ಮುಂಬಯಿ: ಇತ್ತೀಚೆಗೆ ಧೋನಿ ಅವರನ್ನು ಭೇಟಿಯಾಗುವ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಧೋನಿ ಮೈದಾನದಲ್ಲಿ ಆಡುತ್ತಿದ್ದಾಗ ಭದ್ರತೆಯನ್ನು ಭೇದಿಸಿ ಅಂಗಳಕ್ಕಿಳಿದು, ಅವರ ಕಾಲಿಗೆ ಬಿದ್ದ ಅಭಿಮಾನಿಗಳನ್ನು ಕಂಡಿದ್ದೇವೆ. ಆದರೆ ಧೋನಿ ಅಭಿಮಾನಿಗಳಲ್ಲಿ ಕೇವಲ ಯುವಕರಷ್ಟೇ ಅಲ್ಲ, ಹಿರಿಯ ನಾಗರಿಕರೂ ಸೇರಿದ್ದಾರೆ ಎಂಬುದಕ್ಕೆ ಬುಧವಾರ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ ಸಾಕ್ಷಿಯಾಯಿತು.
ಈ ಪಂದ್ಯದ ವೇಳೆ ವಯಸ್ಸಾದ ಮಹಿಳೆಯೊಬ್ಬರು “ಐ ಆ್ಯಮ್ ಹಿಯರ್ ಓನ್ಲಿ ಫಾರ್ ಧೋನಿ’ ಎಂಬ ಬ್ಯಾನರ್ ಪ್ರದರ್ಶಿಸುತ್ತಿದ್ದುದು ಕಂಡುಬಂತು. ಇವರು ಧೋನಿಯ ಕಟ್ಟಾ ಅಭಿಮಾನಿ. ಪಂದ್ಯ ಬಳಿಕ ಧೋನಿಯನ್ನು ಭೇಟಿಯಾಗಲು ತಮ್ಮ ಮೊಮ್ಮಗಳೊಂದಿಗೆ ಕಾಯುತ್ತಿದ್ದರು. ಧೋನಿ ಇವರನ್ನು ನಿರಾಸೆಗೊಳಿಸಲಿಲ್ಲ.
ಭದ್ರತಾ ಸಿಬಂದಿಗಳ ಮನವೊಲಿಸಿದ ಅವರಿಬ್ಬರೂ ಧೋನಿಯನ್ನು ಭೇಟಿಯಾಗಲು ಡ್ರೆಸ್ಸಿಂಗ್ ರೂಮ್‌ನತ್ತ ಬಂದರು. ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಸೋಲನುಭವಿಸಿದ ನೋವನ್ನೂ ತೋರ್ಪಡಿಸಿಕೊಳ್ಳದ ಧೋನಿ ಕೂಡಲೇ ರೂಮ್‌ನಿಂದ ಹೊರಬಂದು ಈ “ಸ್ಪೆಷಲ್ ಫ್ಯಾನ್’ಗಳಿಬ್ಬರನ್ನೂ ಭೇಟಿಯಾದರು. ಅಜ್ಜಿ-ಮೊಮ್ಮಗಳ ಜತೆ ಸೆಲ್ಫಿಯನ್ನೂ ತೆಗೆದುಕೊಂಡರು. ಜತೆಗೆ ತಮ್ಮ ಸಹಿಯುಳ್ಳ ಚೆನ್ನೈ ಸೂಪರ್ ಕಿಂಗ್ ತಂಡದ ಜೆರ್ಸಿಯೊಂದನ್ನೂ ನೀಡಿದರು!
“ಕ್ರಿಕೆಟ್ ಲೆಜೆಂಡ್ ಧೋನಿ ಅವರ ಈ ಹೃದಯ ವೈಶಾಲ್ಯ ಕಂಡು ಮನಸ್ಸು ತುಂಬಿ
ಬಂತು’ ಎಂದು ಸಿಎಸ್‌ಕೆ ಟ್ವೀಟ್ ಮಾಡಿದೆ.