ರಾಣಿ ವೀರಮ್ಮಾಜಿ ಸೆರೆಯಾಗಿ, ಕೆಳದಿ ಕೋಟೆಯ ಮೇಲೆ ಹೈದರ್ ಅಲಿ ಹಸುರು ಧ್ವಜ ಹಾರಿಸಿದ್ದ. ಕೆಳದಿ ಸೈನ್ಯ ದಯನೀಯವಾಗಿ ಸೋಲುತ್ತಿದ್ದಾಗ, ಅಲ್ಲೊಬ್ಬ ಅರೆಕಾಲಿಕ ಕೂಲಿ ಸೈನಿಕ ಅಸಹಾಯಕ ನಾಗಿ ನಿಂತಿದ್ದ. ಆ ಕೆಚ್ಚೆದೆಯ ಕಲಿಯ ಹೆಸರು ಧೊಂಡಿಯಾ. ಸೈನ್ಯಕ್ಕೆ ಸೇರಿ ಎರಡೇ ದಿನದಲ್ಲಿ ಹೈದರನ ಸೈನಿಕರನ್ನು ಚೆಂಡಾಡಿ, ವೀರಮ್ಮಾಜಿಯ ಪ್ರಾಣ ರಕ್ಷಿಸಿದ್ದ ಧೀರ. ಕುದುರೆ ಮೇಲೆ ಕುಳಿತು ಎರಡೂ ಕೈಯಲ್ಲಿ ಖಡ್ಗ ತಿರುಗಿಸುವ ಈತನ ಚಕ್ಯತೆ ಶತ್ರುಗಳಿಗೆ ಸವಾಲಾಗಿತ್ತು. ಆದರೆ ಕೆಳದಿಯಂತೆ ತಾನೂ ಒಂದು ಸಂಸ್ಥಾನ ಕಟ್ಟಬೇಕೆಂಬ ಕನಸಿನಿಂದ ಬಂದವನಿಗೆ, ರಾಣಿಯ ಸೋಲು ದಿಗ್ಭ್ರಮೆ ಹುಟ್ಟಿಸಿತು.
ಶರಣಾದ ಕೆಳದಿಯ ಸೈನಿಕರು ಗುಂಪು ಗುಂಪಾಗಿ ಹೈದರನ ಬಣ ಸೇರತೊಡಗಿದರು. ಅರೆಮನಸ್ಕನಾಗಿ ಧೊಂಡಿಯಾ ಕೂಡ ಅದೇ ಹಾದಿ ಹಿಡಿದ. ಆದರೆ ಜೀವಭಯದಿಂದಲ್ಲ; ಶತ್ರುಗಳ ರಹಸ್ಯ ತಿಳಿಯುವುದಕ್ಕಾಗಿ! ಟಿಪ್ಪುವಿನ ಅಶ್ವದಳದಲ್ಲಿ ಕೆಲಸ ಮಾಡುತ್ತಲೇ, ಹಳ್ಳಿ ಹಳ್ಳಿಗಳಿಗೆ ಹೋಗಿ ಧೊಂಡಿಯಾ ಯುವಕರಿಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರದ ತರಬೇತಿ ಕೊಟ್ಟ. ತಾನು ಕರೆಕೊಟ್ಟಾಗ ಯಾವುದೇ ಕ್ಷಣದಲ್ಲೂ ಟಿಪ್ಪು ಹಾಗೂ ಬ್ರಿಟಿಷರಿಗೆ ಸವಾಲೆಸೆಯಲು ಸಿದ್ಧರಿರುವಂತೆ ಸೂಚಿಸಿದ್ದ. ಟಿಪ್ಪುವಿಗೆ ಸರಿಸಮಾನದ ಹುಲಿ ಎಂಬ ಕಾರಣಕ್ಕೆ ಜನ ಧೊಂಡಿಯಾಗೆ “ವಾಘ…’ ಅಂತಲೇ ಬಿರುದು ನೀಡಿದ್ದರು.
ಟಿಪ್ಪುವಿನ ನೆರಳಿನಿಂದ ಹೊರಬಂದು ಸವಣೂರು ನವಾಬನ ಸೀಮೆಯನ್ನು ಕಾರ್ಯಕ್ಷೇತ್ರ ಮಾಡಿಕೊಂಡ. ಬ್ರಿಟಿಷರು ರೈತರ ಮೇಲೆ ಕರಭಾರ ಹೇರಿದಾಗ, ಧೊಂಡಿಯಾ ಆಂಗ್ಲರ ವಿರುದ್ಧ ಗುಡುಗಿದ. ಹಳ್ಳಿಹಳ್ಳಿಗಳ ರೈತರು, ಪಾಳೆಯಗಾರರು, ಶಿವಮೊಗ್ಗ, ಚನ್ನಗಿರಿ, ಉತ್ತರ ಕನ್ನಡ ಭಾಗದ ಜನ ಧೊಂಡಿಯಾನನ್ನು ಬೆಂಬಲಿಸಿದರು. ಕುತಂತ್ರದಿಂದ ಟಿಪ್ಪು ಈತನನ್ನು ಜೈಲಿಗಟ್ಟಿದ.
ಟಿಪ್ಪು ಮರಣ ಅಪ್ಪಿದ ದಿನ ಜೈಲಿನಿಂದ ತಪ್ಪಿಸಿಕೊಂಡ ಧೊಂಡಿಯಾ ಮತ್ತೆ ಸೈನ್ಯ ಸಂಘಟನೆ ಶುರುಮಾಡಿದ. ಬ್ರಿಟಿಷರ ಯುದ್ಧ ಸಾಮಗ್ರಿ ಉಗ್ರಾಣಗಳನ್ನು ಲೂಟಿಮಾಡಿ, ಹಳ್ಳಿ ಹಳ್ಳಿಗಳಲ್ಲಿನ ತನ್ನ ತುಕಡಿಗಳಿಗೆ ಶಸ್ತ್ರಾಸ್ತ್ರ ಪೂರೈಸಿದ. “ದೊಂಡಿಯಾ ಸೇನೆ ಕಟ್ಟಿದರೆ, ಇನ್ನೊಬ್ಬ ಶಿವಾಜಿ ಆಗುವ ಅಪಾಯವಿದೆ’ ಎಂಬ ಭಯ ಬ್ರಿಟಿಷರಿಗಿತ್ತು. ಸೆರೆಹಿಡಿದ ಜಾಗದ ಸಮೀಪದ ಮರದಲ್ಲಿಯೇ ದೊಂಡಿಯಾನನ್ನು ನೇಣಿಗೇರಿಸುವಂತೆ ಅಧಿಕಾರಿ ಆರ್ಥರ್ ವೆಲ್ಲೆಸ್ಲಿ ಆಜ್ಞೆ ಹೊರಡಿಸಿದ. ಸುಳಿವು ಸಿಕ್ಕೆಡೆಯಲ್ಲೆಲ್ಲ ಧೊಂಡಿಯಾನಿಗಾಗಿ ಹುಡುಕಾಡಿದರು. ಆದರೆ ಆತ ಅಲ್ಲಿಂದ ಮಿಂಚಿನಂತೆ ಪರಾರಿಯಾಗುತ್ತಿದ್ದ.
ಬ್ರಿಟಿಷರು, ಮರಾಠರು ಒಗ್ಗೂಡಿದರೂ ಧೊಂಡಿಯಾ ಕೈಗೆ ಸಿಗಲಿಲ್ಲ. ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಗೆಲ್ಲುತ್ತಾ ಹೋದ. ಈತ ಅಲ್ಲಲ್ಲಿ ನೆಲೆಯೂರಿಸಿದ್ದ ಸೈನಿಕರ ಸಂಖ್ಯೆ ಲಕ್ಷ ದಾಟಿತ್ತು. 1800, ಜೂ.30ರಂದು ಮರಾಠಿ ಸೈನ್ಯದ ದಂಡನಾಯಕ ಧೋಡುಪಂತ ಗೋಖಲೆಯ ಸೈನ್ಯದೊಂದಿಗೆ ಭಾರೀ ದೊಡ್ಡ ಕದನ ನಡೆಯಿತು. ಅಲ್ಲೂ ದೊಂಡಿಯಾ ಗೆದ್ದ. ಆದರೆ ಅದೇ ವರ್ಷದ ಸೆಪ್ಟಂಬರ್ 10ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟೆ°ಕಲ್ ಎಂಬ ಸ್ಥಳದಲ್ಲಿ ಧೊಂಡಿಯಾ, ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮನಾದ. ಅವನ ಶರೀರವನ್ನು ಫಿರಂಗಿಯ ಗಾಡಿಯ ಮೇಲಿರಿಸಿ, ವಿಜಯದ ಕೇಕೆ ಹಾಕುತ್ತಾ, ಸಿಂಧನೂರಿನ ಯಾಪಲಪರ್ವಿಗೆ ತಂದರು. ಅಲ್ಲಿನ ಗೋಮಾಳದಲ್ಲಿ ಧೊಂಡಿಯಾನ ಶರೀರ ಮಣ್ಣಾಯಿತು.
-ಕೀರ್ತಿ ಕೋಲ್ಗಾರ್