Advertisement

ನಿವೃತ್ತಿ ವಿಚಾರ‌: ಧೋನಿ ನಡೆ ಇನ್ನಷ್ಟು ನಿಗೂಢ!

10:05 AM Oct 28, 2019 | Sriram |

ಹೊಸದಿಲ್ಲಿ: ಧೋನಿ ಎಂಬ ಹೆಸರು ಭಾರತ ಕ್ರೀಡಾವಲಯದಲ್ಲಿ ಒಂದು ಮಾಂತ್ರಿಕ ಶಕ್ತಿ. ಅವರನ್ನು ದಾಖಲೆಗಳಿಂದ ಅಳೆಯಲು ಸಾಧ್ಯವಿಲ್ಲ. ದಾಖಲೆಗಳನ್ನೇ ನೋಡಿದರೆ ಆಡಿರುವ ಪಂದ್ಯಗಳು, ಗಳಿಸಿರುವ ರನ್‌, ಬಾರಿಸಿರುವ ಶತಕ ಬಹಳ ಜಾಸ್ತಿಯೇನಿಲ್ಲ. ಆದರೆ ನಾಯಕನಾಗಿ ಅವರು ಮೂಡಿಸಿರುವ ಸಂಚಲನ, ಅವರು ನೀಡಿದ ಫ‌ಲಿತಾಂಶ ಅಗಾಧ.

Advertisement

ಸತತ 15 ವರ್ಷಗಳ ಕಾಲ ನಿರಂತರವಾಗಿ ಭಾರತ ಕ್ರಿಕೆಟ್‌ ತಂಡದ ಪರ ಆಡಿರುವ ಅವರೀಗ ನಿವೃತ್ತಿಯ ಸನಿಹದಲ್ಲಿದ್ದಾರೆ. ಅದಕ್ಕೆ ಒಂದೋ ಎರಡೋ ಹೆಜ್ಜೆಯಷ್ಟೇ ಬಾಕಿ. ಆದರೆ ಈ ನಿವೃತ್ತಿ ಈಗ ವಿವಾದದ ಸ್ವರೂಪ ಪಡೆದಿದೆ.

ತಂಡದ ಮುಂದೆ ಕಷ್ಟದ ನಿರ್ಧಾರ
ಅವರು ಯಾವಾಗ ನಿವೃತ್ತಿಯಾಗುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆ ಬಗ್ಗೆ ಧೋನಿಯೂ ಖಚಿತವಾಗಿ ಮಾತನಾಡದೆ ಎಲ್ಲರನ್ನೂ ಗೊಂದಲದಲ್ಲಿಟ್ಟಿದ್ದಾರೆ. ಒಂದು ವೇಳೆ ತಂಡಕ್ಕೆ ಮರಳುತ್ತೇನೆಂದು ಧೋನಿ ಅಧಿಕೃತವಾಗಿ ಹೇಳಿದರೆ ಅವರಿಗೆ ಮತ್ತೆ ಅವಕಾಶ ಸಿಗಲಿದೆಯೇ? ಅಥವಾ ಅವರನ್ನು ಮುಂದುವರಿಸದಿರುವ ಗಟ್ಟಿ ನಿರ್ಧಾರವನ್ನು ಆಯ್ಕೆ ಸಮಿತಿ ಮಾಡುವುದೇ? ಅವರಿಗೆ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸೀತೇ? ಇವೆಲ್ಲ ಸದ್ಯದ ಪ್ರಶ್ನೆಗಳು. ಈ ಪ್ರಶ್ನೆಗಳೇ ಈಗ ವಿವಾದಕ್ಕೆ ಕಾರಣವಾಗಿರುವುದು.

ಅಭಿಪ್ರಾಯ ಖಚಿತಪಡಿಸದ ಧೋನಿ
ಧೋನಿ ಏನನ್ನೂ ಖಚಿತಪಡಿಸದಿರುವು ದರಿಂದ ಅವರ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಬಿಸಿಸಿಐಗೆ ಸಾಧ್ಯವಾಗುತ್ತಿಲ್ಲ. ಅವರ ಅಭಿಪ್ರಾಯ ಖಚಿತಪಡಿಸಿದರೆ, ಉಳಿಸಿಕೊಳ್ಳು ವುದೋ, ಬಿಡುವುದೋ ಎಂದು ಎರಡರಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬಹುದು. ಆ ರೀತಿ ನಡೆದಿಲ್ಲ, ಆದ್ದರಿಂದ ಪ್ರತೀ ಬಾರಿ ತಂಡದ ಆಯ್ಕೆಯಾದಾಗ ಧೋನಿ ಕತೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಧೋನಿ ನಾಯಕರಾಗಿದ್ದಾಗ ಹಿರಿಯ ಕ್ರಿಕೆಟಿ ಗರನ್ನು ಲಯದ ಕೊರತೆಯ ಕಾರಣ ಹೇಳಿ, ಮುಲಾಜಿಲ್ಲದೇ ತಂಡದಿಂದ ದೂರವಿಡ ಲಾಗಿತ್ತು. ಈಗ ಅದೇ ನಿಯಮ ಧೋನಿಗೆ ಯಾಕೆ ಅನ್ವಯವಾಗುವುದಿಲ್ಲ? ಸ್ವತಃ ಧೋನಿ ಯಾಕೆ ತಮ್ಮದೇ ಆದರ್ಶ ಪಾಲಿಸುತ್ತಿಲ್ಲ? 38 ವರ್ಷವಾದ ಮೇಲೂ ಧೋನಿ ಯಾಕೆ ನಿವೃತ್ತಿ ಹೇಳುತ್ತಿಲ್ಲ ಎಂದು ಒಂದು ವರ್ಗ ಬಲವಾಗಿ ಪ್ರಶ್ನಿಸುತ್ತಿದೆ.

Advertisement

ವೇತನ ಸಹಿತ ರಜೆ
ಆದರೆ ಆಯ್ಕೆ ಸಮಿತಿ ಸಂದಿಗ್ಧದಲ್ಲಿದೆ. ಇದಕ್ಕೆ ಕಾರಣವೂ ವಿಚಿತ್ರ. ಧೋನಿ ನಿವೃತ್ತಿ ಹೇಳಿಲ್ಲ, ಹಾಗಂತ ತಂಡದಲ್ಲೂ ಇಲ್ಲ. ಬದಲಿಗೆ ವೇತನಸಹಿತ ರಜೆ ಪಡೆದುಕೊಂಡಿದ್ದಾರೆ. ತಾನು ಆಯ್ಕೆಗೆ ಲಭ್ಯವಿಲ್ಲ ಎಂದು ಅವರೇ ಘೋಷಿಸಿದ್ದಾರೆ. ಅಲ್ಲಿಗೆ ಅವರನ್ನು ಆಯ್ಕೆ ಮಾಡುವುದೋ, ಬಿಡುವುದೋ ಎಂಬ ಪ್ರಶ್ನೆ ಮಂಡಳಿಗಿಲ್ಲ. ಒಂದು ವೇಳೆ ಅವರು ತಂಡಕ್ಕೆ ಮರಳುತ್ತೇನೆಂದು ಹೇಳಿದರೆ ಯಾರನ್ನು ಕೈಬಿಡುವುದು? ಆಯ್ಕೆ ಸಮಿತಿ ಅಧ್ಯಕ್ಷ ಪ್ರಸಾದ್‌, “ಧೋನಿ ನಮ್ಮ ಆದ್ಯತೆಯಲ್ಲ’ ನೇರವಾಗಿ ಹೇಳಿದ್ದಾರೆ. ಎಂದಿದ್ದಾರೆ. ತಂಡದ ನಾಯಕ ಕೊಹ್ಲಿ, ತರಬೇತುದಾರ ರವಿಶಾಸಿŒ ಮಾತ್ರ ಧೋನಿಯ ಬೆಂಬಲಕ್ಕಿದ್ದಾರೆ!

ನಿವೃತ್ತಿ ನಿರ್ಧಾರ ಸುಲಭವಲ್ಲ
ಧೋನಿ ನಿವೃತ್ತಿ ನಿರ್ಧಾರಕ್ಕೆ ಬರುವುದು ಹೇಳಿದಷ್ಟು ಸುಲಭವಿಲ್ಲ. ಇದಕ್ಕೆ ಕಾರಣ ಕೋಟ್ಯಂತರ ರೂ. ಜಾಹೀರಾತು ಒಪ್ಪಂದ. ಒಮ್ಮೆ ಅವರು ಆಡುವುದು ನಿಲ್ಲಿಸಿದರೆ, ಕೂಡಲೇ ಅವರ ಜನಪ್ರಿಯತೆ ತಗ್ಗುತ್ತದೆ. ಆಗ ಅವರ ಜಾಹೀರಾತು ನೀಡುವ ಉತ್ಪನ್ನಗಳಿಗೆ ಹೇಳಿಕೊಂಡಷ್ಟು ಪ್ರಚಾರ ಸಿಗುವುದಿಲ್ಲ. ಆದ್ದರಿಂದ ನಿವೃತ್ತಿಯನ್ನು ಸಾಧ್ಯವಾದಷ್ಟು ಕಾಲ ಮುಂದೂಡಬೇಕಾದ ಒತ್ತಡವೂ ಅವರ ಮೇಲಿರುತ್ತದೆ.

ಧೋನಿ ಭವಿಷ್ಯ ಗಂಗೂಲಿ ಕೈಯಲ್ಲಿ!
ವಿಡಂಬನೆ, ವಿಪರ್ಯಾಸ… ಏನು ಬೇಕಾದರೂ ಹೇಳಬಹುದು. ಗಂಗೂಲಿ ಭಾರತ ಕ್ರಿಕೆಟ್‌ ತಂಡದಿಂದ ಹೊರಬೀಳಲು ಧೋನಿಯೇ ಕಾರಣ. ಈ ಬಗ್ಗೆ ಧೋನಿಯ ಸಿನಿಮಾದಲ್ಲೂ ಪರೋಕ್ಷ ಉಲ್ಲೇಖವಿದೆ. ಗಂಗೂಲಿ ಒಂದು ಹಂತದಲ್ಲಿ, ಕೆಲವರಿಗೆ ಕ್ರಿಕೆಟ್‌ಗಿಂತ ತಮ್ಮ ಕೂದಲಿನ ಬಗ್ಗೆಯೇ ಕಾಳಜಿ ಎಂದು ಧೋನಿಯನ್ನು ಟೀಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈಗ ಧೋನಿ ನಿವೃತ್ತಿ ಹೇಳುವ ಹಂತದಲ್ಲಿ ಬಿಸಿಸಿಐಗೆ ಗಂಗೂಲಿ ಅಧ್ಯಕ್ಷರಾಗಿದ್ದಾರೆ. ಧೋನಿಯ ಭವಿಷ್ಯ ನಿರ್ಧರಿಸುವ ನೇರ ಅಧಿಕಾರ ಗಂಗೂಲಿ ಕೈಯಲ್ಲಿದೆ. ಒಂದುವೇಳೆ ಧೋನಿಯ ಆಟ ಇನ್ನು ಸಾಕು ಎಂದು ಗಂಗೂಲಿ ನಿರ್ಧರಿಸಿದರೆ, ಮರುಮಾತಿಲ್ಲದೇ ಧೋನಿ ವಿದಾಯ ಹೇಳಬೇಕಾಗುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next