Advertisement

ಮಾಂತ್ರಿಕ ನಾಯಕತ್ವಕ್ಕೆ ಧೋನಿ ವಿದಾಯ

03:45 AM Jan 05, 2017 | Team Udayavani |

ನವದೆಹಲಿ: ಅತ್ಯಂತ ಸಂದಿಗ್ಧ ಸಮಯದಲ್ಲಿ ಭಾರತ ಕ್ರಿಕೆಟ್‌ನ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಹೊಸ ಎತ್ತರಕ್ಕೇರಿಸಿದ್ದ ಮಹೇಂದ್ರ ಸಿಂಗ್‌ ಧೋನಿ ದಿಢೀರನೆ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ಹೇಳಿದ್ದಾರೆ. ಭಾರತ ಟೆಸ್ಟ್‌ ತಂಡಕ್ಕೂ 2014ರ ಡಿಸೆಂಬರ್‌ ತಿಂಗಳಲ್ಲಿ ದಿಢೀರ್‌ ವಿದಾಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ತಮ್ಮ ಶಾಂತ, ಯೋಜಿತ, ಧೀರೋಧಾತ್ತ ನಾಯಕತ್ವದಿಂದ ಎಂತಹ ವ್ಯತಿರಿಕ್ತ ಪರಿಸ್ಥಿತಿಯನ್ನು ಬದಲಿಸುತ್ತಿದ್ದ ಧೋನಿ ಇನ್ನು ಭಾರತ ತಂಡದಲ್ಲಿ ಒಬ್ಬ ಆಟಗಾರನಾಗಿ ಮಾತ್ರ ಉಳಿಯಲಿದ್ದಾರೆ.

Advertisement

ಸದ್ಯಕ್ಕೆ ಅವರು ಜ.15ರಿಂದ ಇಂಗ್ಲೆಂಡ್‌ ವಿರುದ್ಧ ಭಾರತದಲ್ಲಿ ನಡೆಯುವ ತಲಾ 3 ಏಕದಿನ, ಟಿ20 ಪಂದ್ಯಗಳಿಗೆ ಒಬ್ಬ ಆಟಗಾರನಾಗಿ ಲಭ್ಯರಿರಲಿದ್ದಾರೆ. ಮುಂದಿನ ದಿನಗಳಲ್ಲಿ ನಾಯಕ ಧೋನಿ ಮಾಂತ್ರಿಕ ಸ್ಪರ್ಶ ಕಾಣುವುದಿಲ್ಲ ಎನ್ನುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾದರೂ ಒಪ್ಪಿಕೊಳ್ಳಲೇಬೇಕಾಗಿದೆ.

ಧೋನಿ ಅನಿರೀಕ್ಷಿತ ವಿದಾಯವನ್ನು ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಪ್ರಕಟಿಸಿದರು. ಸದ್ಯದ ಮಟ್ಟಿಗೆ ಧೋನಿ ವಿದಾಯ ಅನಿರೀಕ್ಷಿತವೆನಿಸಿದರೂ ಈ ರೀತಿಯ ಬೆಳವಣಿಗೆಯನ್ನು ಭಾರತ ಕ್ರಿಕೆಟ್‌ ಅಭಿಮಾನಿಗಳು ನಿರೀಕ್ಷಿಸಿಯೇ ಇಲ್ಲ ಎನ್ನುವಂತಿಲ್ಲ. ಇದಕ್ಕೆ ಕಾರಣಗಳೂ ಇವೆ. ಈ ಹಿಂದೆ ಟೆಸ್ಟ್‌ಗೂ ಹೀಗೆಯೇ ವಿದಾಯ ಹೇಳಿದ್ದರು. ಎರಡನೆಯದಾಗಿ ಟೆಸ್ಟ್‌ ತಂಡಕ್ಕೆ ನಾಯಕನಾಗಿ ವಿರಾಟ್‌ ಕೊಹ್ಲಿ ಅದ್ಭುತ ಸಾಧನೆ ಮಾಡುತ್ತಿರುವುದರಿಂದ ಧೋನಿ ಪರೋಕ್ಷವಾಗಿ ಒತ್ತಡ ಅನುಭವಿಸಿದ್ದರು. ಹಲವು ಹಿರಿಯ ಕ್ರಿಕೆಟಿಗರು ಕೊಹ್ಲಿಯನ್ನು ನಾಯಕರನ್ನಾಗಿ ಮಾಡಬೇಕೆಂದು ಬಹಿರಂಗವಾಗಿಯೇ ಒತ್ತಾಯಿಸಿದ್ದರು. ಇದಕ್ಕೆ ಸರಿಯಾಗಿ ಧೋನಿ ನಾಯಕತ್ವದಲ್ಲಿ ತಂಡದ ಸಾಧನೆಯೂ ಕುಸಿದಿತ್ತು.

2007ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಧೋನಿ 2014ರವರೆಗೆ ಕ್ರಿಕೆಟ್‌ನ ಮೂರೂ ಮಾದರಿಗೂ ತಂಡದ ನಾಯಕರಾಗಿದ್ದರು. 2015ರ ಆರಂಭದಿಂದ ಟಿ20 ಮತ್ತು ಏಕದಿನಕ್ಕೆ ಮಾತ್ರ ನಾಯಕರಾಗಿದ್ದರು. 2007 ಟಿ20 ವಿಶ್ವಕಪ್‌ನಲ್ಲಿ ಅತ್ಯದ್ಭುತವಾಗಿ ಭಾರತವನ್ನು ಗೆಲ್ಲಿಸಿದ್ದು, 2011ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಎತ್ತಿದ್ದು, 2013ರಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದು ಧೋನಿ ನಾಯಕತ್ವದ ಸ್ಮರಣೀಯ ಗಳಿಗೆಗಳು. ಅವರ ನೇತೃತ್ವದಲ್ಲೇ ಭಾರತ ತಂಡ ಮೊದಲ ಬಾರಿಗೆ ಟೆಸ್ಟ್‌, ಏಕದಿನ, ಟಿ20ಯಲ್ಲಿ ನಂ.1 ಆಗಿತ್ತು ಎನ್ನುವುದು ಗಮನಾರ್ಹ ಸಂಗತಿ.

ಭಾರತ ಕ್ರಿಕೆಟ್‌ನ ಅಭಿಮಾನಿಗಳು ಮತ್ತು ಬಿಸಿಸಿಐ ಪರವಾಗಿ ಧೋನಿಯ ನಾಯಕತ್ವದ ಅದ್ಭುತ ಸಾಧನೆಗಳಿಗಾಗಿ  ಧನ್ಯವಾದ ತಿಳಿಸುತ್ತೇನೆ. ಅವರು ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ನಾಯಕನಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಹೊಸ ಎತ್ತರಕ್ಕೇರಿದೆ. ಅವರ ಸಾಧನೆಗಳು ಚಿರಸ್ಮರಣೀಯವಾಗಿವೆ.
-ರಾಹುಲ್‌ ಜೋಹ್ರಿ, ಬಿಸಿಸಿಐ ಸಿಇಒ 

Advertisement

ಮುಂದಿನ ನಾಯಕ ಕೊಹ್ಲಿ
ಎಲ್ಲ ಲೆಕ್ಕಾಚಾರದ ಪ್ರಕಾರವೇ ನಡೆದರೆ ಸದ್ಯ ಭಾರತ ಟೆಸ್ಟ್‌ ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ಏಕದಿನ, ಟಿ20ಗೂ ನಾಯಕರಾಗಲಿದ್ದಾರೆ. ಟೆಸ್ಟ್‌ನಲ್ಲಿ ನಾಯಕನಾಗಿ ಅದ್ಭುತ ಸಾಧನೆ ಮಾಡಿರುವುದರಿಂದ ಅವರಿಗೆ ಈ ಜವಾಬ್ದಾರಿ ಒಲಿಯುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಒಂದು ವೇಳೆ ಕೊಹ್ಲಿಯೇ ಇದನ್ನು ತಿರಸ್ಕರಿಸಿದರೆ ಮಾತ್ರ ಬಿಸಿಸಿಐ ಬೇರೆ ಚಿಂತನೆ ಮಾಡಬೇಕಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next