಅವಧಿಯಲ್ಲಿ 3 ಸಲ 112 ರನ್‌ ಮಾಡಿತ್ತು. 2008ರಲ್ಲಿ ಆರ್‌ಸಿಬಿ ವಿರುದ್ಧ 8ಕ್ಕೆ 112 ರನ್‌, 2010ರಲ್ಲಿ ಡಿಡಿ ವಿರುದ್ಧ 9ಕ್ಕೆ 112 ರನ್‌ ಮಾಡಿದರೆ, 2012ರಲ್ಲಿ ಮುಂಬೈ ವಿರುದ್ಧ 112ಕ್ಕೆ ಆಲೌಟ್‌ ಆಗಿತ್ತು.
* ಚೆನ್ನೈ ತನ್ನ 2ನೇ ಕನಿಷ್ಠ ಮೊತ್ತದ ದಾಖಲೆಯನ್ನು ಸರಿದೂಗಿಸಿತು. 2008ರ ರಾಜಸ್ಥಾನ್‌ ಎದುರಿನ ಪಂದ್ಯದಲ್ಲೂ ಚೆನ್ನೈ 109ಕ್ಕೆ ಆಲೌಟ್‌ ಆಗಿತ್ತು. 2013ರಲ್ಲಿ ಮುಂಬೈ ವಿರುದ್ಧ 79 ರನ್ನಿಗೆ ಆಲೌಟ್‌ ಆದದ್ದು ಚೆನ್ನೈ ತಂಡದ ಕನಿಷ್ಠ ಸ್ಕೋರ್‌ ಆಗಿದೆ.
* ರೋಹಿತ್‌ ಶರ್ಮ 16 ಇನ್ನಿಂಗ್ಸ್‌ಗಳ ಬಳಿಕ ಐಪಿಎಲ್‌ನಲ್ಲಿ ಮೊದಲ ಅರ್ಧ ಶತಕ ಹೊಡೆದರು. ಅವರು ಕಳೆದ ವರ್ಷ ಚೆನ್ನೈ ವಿರುದ್ಧವೇ ಪುಣೆಯಲ್ಲಿ ಕೊನೆಯ ಅರ್ಧ ಶತಕ ದಾಖಲಿಸಿದ್ದರು.
* ಲಸಿತ ಮಾಲಿಂಗ ಐಪಿಎಲ್‌ನಲ್ಲಿ 7ನೇ ಸಲ 4 ವಿಕೆಟ್‌ ಉರುಳಿಸಿದರು (117 ಪಂದ್ಯ). ಇದೊಂದು ಜಂಟಿ ದಾಖಲೆ. ಸುನೀಲ್‌ ನಾರಾಯಣ್‌ ಕೂಡ 7 ಸಲ 4 ವಿಕೆಟ್‌ ಹಾರಿಸಿದ್ದಾರೆ (107 ಪಂದ್ಯ).
* ಮಾಲಿಂಗ ಟಿ20 ಕ್ರಿಕೆಟ್‌ನಲ್ಲಿ 14 ಸಲ 4 ವಿಕೆಟ್‌ ಕಿತ್ತರು. ಇದು ಕೂಡ ದಾಖಲೆಯಾಗಿದೆ. ಸುನೀಲ್‌ ನಾರಾಯಣ್‌, ಶಕಿಬ್‌ ಅಲ್‌ ಹಸನ್‌ 12 ಸಲ ಈ ಸಾಧನೆಗೈದು ದ್ವಿತೀಯ ಸ್ಥಾನದಲ್ಲಿದ್ದಾರೆ.
* ಮಾಲಿಂಗ ಚೆನ್ನೈ ವಿರುದ್ಧ ಗರಿಷ್ಠ 30 ವಿಕೆಟ್‌ ಉರುಳಿಸಿದರು. ಇದು ಐಪಿಎಲ್‌ನಲ್ಲಿ ನಿರ್ದಿಷ್ಟ ತಂಡವೊಂದರ ವಿರುದ್ಧ ಬೌಲರ್‌ ಒಬ್ಬನ ಅತ್ಯುತ್ತಮ ಸಾಧನೆಯಾಗಿದೆ. ಉಮೇಶ್‌ ಯಾದವ್‌ ಪಂಜಾಬ್‌ ವಿರುದ್ಧ 29 ವಿಕೆಟ್‌ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ.
* ರೋಹಿತ್‌ ಶರ್ಮ ಐಪಿಎಲ್‌ನಲ್ಲಿ 17 ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಕ್ರಿಸ್‌ ಗೇಲ್‌ (21) ಮತ್ತು ಎಬಿ ಡಿ ವಿಲಿಯರ್ (20) ಮೊದಲೆರಡು ಸ್ಥಾನದಲ್ಲಿದ್ದಾರೆ. ಈ ಸಂದರ್ಭದಲ್ಲಿ ತಲಾ 16 ಸಲ ಪಂದ್ಯಶ್ರೇಷ್ಠರಾದ ಯೂಸುಫ್ ಪಠಾಣ್‌, ಧೋನಿ ಮತ್ತು ವಾರ್ನರ್‌ ದಾಖಲೆಯನ್ನು ರೋಹಿತ್‌ ಮುರಿದರು.

Advertisement

Udayavani is now on Telegram. Click here to join our channel and stay updated with the latest news.

Next