Advertisement

ಧೀರೋದ್ಧಾತ್ತ ಸಾಲ್ವ, ವಿಜೃಂಭಿಸಿದ ಭೀಷ್ಮ, ಪರಶುರಾಮ

01:07 AM Jan 03, 2020 | mahesh |

ಬೆಳ್ತಂಗಡಿಯ ಮೆಲೆಬೆಟ್ಟು ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಷಷ್ಠಿಯ ದಿನ ಪ್ರೇಕ್ಷಕರಿಗೆ ಯಕ್ಷ ರಸಾಮೃತ ಉತ್ತಮ ತಾಳಮದ್ದಳೆಯೊಂದರ ಮೂಲಕ ಕಿವಿಗಳಿಗೆ ತಂಪೆರೆಯಿತು. ಭೀಷ್ಮ ವಿಜಯ ಪ್ರಸಂಗದಲ್ಲಿ ಅಂಬೆಯು ಸಾಲ್ವನ ಬಳಿಗೆ ತೆರಳುವಲ್ಲಿಂದ ಪ್ರಸಂಗ ಆರಂಭವಾಗಿದೆ. ಬ್ರಾಹ್ಮಣನ ಜೊತೆಗೆ ತೆರಳಿದ ಅವಳು ಸಾಲ್ವನಿಂದ ತಿರಸ್ಕೃತಳಾಗಿ ಬಳಿಕ ಪರಶುರಾಮನಿಗೆ ಶರಣಾಗುತ್ತಾಳೆ. ಭೀಷ್ಮ- ಪರಶುರಾಮರ ಇಪ್ಪತ್ತೂಂದು ದಿನಗಳ ಘನಘೋರ ಸಂಗ್ರಾಮ ನಡೆದು ಕಡೆಗೂ ಜಯಾಪಜಯಗಳು ನಿಶ್ಚಯವಾಗದೆ ಹೋದಾಗ ದೇವತೆಗಳು ಯುದ್ಧ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾರೆ. ಶಿಷ್ಯ ಭೀಷ್ಮನ ಧರ್ಮ ಪಾಲನೆಯ ಮುಂದೆ ಪರಶುರಾಮನು ಸೋಲೊಪ್ಪಿಕೊಂಡು ಹೊರಟುಹೋಗುತ್ತಾನೆ. ಮುಂದಿನ ಜನ್ಮದಲ್ಲಾದರೂ ಭೀಷ್ಮನನ್ನು ಕೊಲ್ಲುವ ಶಪಥ ಕೈಗೊಂಡು ಅಂಬೆಯು ಪ್ರಾಯೋಪವೇಶ ಮಾಡುವಲ್ಲಿಗೆ ಕತೆಗೆ ಮಂಗಳವಾಗುತ್ತದೆ.

Advertisement

ಅಂಬೆಯಾಗಿ ಶಿಕ್ಷಕ ದಿನೇಶ ರಾವ್‌ ಬಳಂಜ ಅವರು ಭೀಷ್ಮನಲ್ಲಿ ತನಗೆ ಸಾಲ್ವನಲ್ಲಿ ಪ್ರಣಯಾಂಕುರವಾಗಿರುವುದನ್ನು ತಿಳಿಸುವಾಗ ಸ್ತ್ರೀ ಸಹಜವಾದ ಲಜ್ಜೆಯಿಂದ ವಿಮುಕ್ತಳಾದ ಭಾವವನ್ನು ಸೊಗಸಾಗಿ ಬಿಂಬಿಸುತ್ತ ವೃದ್ಧ ಬ್ರಾಹ್ಮಣನ ಜೊತೆಗೆ ಸೌಭದೇಶದತ್ತ ಪಯಣ ಕೈಗೊಳ್ಳುವಾಗ ಕೈ ಹಿಡಿಯಲು ಹೇಳುವ ಬ್ರಾಹ್ಮಣನಲ್ಲಿ ತನ್ನ ಪಾತಿವ್ರತ್ಯವನ್ನು ಪ್ರಕಟಿಸುವ ಪರಿ ಮನೋಜ್ಞವಾಗಿ ಮೂಡಿಬಂತು. ಸಾಲ್ವನು ತಿರಸ್ಕರಿಸಿದಾಗ ಕೋಪಾಗ್ನಿ ಜ್ವಾಲೆಯಿಂದ ಕಂಪಿಸುತ್ತ ಕಡೆಗೆ ಘೋರ ಶಪಥಗೈದು ಅಗ್ನಿಪ್ರವೇಶ ಮಾಡುವ ಸನ್ನಿವೇಶದ ಚಿತ್ರಣ ಹೃದಯಂಗಮವಾಗಿತ್ತು.

ಸಾಲ್ವನಾಗಿ ರಂಗವನ್ನು ತುಂಬಿಕೊಂಡ ಬಾಸುಮೆ ನಾರಾಯಣ ಭಟ್ಟರು ವೃತ್ತಿಯಿಂದ ಕೃಷಿಕರಾದರೂ ಅನುಭವಿ ಯಕ್ಷ ಕಲಾವಿದನ ಎಲ್ಲ ಪ್ರೌಢಿಮೆಗಳನ್ನೂ ಬಳಸುವ ಮೂಲಕ ಅಸುರೇಶನ ಅಹಂಕಾರ, ದರ್ಪಗಳನ್ನು ಪ್ರದರ್ಶಿಸುತ್ತ ಕಟಕಿ ಮಾತುಗಳಿಂದ ವಿಪ್ರನನ್ನು ಭಂಗಿಸುತ್ತ, ಭೀಷ್ಮನು ಕರೆದೊಯ್ದ ಮಾನಿನಿಯನ್ನು ಯಾವ ಕಾರಣಕ್ಕೂ ಸ್ವೀಕರಿಸಲಾರೆನೆಂದು ದೂರೀಕರಿಸುವ ಪಾತ್ರದ ರಸಭಾವವನ್ನು ಸಾûಾತ್ಕರಿಸಿದರು. ಸಾಂದರ್ಭಿಕವಾಗಿದ್ದ ಅವರ ಧ್ವನಿಯ ಏರಳಿತಗಳು ಒಂದು ಸಂತೃಪ್ತ ಭಾವವನ್ನು ಮೂಡಿಸಿತು.

ಪರಶುರಾಮನಾಗಿ ವಿಜೃಂಭಿಸಿದವರು ಶಿಕ್ಷಕ ಬಳಂಜ ರಾಮಕೃಷ್ಣ ಭಟ್ಟರು. ಪಾತ್ರದ ಘನತೆಗೆ ಯೋಗ್ಯವಾದ ಮಾತುಗಾರಿಕೆಯ ಮೂಲಕ ಸನ್ನಿವೇಶವನ್ನು ಪೋಷಣೆ ಮಾಡುತ್ತಲೇ ಹೋದ ಅವರಿಗೆ ಸರಿಸಾಟಿಯಾಗಿ ಯಾವುದೇ ಪಾತ್ರವನ್ನೂ ನಿಭಾಯಿಸಬಲ್ಲ ಪ್ರೊ| ಮಧೂರು ಮೋಹನ ಕಲ್ಲೂರಾಯರು ಭೀಷ್ಮನಾಗಿ ಎದುರು ನಿಂತು ಎರಡೂ ಪಾತ್ರಗಳಲ್ಲಿ ಯಾವುದು ಗೆಲ್ಲುತ್ತದೆಂಬ ಕೌತುಕ ಉಸಿರು ಬಿಗಿ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿ ಒಂದು ಅತ್ಯುತ್ತಮ ಪ್ರದರ್ಶನವನ್ನು ಮುಕ್ತಾಯಗೊಳಿಸಿತು.

ಹಿಮ್ಮೇಳವಂತೂ ಅನನ್ಯ ಅನುಭವ ನೀಡಿತು. ಮೇಳದ ಕಲಾವಿದರಾದ ಭಾಗವತ ಪಿ. ಟಿ. ಪ್ರಸಾದ್‌ ಅವರ ಭಾಗವತಿಕೆ ಬಹು ಸುಶ್ರಾವ್ಯವಾಗಿತ್ತು. ಎರಡು ಮೂರು ಪದ್ಯಗಳಿಗೆ ಅವರು ದುಡಿಸಿಕೊಂಡ ರಾಗಗಳಿಗೆ ಪ್ರಚಂಡ ಕರತಾಡನ ಮೊಳಗಿತು. ಎಳೆಯ ಪ್ರತಿಭೆ ಶ್ರವಣಕುಮಾರ್‌ ಮದ್ದಳೆ, ನರಸಿಂಹಮೂರ್ತಿಯವರ ಚೆಂಡೆ ಪೂರಕವಾಗಿತ್ತು. ಬಳಂಜ ರಾಮಕೃಷ್ಣ ಭಟ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next