Advertisement
ಹೌದು, ಬಹುತೇಕ ಮಂದಿ, ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಮುಗಿದೇ ಹೋಯಿತು ಎಂದು ಭಾವಿಸಿದ್ದರು. ಅವರ್ಯಾರಿಗೂ ಗೊತ್ತಿಲ್ಲ. ಧೋನಿ ರಬ್ಬರ್ ಚೆಂಡು ಇದ್ದಂತೆ ಎಂದು. ಗೋಡೆಗೆ ಎಷ್ಟು ವೇಗವಾಗಿ ಚೆಂಡನ್ನು ಹೊಡೆಯುತ್ತೀರೋ ಅದು ಅಷ್ಟೇ ವೇಗವಾಗಿ ವಾಪಸ್ ಮರಳಿ ಹಿಂದಕ್ಕೆ ಬರುತ್ತದೆ. ಹಾಗೇ ಧೋನಿ ಕೂಡ. ಹಿತಶತ್ರುಗಳು ತೆರೆಮರೆಯಿಂದ ಎಷ್ಟೇ ಕಾಲೆಳೆದರೂ ಧೋನಿ ಮತ್ತೆ ಚಿಗುರಿಕೊಳ್ಳುತ್ತಾರೆ. ಭರ್ಜರಿ ಬ್ಯಾಟಿಂಗ್‌ನಿಂದಲೇ ಎಲ್ಲ ಟೀಕೆಗಳಿಗೂ ಉತ್ತರ ನೀಡುತ್ತಾರೆ. ಭಾರತ ತಂಡ ಸಂಕಷ್ಟದಲ್ಲಿದ್ದಾಗ ನೆಲಕಚ್ಚಿ ಆಡಿ ತಂಡವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸುತ್ತಾರೆ. ಇತ್ತೀಚಿನ ಕೆಲ ಪಂದ್ಯಗಳಲ್ಲಿ ಅವರು ಇದನ್ನೆಲ್ಲ ನಿರೂಪಿಸಿಯೂ ತೋರಿಸಿದ್ದಾರೆ. ಅದು ಧೋನಿಯ ರಿಯಲ್ ತಾಕತ್.
ಧೋನಿ ತಪ್ಪು ಮಾಡುವುದನ್ನೇ ಕೆಲವು ಟೀಕಾಕಾರರು ಕಾಯುತ್ತಿರುತ್ತಾರೆ. ಅದು ವಿಷಯವಲ್ಲ. ಇಲ್ಲಿ ಧೋನಿ ವಿಷಯದ ಚರ್ಚೆಗೆ ಕಾರಣವೂ ಇದೆ. ಧೋನಿ ತನ್ನ ಐಪಿಎಲ್ ಹಳೆಯ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಧೋನಿ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಆಡಿದ್ದರು. ಮೊದಲು ಧೋನಿಗೆ ನಾಯಕತ್ವ ನೀಡಿದ್ದ ಪುಣೆ, ಬಳಿಕ ಧೋನಿಯಿಂದ ಸ್ಟೀವನ್ ಸ್ಮಿತ್‌ಗೆ ನಾಯಕತ್ವವನ್ನು ಹಸ್ತಾಂತರ ಮಾಡಿತ್ತು. ಅದರ ಮಾಲೀಕರಿಂದಲೇ ಕಳೆದ ಆವೃತ್ತಿಯಲ್ಲಿ ಧೋನಿಗೆ ಅವಮಾನವಾಗಿತ್ತು. ಹೀಗಿದ್ದರೂ ಧೋನಿ ಎಲ್ಲವನ್ನೂ ಸಹಿಸಿಕೊಂಡು ಆಡಿದ್ದರು. ಯಾರೊಂದಿಗೂ ವಿವಾದ ಮಾಡಿಕೊಳ್ಳಲಿಲ್ಲ. ತಾಳ್ಮೆಯಿಂದ ಎಲ್ಲವರೂ ಎದುರಿಸಿದ್ದು ಅವರ ಮೂಗಿನ ವ್ಯಕ್ತಿತ್ವ ಮತ್ತು ಕ್ರೀಡಾಮನೋಭಾವಕ್ಕೆ ಶ್ರೇಷ್ಠ ಉದಾಹರಣೆಯಂತಿತ್ತು. ಧೋನಿಗೆ ವಯಸ್ಸಾಯಿತೆ?
ಧೋನಿಗೆ ವಯಸ್ಸಾಯಿತೇ ಎಂದು ಪ್ರಶ್ನಿಸುವವರು ಅನೇಕರಿದ್ದಾರೆ. ಹೀಗೆಲ್ಲ ಪ್ರಶ್ನಿಸುವವರು ಮೊದಲು ತಮ್ಮ ವಯಸ್ಸನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ವಯಸ್ಸಾಗಿದೆ ನಿಜ. ಆದರೆ, ಧೋನಿ ಎಲ್ಲಿಯೂ ಫೇಲ್ ಆಗಿಲ್ಲ. ಉತ್ತಮ ರನ್ ಸರಾಸರಿ ಹೊಂದಿದ್ದಾರೆ. ಚುರುಕಿನ ಕೀಪಿಂಗ್ ಮಾಡುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಕಷ್ಟದ ಸಂದರ್ಭದಲ್ಲಿ ಕೊಹ್ಲಿ ಕೂಡ ಧೋನಿ ಸಲಹೆ ಪಡೆದಿರುವುದನ್ನು ಮ್ಯಾಚ್‌ಗಳನ್ನು ವೀಕ್ಷಿಸುವವರೆಲ್ಲ ನೋಡಿಯೇ ಇರುತ್ತಾರೆ.
Related Articles
2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಗುರುನಾಥನ್ ಮೇಯಪ್ಪನ್ ಬೆಟ್ಟಿಂಗ್ ನಡೆಸಿ ಸಿಕ್ಕಿಬಿದ್ದರು. ಇವರೊಂದಿಗೆ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಕೂಡ ಪೊಲೀಸ್ ಬಂಧನಕ್ಕೆ ಒಳಗಾಗಬೇಕಾಯಿತು. ಅಳಿಯ ಬೆಟ್ಟಿಂಗ್ ನಡೆಸಿದ್ದಕ್ಕೆ ಇವರ ಬಿಸಿಸಿಐ ಖುರ್ಚಿ ಕೂಡ ಜೋರಾಗಿ ಅಲುಗಾಡಿತು. 2015ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಆರ್.ಎಂ.ಲೋಧಾ ಸಮಿತಿ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಕೊಂಡ ಚೆನ್ನೈ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮಾನತು ಮಾಡುವಂತೆ ನ್ಯಾಯಾಲಯಕ್ಕೆ ಶಿಫಾರಸು ಮಾಡಿದರು.
Advertisement
ಈ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2016 ಫೆಬ್ರವರಿಯಲ್ಲಿ ಎರಡೂ ತಂಡವನ್ನು 2 ವರ್ಷ ಐಪಿಎಲ್‌ನಿಂದ ಅಮಾನತು ಮಾಡಿತು. ಪರಿಣಾಮ, ಧೋನಿ ಒಳಗೊಂಡಂತೆ ತಂಡದಲ್ಲಿದ್ದ ಎಲ್ಲ ಆಟಗಾರರು ಐಪಿಎಲ್‌ನಲ್ಲಿ ತಂಡಗಳು ಇಲ್ಲದೇ ಒದ್ದಾಡಿ ಹೋದರು. ತಂಡದಲ್ಲಿದ್ದ ರೈನಾ, ಜಡೇಜಾ ಗುಜರಾತ್ ತಂಡವನ್ನು ಸೇರಿಕೊಂಡರೆ. ಧೋನಿ ಪುಣೆ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ನಿಷೇಧ ಮುಗಿಸಿ ಚೆನ್ನೈ ತಂಡ ವಾಪಸ್ ಆಗಿದೆ. ಅದು ಧೋನಿಗೆ 15 ಕೋಟಿ ರೂ. ನೀಡಿ ತಂಡಕ್ಕೆ ವಾಪಸ್ ಕರೆ ತಂದಿದೆ. ಅಷ್ಟೇ ಅಲ್ಲ, ಧೋನಿ ಆಪ್ತ ಸ್ನೇಹಿತರಾದ ಸುರೇಶ್ ರೈನಾಗೆ 11 ಕೋಟಿ ರೂ. ಹಾಗೂ ರವೀಂದ್ರ ಜಡೇಜಗೆ 7 ಕೋಟಿ ರೂ. ನೀಡಿ ಚೆನ್ನೈ ಅವರನ್ನೂ ತಂಡಕ್ಕೆ ಮರಳಿ ಕರೆ ತಂದಿದೆ.
ಧೋನಿ ನಾಯಕತ್ವದಲ್ಲಿ ಅದೃಷ್ಟಚೆನ್ನೈ ಸೊಪರ್ ಕಿಂಗ್ಸ್ ತಂಡ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2010ರಲ್ಲಿ ಮುಂಬೈ ವಿರುದ್ಧ 22 ರನ್‌ಗಳಿಂದ ಚೆನ್ನೈ ಗೆದ್ದು ಮೊದಲ ಸಲ ಪ್ರಶಸ್ತಿ ಗೆದ್ದಿತ್ತು. 2011ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು 58 ರನ್‌ಗಳಿಂದ ಮಣಿಸಿ ಟ್ರೋಫಿ ಗೆದ್ದಿತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ 2008ರಲ್ಲಿ ರನ್ನರ್‌ಅಪ್, 2012ರಲ್ಲಿ ಮತ್ತೆ ರನ್ನರ್‌ಅಪ್, 2013ರಲ್ಲಿ ರನ್ನರ್‌ಅಪ್ ಹಾಗೂ 2015ರಲ್ಲೂ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಎಲ್ಲಾ ಸಂದರ್ಭಗಳಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ಧೋನಿ ಎನ್ನುವುದು ವಿಶೇಷ. ಹೇಮಂತ್ ಸಂಪಾಜೆ