Advertisement

ಇಂಡೀಸ್‌ ಪ್ರವಾಸಕ್ಕೆ ಧೋನಿ ಇಲ್ಲ?

11:31 PM Jul 17, 2019 | Sriram |

ಹೊಸದಿಲ್ಲಿ: ಭಾರತದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರ ಭವಿಷ್ಯ ಮತ್ತು ನಿವೃತ್ತಿ ಬಗ್ಗೆ ಊಹಾಪೋಹಗಳು ಮುಂದುವರಿಯುತ್ತಲೇ ಇವೆ. ಅವರು ಟೀಮ್‌ ಇಂಡಿಯಾದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

Advertisement

ಈ ನಡುವೆ, ಮುಂಬರುವ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಧೋನಿ ತೆರಳುವುದಿಲ್ಲ ಎಂಬುದಾಗಿ ವರದಿಯಾಗಿದೆ. ಜು. 19ಕ್ಕೆ ಭಾರತ ತಂಡದ ಆಯ್ಕೆ ನಡೆಯಲಿದ್ದು, ಅಷ್ಟರೊಳಗೆ ಆಯ್ಕೆ ಸಮಿತಿ ಧೋನಿ ಜತೆ ಮಾತಾಡಿ ಸೂಕ್ತ ನಿರ್ಧಾರವೊಂದಕ್ಕೆ ಬರಲಿದೆ ಎನ್ನಲಾಗಿದೆ.

“ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡದೊಂದಿಗೆ ಪ್ರಧಾನ ಕೀಪರ್‌ ಆಗಿ ಪ್ರವಾಸಕ್ಕೆ ತೆರಳುವುದಿಲ್ಲ. 15ರ ಬಳಗದಲ್ಲಿರಬಹುದು. ಆದರೆ ಹನ್ನೊಂದರ ತಂಡದಲ್ಲಿ ಇರುವುದಿಲ್ಲ. ತಂಡಕ್ಕೆ ವಿವಿಧ ಹಂತಗಳಲ್ಲಿ ಧೋನಿ ಮಾರ್ಗದರ್ಶನ ಮಾಡಲಿದ್ದಾರೆ. ಹೀಗಾಗಿ ಅವರನ್ನು ದೂರ ಇಡುವುದು ಆರೋಗ್ಯಕರ ಲಕ್ಷಣವಲ್ಲ. ಈ ಸ್ಥಾನ ರಿಷಭ್‌ ಪಂತ್‌ ಪಾಲಾಗಲಿದೆ. ಪಂತ್‌ ಬೆಳವಣಿಗೆಗೆ ಇದು ಉತ್ತಮ ಅವಕಾಶ ಒದಗಿಸಲಿದೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದ್ದಾಗಿ ವರದಿಯಾಗಿದೆ.

ನಿವೃತ್ತಿಗೆ ಅವಸರವೇಕೆ?
ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಂಡಳಿ ಮೂಲಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾಗಿಯೂ ಈ ವರದಿ ತಿಳಿಸಿದೆ.

“ಧೋನಿ ಯಾವಾಗ ನಿವೃತ್ತಿ ಆಗಬೇಕು ಎಂದು ಹೇಳುವ ಅಗತ್ಯವಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಇದಕ್ಕೆ ಅವರು ಸ್ವತಂತ್ರರು. ಅವರು ತಂಡದಲ್ಲಿ ಏಕೆ ಇರಬೇಕು ಎಂಬುದನ್ನು ಹಲವು ಸಲ ನಿರೂಪಿಸಿದ್ದಾರೆ. ಅವರ ಸಾಧನೆಯನ್ನು ನೋಡಿದರೆ ಇದು ತಿಳಿಯುತ್ತದೆ. ಧೋನಿ ಖಂಡಿತ ನಿವೃತ್ತಿಯಾಗುತ್ತಾರೆ. ಆದರೆ ಇದಕ್ಕೆ ಅವಸರ ಏಕೆ?’ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಈ ವರದಿ ಉಲ್ಲೇಖೀಸಿದೆ.

Advertisement

“ಧೋನಿ ಹೆತ್ತವರ ಬಯಕೆ ನಿವೃತ್ತಿಯೇ ಆಗಿದೆ…’
ಧೋನಿ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಮಾಧ್ಯಮಗಳು, ಅಭಿಮಾನಿಗಳು, ಮಾಜಿಗಳೆಲ್ಲ ನಾನಾ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಅವರ ತಂದೆ-ತಾಯಿಯ ಇಂಗಿತ ಏನಿರಬಹುದು? ಕುತೂಹಲ ಸಹಜ.

ಈ ಕುರಿತು ಧೋನಿ ಅವರ ಬಾಲ್ಯದ ಕೋಚ್‌ ಕೇಶವ್‌ ಬ್ಯಾನರ್ಜಿ ಮಾಧ್ಯಮದವರ ಜತೆ ಮಾತಾಡಿದ್ದು, ತಮ್ಮ ಮಗ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದೇ ಒಳ್ಳೆಯದು ಎಂಬುದು ಧೋನಿ ಹೆತ್ತವರ ಅಭಿಪ್ರಾಯವಾಗಿದೆ ಎಂದಿದ್ದಾರೆ.

“ಇತ್ತೀಚೆಗೆ ನಾನು ರಾಂಚಿಯಲ್ಲಿರುವ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಅವರ ಹೆತ್ತವರು ನನ್ನ ಜತೆ ಬಹಳಷ್ಟು ಮಾತಾಡಿದರು. ಇಡೀ ಮಾಧ್ಯಮ ಲೋಕವೇ ಧೋನಿಯ ನಿವೃತ್ತಿಯನ್ನೇ ಬಯಸುತ್ತಿದೆ. ನಮ್ಮ ಅನಿಸಿಕೆಯೂ ಇದೇ ಆಗಿದೆ. ಅವನು ಕ್ರಿಕೆಟ್‌ನಿಂದ ದೂರ ಸರಿಯುವುದು ಒಳ್ಳೆಯದು. ಆದರೂ ಇಷ್ಟು ವರ್ಷ ಹೇಗೂ ಆಡಿದ್ದಾನೆ, ಇನ್ನೊಂದು ವರ್ಷದ ತನಕ, ಅಂದರೆ 2020ರ ಟಿ20 ವಿಶ್ವಕಪ್‌ ವರೆಗೆ ಅವನು ಆಡಬೇಕೆಂಬ ಬಯಕೆ ನಮ್ಮದು ಎಂದೂ ಹೇಳಿದರು’ ಎಂಬುದಾಗಿ ಬ್ಯಾನರ್ಜಿ ತಿಳಿಸಿದರು.


Advertisement

Udayavani is now on Telegram. Click here to join our channel and stay updated with the latest news.

Next