Advertisement

ಮಹಿಳಾ ಸಬಲೀಕರಣಕ್ಕೆ ಆದ್ಯತೆ ಕೊಡಿ

12:25 PM Oct 17, 2019 | Naveen |

ದಾವಣಗೆರೆ: ವಿಶ್ವ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಮರ್ಪಕ ಜಾರಿಗೆ ಆಗ್ರಹಿಸಿ ಬುಧವಾರ ಸಂಜೆ ಮೌನ ಕ್ಯಾಂಡಲ್‌ ವಾಕ್‌… ಡಾನ್‌ಬಾಸ್ಕೋ ಸಂಸ್ಥೆಯಿಂದ ಶಿಬಾರದ ವೃತ್ತದವರೆಗೆ ನಡೆಯಿತು.

Advertisement

ಡಾನ್‌ಬಾಸ್ಕೋ ಬಾಲಕಾರ್ಮಿಕರ ಮಿಷನ್‌, ಜಿಲ್ಲಾ ಮಕ್ಕಳ ಹಕ್ಕುಗಳ ಕ್ಲಬ್‌ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ನ್ಯಾಯವಾದಿ ಎಲ್‌.ಎಚ್‌. ಅರುಣ್‌ಕುಮಾರ್‌, ಇಂದಿನ ಆಧುನಿಕ ಯುಗದಲ್ಲೂ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ. ಇದು ಮುಂದೊಂದು ದಿನ ದೊಡ್ಡ ಮಟ್ಟದ ಲಿಂಗಾನುಪಾತದಂತ ಗಂಭೀರ ಸಮಸ್ಯೆ ಉಂಟು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳು, ಭ್ರೂಣಹತ್ಯೆ, ಲಿಂಗಭೇದ, ಲೈಂಗಿಕ ಕಿರುಕುಳ , ಬಾಲ್ಯವಿವಾಹ, ಗೃಹ ಹಿಂಸೆಯಂತಹ ಸಮಸ್ಯೆ ಇವೆ. ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ನಿವಾರಣೆ ಮಾಡಲು ಜಾಗೃತಿ ಮೂಡಿಸುವುದು ಅತಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ವಿಶ್ವಸಂಸ್ಥೆ 2012ರ ಅ. 11ರಂದು ವಿಶ್ವ ಹೆಣ್ಣು ಮಕ್ಕಳ ದಿನ ಆಚರಣೆಗೆ ತಂದಿದೆ. ಸಮಸ್ಯೆಗಳನ್ನು ಎತ್ತಿಹಿಡಿಯುವುದು ಹಾಗೂ ಹೆಣ್ಣು ಮಕ್ಕಳ ಹಕ್ಕು ಮತ್ತು ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಮುಖ್ಯ ಎಂದು ತಿಳಿಸಿದರು.

ಈ ವರ್ಷ ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ…ಎಂಬುದು ಧ್ಯೇಯವಾಕ್ಯವಾಗಿದೆ. ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

Advertisement

ಅಸಮಾನತೆ ಎನ್ನುವುದು ಹೆಣ್ಣು ಮಕ್ಕಳ ಮೇಲಿನ ಹಿಂಸೆ ಮತ್ತು ಅವರ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ. ವಿಶ್ವದಾದ್ಯಂತ 62 ಸಾವಿರ ಹೆಣ್ಣು ಮಕ್ಕಳಿಗೆ ಶಿಕ್ಷಣ ಲಭ್ಯವಾಗುತ್ತಿಲ್ಲದಿರುವುದು ವಿಷಾದಕರ ಎಂದರು.

ನಗರ ಪೊಲೀಸ್‌ ವೃತ್ತ ನಿರೀಕ್ಷಕ ಗಜೇಂದ್ರಪ್ಪ ಮಾತನಾಡಿ, ಹೆಣ್ಣು ಮಕ್ಕಳ ದುಃಖ, ತಳಮಳ ಮತ್ತು ಹಿಂಸೆಗಳನ್ನು ಮೌನ ಕ್ಯಾಂಡಲ್‌ ವಾಕ್‌… ಮೂಲಕ ಜನತೆಗೆ ತಿಳಿಸುವ ಪ್ರಯತ್ನವಾಗಿದೆ. ಮನುಷ್ಯನ
ಹುಟ್ಟಿಗೆ ಕಾರಣವಾಗಿರುವ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಖಂಡನೀಯ. ನಾಗರಿಕ ಸಮಾಜ ತಲೆತಗ್ಗಿಸುವ ಅಂಶವಾಗಿದೆ ಎಂದರು.

ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಸೂಕ್ತ ಗೌರವ ಪಡೆಯುವುದು ಹಾಗೂ ಹೆಣ್ಣು ಮಕ್ಕಳ ಬಗ್ಗೆ ಇರುವ ಮನಸ್ಥಿತಿ ಬದಲಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳಾಡಿದ ಕ್ರೀಮ್‌ ಯೋಜನೆ ಸಂಯೋಜಕ ಬಿ. ಮಂಜಪ್ಪ , 2030ರೊಳಗೆ ವಿಶ್ವದ ಎಲ್ಲಾ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಮರ್ಪಕವಾಗಿ ಜಾರಿ ಮಾಡುವ ಸಲುವಾಗಿ 17 ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತವಾಗಿ ದ್ವಿತೀಯ ಪಿಯುಸಿಯವರೆಗೆ ಮತ್ತು ಕಡ್ಡಾಯ ಶಿಕ್ಷಣ ಪ್ರಮುಖವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ, ಅವಕಾಶಗಳನ್ನು ನೀಡುವ ಮೂಲಕ ಗುರಿಗಳನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.

ಡಾನ್‌ಬಾಸ್ಕೋ ಸಂಸ್ಥೆ ನಿರ್ದೇಶಕ ಫಾ| ಸಿರಿಲ್‌ ಸಗಾಯರಾಜ್‌, ಗಾಂಧಿ ನಗರದ ಎಎಸ್‌ಐ ನಾಗರಾಜ್‌, ಕ್ರೀಮ್‌ ಯೋಜನೆಯ ಎ.ಟಿ. ವಸಂತಕುಮಾರ್‌, ಜಿ.ಎಸ್‌. ಈರಾನಾಯ್ಕ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮಾನಾಯ್ಕ ಇತರರು ಇದ್ದರು. ಶಿಬಾರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next