Advertisement

ಅಸ್ಥಿರತೆಯಲ್ಲಿ ಸ್ಥಿರಗೊಂಡಿರುವ ಧವನ್‌

12:30 AM Mar 16, 2019 | Team Udayavani |

ಕೆಲ ಆಟಗಾರರು ಹೀಗೇಕೆಂದು ಅರ್ಥವಾಗುವುದಿಲ್ಲ, ಅವರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದೂ ಕಷ್ಟ. ತಂಡದಿಂದ ಕೈಬಿಡುವುದೂ ಕಷ್ಟ, ಇಟ್ಟುಕೊಳ್ಳುವುದೂ ಕಷ್ಟ. ಯಾವಾಗ ಆಡುತ್ತಾರೆ, ಯಾವಾಗ ಕೈಕೊಡುತ್ತಾರೆ ಎನ್ನಲೂ ಸಾಧ್ಯವಿಲ್ಲ. ಅವರು ಪ್ರತಿಭಾವಂತರಲ್ಲವೇ ಎಂದರೆ ಅದ್ಭುತ ಪ್ರತಿಭಾವಂತರೆಂದು ಮುಲಾಜಿಲ್ಲದೇ ಹೇಳಬಹುದು. ಅವರಿದ್ದಾರೆ, ನಡೆಯುತ್ತೆ ಬಿಡು ಎಂದು ನಿರೀಕ್ಷಿಸುವುದಂತೂ ಸಾಧ್ಯವೇ ಇಲ್ಲ! ನಿನ್ನೆಯಷ್ಟೇ ಕಂಡು ಕೇಳರಿಯದಂತೆ ಆಡಿದವರು, ನಾಳೆ ಹೀನಾಯ ವೈಫ‌ಲ್ಯ ಕಾಣಬಹುದು. ಅವರು ತಂಡದಲ್ಲಿದ್ದರೆ ಪ್ರಯೋಜನವೆಂದು ಖಚಿತವಾಗಿ ಹೇಳಲಾಗದು, ಹಾಗಂತ ತೆಗೆದುಹಾಕಲು ಸಾಧ್ಯವೇ ಇಲ್ಲ.

Advertisement

ಶಿಖರ್‌ ಧವನ್‌…
ಭಾರತ ಕ್ರಿಕೆಟ್‌ ಕಂಡ ಅಸ್ಥಿರ ಆಟಗಾರರಲ್ಲಿ ಇವರೂ ಒಬ್ಬರು. ಹಿಂದೆ ವೀರೇಂದ್ರ ಸೆಹ್ವಾಗ್‌ ಕೂಡ ಹೀಗೆಯೇ ಬಹುತೇಕ ಕೈಕೊಡುತ್ತ ಆಗಾಗ ಅಬ್ಬರಿಸುತ್ತ ಇದ್ದರು. ಈಗ ಧವನ್‌ ಜೊತೆಗೆ ರೋಹಿತ್‌ ಶರ್ಮ ಕೂಡ ಇದ್ದಾರೆ. ಅಸ್ಥಿರ ಪ್ರದರ್ಶನ ನೀಡಿ ನೀಡಿಯೇ ಧವನ್‌, ಟೆಸ್ಟ್‌ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಈ ಹಿಂದೆ ರೋಹಿತ್‌ ಕೂಡ ಹೀಗೆಯೇ ಅಸ್ಥಿರವಾಗಿ ಆಡಿ, ಟೆಸ್ಟ್‌ ತಂಡದಿಂದ ಹೊರಹೋಗಿ, ಮತ್ತೆ ಸ್ಥಾನ ಪಡೆಯುವುದೇ ಇಲ್ಲವೇನೋ ಎಂಬಂತಾಗಿತ್ತು. ಕಡೆಗೆ ಮೊನ್ನೆಯಷ್ಟೇ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಮಿಂಚಿ ಸದ್ಯಕ್ಕಂತೂ ಸ್ಥಾನ ಖಾತ್ರಿ ಮಾಡಿಕೊಂಡಿದ್ದಾರೆ. ಅವರು ಏಕದಿನ, ಟಿ20ಯಲ್ಲೂ ಅಸ್ಥಿರ ಆಟಗಾರರೇ ಆದರೂ, ಅದರ ಪ್ರಮಾಣ ಮುಂಚೆಗಿಂತ ಬಹಳ ಕಡಿಮೆಯಾಗಿದೆ. ದಿನದಿನಕ್ಕೆ ಸ್ಥಿರ ಬ್ಯಾಟ್ಸ್‌ಮನ್‌ ಆಗಿ ಬದಲಾಗಿದ್ದಾರೆ. ಸೀಮಿತ ಓವರ್‌ನಲ್ಲಿ, ಭಾರತ ತಂಡದ ಉಪನಾಯಕತ್ವದ ಹೊಣೆಯೂ ಇರುವುದರಿಂದ ಅವರು ಜವಾಬ್ದಾರಿಯುತರಾಗಿ ಆಡಲು ಗರಿಷ್ಠ ಪರಿಶ್ರಮ ಹಾಕಿದ್ದಾರೆ.

ಆದರೆ…ಧವನ್‌ ಮಾತ್ರ ಹೀಗೆ ಆಡುತ್ತಲೇ ಇಲ್ಲ. ನಾಲ್ಕೈದು ಪಂದ್ಯ ಸತತವಾಗಿ ವಿಫ‌ಲವಾಗುತ್ತಾರೆ. ಮುಂದಿನ ಪಂದ್ಯದಲ್ಲಿ ಏಕಾಏಕಿ ದೊಡ್ಡ ಇನಿಂಗ್ಸ್‌ ಆಡುತ್ತಾರೆ. ಟೆಸ್ಟ್‌ನಲ್ಲೂ ಹೀಗೆಯೇ ಮಾಡಿದ್ದರಿಂದ ತಾಳ್ಮೆ ಕಳೆದುಕೊಂಡ ಆಯ್ಕೆಗಾರರು, ಅವರನ್ನು ಕೈಬಿಟ್ಟು ಯುವಕ ಪೃಥ್ವಿ ಶಾಗೆ ಅವಕಾಶ ನೀಡಿದರು. ಇದರಿಂದ ಅವರು ನೊಂದಿದ್ದೇನೋ ಹೌದು, ಆದರೆ ಬುದ್ಧಿ ಕಲಿತಂತಿಲ್ಲ. ಒಂದು ವೇಳೆ ಇಂಗ್ಲೆಂಡ್‌ನ‌ಲ್ಲಿ ಈ ಬಾರಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಧವನ್‌ ಇದೇ ಲಯವನ್ನು ಮುಂದುವರಿಸಿದರೆ, ಬಹುಶಃ ಅವರ ಕ್ರಿಕೆಟ್‌ ಜೀವನದ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.

143 ರನ್‌ ಇನಿಂಗ್ಸ್‌ ಹಿಂದಿನ ಕಥೆ
ಇತ್ತೀಚೆಗಷ್ಟೇ ಆಸ್ಟ್ರೇಲಿಯ ವಿರುದ್ಧ ಮೊಹಾಲಿಯಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶಿಖರ್‌ ಧವನ್‌ ಅಬ್ಬರಿಸಿದರು. ಏಕದಿನದಲ್ಲಿ ಅವರ ಗರಿಷ್ಠ ರನ್‌ ಗಳಿಕೆಯಿದು. ಇದಕ್ಕೂ ಮುಂಚಿನ ಪಂದ್ಯಗಳಲ್ಲಿ ಸತತವಾಗಿ ವಿಫ‌ಲವಾಗಿ ತಂಡಕ್ಕೆ ತ ತಲೆನೋವು ಬರಿಸಿದ್ದು ಮಾತ್ರವಲ್ಲ, ಆತಂಕವನ್ನೂ ಹುಟ್ಟಿಸಿದ್ದರು. ವಿಶ್ವಕಪ್‌ ಹತ್ತಿರವಿರುವ ಹೊತ್ತಿನಲ್ಲಿ ತಂಡದ ಖಾಯಂ ಆರಂಭಿಕ ಎಂದು ಬಿಂಬಿತವಾಗಿರುವ ಧವನ್‌ ಹೀಗೆ ಆಡಿದರೆ, ಅವರನ್ನು ತೆಗೆದುಹಾಕುವುದೋ, ಉಳಿಸಿಕೊಳ್ಳುವುದೋ? ಅವರ ಜಾಗದಲ್ಲಿ ಇನ್ಯಾರಿಗೆ ಅವಕಾಶ ಕೊಡುವುದು ಎಂಬ ಹಲವು ಪ್ರಶ್ನೆಗಳು ಒಮ್ಮೆಗೆ ಹುಟ್ಟಿಕೊಳ್ಳುತ್ತವೆ. ಧವನ್‌ ಜಾಗವನ್ನು ಆಕ್ರಮಿಸಿಕೊಳ್ಳಲು ಹಲವಾರು ಮಂದಿ ಈಗಾಗಲೇ ಕಾಯುತ್ತಿದ್ದಾರಾದರೂ, ದಿಢೀರ್‌ ಬದಲಾವಣೆ ಮಾಡಿ ಅಪಾಯ ಆಹ್ವಾನಿಸಿಕೊಳ್ಳಲು ಭಾರತೀಯ ವ್ಯವಸ್ಥಾಪಕರು ಸಿದ್ಧವಿಲ್ಲ. ಇರಲಿ, 4ನೇ ಏಕದಿನಕ್ಕೂ ಮುನ್ನ ಏನಾಯಿತೆಂದು ನೋಡೋಣ.

ಮಾ.8-ಆಸ್ಟ್ರೇಲಿಯ ವಿರುದ್ಧ : 01
ಮಾ.5-ಆಸ್ಟ್ರೇಲಿಯ ವಿರುದ್ಧ: 21
ಮಾ.2-ಆಸ್ಟ್ರೇಲಿಯ ವಿರುದ್ಧ : 00
ಫೆ.3-ನ್ಯೂಜಿಲೆಂಡ್‌ ವಿರುದ್ಧ: 06
ಜ.31-ನ್ಯೂಜಿಲೆಂಡ್‌ ವಿರುದ್ಧ: 13
ಜ.28-ನ್ಯೂಜಿಲೆಂಡ್‌ ವಿರುದ್ಧ: 28
ಮೇಲಿನ 6 ಪಂದ್ಯಗಳಲ್ಲಿ ಸತತವಾಗಿ ವೈಫ‌ಲ್ಯ ಕಂಡಿದ್ದಾರೆ. ಹೋಗಲಿ ಬಿಡಿ ಅದಕ್ಕೂ ಹಿಂದಿನ ಏಕದಿನ ಪಂದ್ಯಗಳಲ್ಲಿ ಚೆನ್ನಾಗಿಯೇ ಆಡಿರಬಹುದು ಎಂದು ನೀವು ಭಾವಿಸಿದ್ದರೆ. ಅದನ್ನೂ ಒಮ್ಮೆ ನೋಡಿಬಿಡಿ. ನ್ಯೂಜಿಲೆಂಡ್‌ ವಿರುದ್ಧ ಜ.26ರಂದು 66, ಜ.23ರಂದು 75 ರನ್‌ ಗಳಿಸಿದ್ದರು. ಈ ಎರಡು ಸತತ ಯಶಸ್ವಿ ಇನಿಂಗ್ಸ್‌ ಹಿಂದಿನ ಆಟವನ್ನು ಗಮನಿಸಿ…

Advertisement

ಜ.18-ಆಸ್ಟ್ರೇಲಿಯ ವಿರುದ್ಧ : 23
ಜ.15-ಆಸ್ಟ್ರೇಲಿಯ ವಿರುದ್ಧ : 32
ಜ.12-ಆಸ್ಟ್ರೇಲಿಯ ವಿರುದ್ಧ : 00
2018ರಲ್ಲಿ 
ನ.01-ವೆಸ್ಟ್‌ ಇಂಡೀಸ್‌ ವಿರುದ್ಧ : 06
ಅ.29-ವೆಸ್ಟ್‌ ಇಂಡೀಸ್‌ ವಿರುದ್ಧ : 38
ಅ.27-ವೆಸ್ಟ್‌ ಇಂಡೀಸ್‌ ವಿರುದ್ಧ : 35
ಅ.24-ವೆಸ್ಟ್‌ ಇಂಡೀಸ್‌ ವಿರುದ್ಧ : 29
ಅ.21-ವೆಸ್ಟ್‌ ಇಂಡೀಸ್‌ ವಿರುದ್ಧ : 04
ಸೆ.28-ಬಾಂಗ್ಲಾದೇಶದ ವಿರುದ್ಧ : 15

9 ಏಕದಿನ ಪಂದ್ಯಗಳಲ್ಲಿ ವಿಫ‌ಲರಾಗುವ ಮುನ್ನ ಅವರು ಪಾಕಿಸ್ತಾನದಂತಹ ಪ್ರಬಲ ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿ 114 ರನ್‌ ಗಳಿಸಿದ್ದರು! ಹೀಗೆ ವಿಫ‌ಲವಾಗುವುದರಲ್ಲಿ ಏಕದಿನ, ಟೆಸ್ಟ್‌, ಟಿ20 ಮೂರೂ ಮಾದರಿಯಲ್ಲಿ ಒಂದು ರೀತಿಯ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಯಾವ ಕಾರಣಕ್ಕೆ ಧವನ್‌ ತಮ್ಮ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಾಣುತ್ತಾರೆ? ಏನು ಕೊರತೆಯಿದೆ? ತಮ್ಮ ಈ ಸಮಸ್ಯೆ ಅವರಿಗೆ ಮನವರಿಕೆಯಾಗಿಲ್ಲವೇ? ಈಗಿನ ಪ್ರತಿಭಾವಂತ ಯುವಪಡೆಯ ಸ್ಪರ್ಧೆಯ ನಡುವೆ ಹೀಗೆ ವೈಫ‌ಲ್ಯ ಕಂಡರೆ ಧವನ್‌ ಉಳಿದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರೆ ಖಂಡಿತ ಸಾಧ್ಯವಿಲ್ಲ ಎಂಬ ಖಚಿತ ಉತ್ತರ ಸಿಗುತ್ತದೆ. ವಿಶ್ವಕಪ್‌ ನಂತರ ಧವನ್‌ ಅವರ ಆಟ ಇದೇ ಗತಿಯಲ್ಲಿ ಸಾಗಿದರೆ ಆಯ್ಕೆಗಾರರು ಮುಲಾಜಿಲ್ಲದೇ ಅವರನ್ನು ಕಿತ್ತೂಗೆಯಬಹುದು. ಹಾಗೆ ಒಗೆಸಿಕೊಂಡ ನಂತರ ಮತ್ತೆ ಅವರು ತಂಡಕ್ಕೆ ಮರಳುವುದು ಅಸಾಧ್ಯ. 

ಪೈಪೋಟಿ ಯುಗದ ಕಷ್ಟಗಳು
ಭಾರತೀಯ ತಂಡದಲ್ಲಿರುವ ಈ ಪೈಪೋಟಿಗೆ ನೇರ ಉದಾಹರಣೆಗಳು ಬೇಕೆಂದರೆ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರನ್ನೇ ಪರಿಗಣಿಸಬಹುದು. ದೀರ್ಘ‌ಕಾಲದಿಂದ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟವಾಡಿ ದಾಖಲೆಗಳನ್ನು ನಿರ್ಮಿಸುತ್ತಿದ್ದ ಮಾಯಾಂಕ್‌ಗೆ ರಾಷ್ಟ್ರೀಯ ತಂಡ ಪ್ರವೇಶಿಸಲು, ವಿಪರೀತ ಪೈಪೋಟಿಯಿಂದ ಕಾಲ ಕೂಡಿ ಬಂದಿರಲಿಲ್ಲ. ಕೊನೆಯ ಹಂತದಲ್ಲಿ ಇನ್ಯಾರೋ ಅವರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 2018ರಲ್ಲಿ ಆಸ್ಟ್ರೇಲಿಯ ವಿರುದ್ಧ ಆಸ್ಟ್ರೇಲಿಯದಲ್ಲೇ ನಡೆದ ಟೆಸ್ಟ್‌ ಸರಣಿಯಲ್ಲಿ ಅವರಿಗೆ ದಿಢೀರ್‌ ಸ್ಥಾನ ನೀಡಲಾಯಿತು. ಸಾಮಾನ್ಯವಾಗಿ ಆಸ್ಟ್ರೇಲಿಯದಂತಹ ವಿದೇಶಿ ನೆಲದಲ್ಲಿ ವೃತ್ತಿಜೀವನ ಆರಂಭಿಸಲು ಯಾರೂ ಹಿಂಜರಿಯುತ್ತಾರೆ. ಈಗ ಪರಿಸ್ಥಿತಿ ಹೇಗಿದೆಯೆಂದರೆ ಎಲ್ಲಾದರೂ ಸರಿ ಒಂದು ಅವಕಾಶ ಸಿಕ್ಕಿದರೆ ಸಾಕು ಮುಂದಿನದ್ದನ್ನು ಆಮೇಲೆ ನೋಡಿಕೊಳ್ಳೋಣ ಎಂಬ ಹಾಗಾಗಿದೆ. 

ಮಾಯಾಂಕ್‌ ಕೂಡ ಇಂತಹದ್ದೇ ಸಂದರ್ಭದಲ್ಲಿ ಟೆಸ್ಟ್‌ನಲ್ಲಿ ಇನಿಂಗ್ಸ್‌ ಆರಂಭಿಸುವ ಅವಕಾಶ ಪಡೆದರು. 3ನೇ ಟೆಸ್ಟ್‌ನಲ್ಲಿ ಇದ್ದಕ್ಕಿದ್ದಂತೆ ಆರಂಭಿಕರಾಗಿ ಕಣಕ್ಕಿಳಿದ ಅವರು ಅದಕ್ಕೂ ಮುನ್ನ ದೇಶೀಯ ಕ್ರಿಕೆಟ್‌ನಲ್ಲಿ ಕಳೆಗುಂದಿದ್ದರು, ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದರು. ಆದರೆ 3ನೇ ಟೆಸ್ಟ್‌ನಲ್ಲಿ ಅವಕಾಶ ಪಡೆದಾಗ, ಎಲ್ಲವನ್ನೂ ಮೀರಿ ನಿಂತು 76 ರನ್‌ ಬಾರಿಸಿದರು, 2ನೇ ಇನಿಂಗ್ಸ್‌ನಲ್ಲಿ 42 ರನ್‌ ಚಚ್ಚಿದರು. 4ನೇ ಟೆಸ್ಟ್‌ನಲ್ಲೂ ಸುಮ್ಮನಾಗದೆ 77 ರನ್‌ ಬಾರಿಸಿ, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಅದಕ್ಕಿಂತ ಕೆಲವೇ ಟೆಸ್ಟ್‌ಗಳ ಹಿಂದಷ್ಟೇ ಧವನ್‌ ಸ್ಥಾನ ಕಳೆದುಕೊಂಡಿದ್ದರು. ಈಗ ಆ ಸ್ಥಾನಕ್ಕೆ ಹಿಂತಿರುಗಲಾಗದ ಸ್ಥಿತಿಗೆ ತಲುಪಿದ್ದಾರೆ. ಅಷ್ಟು ಮಾತ್ರವಲ್ಲ, ಹಿಂತಿರುಗಬೇಕಾದರೆ ಭಾರೀ ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಒಂದು ಕಡೆ ಈಗಾಗಲೇ ಸ್ಥಾನಕ್ಕೆ ಅಂಟಿಕೊಂಡಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌, ಮತ್ತೂಂದು ಕಡೆ ಹೊಸತಾಗಿ ಬಂದು ಸ್ಥಾನ ಭದ್ರಪಡಿಸಿಕೊಂಡಿರುವ ಮಾಯಾಂಕ್‌ ಅಗರ್ವಾಲ್‌, ಇನ್ನೊಂದು ಕಡೆ ಮುಂಬೈನ ಹದಿಹರೆಯದ ಪ್ರತಿಭೆ ಪೃಥ್ವಿ ಶಾ…

ಟೆಸ್ಟ್‌ನಲ್ಲಿ ಶಾಶ್ವತವಾಗಿ ಹೊರಕ್ಕೆ?
ಸದ್ಯದ ಸ್ಥಿತಿ ನೋಡಿದರೆ ಧವನ್‌ ಟೆಸ್ಟ್‌ನಲ್ಲಿ ಶಾಶ್ವತವಾಗಿ ಹೊರಹೋಗಿರುವಂತೆ ಕಾಣಿಸುತ್ತಿದೆ. ಪೃಥ್ವಿ ಶಾ, ಮಾಯಾಂಕ್‌ ಅಗರ್ವಾಲ್‌ ಇಬ್ಬರೂ ಸ್ಥಾನ ಬಿಟ್ಟುಕೊಡುವ ಇರಾದೆಯಲ್ಲಿಲ್ಲ. ಧವನ್‌ಗೆ ಇರುವ ಏಕೈಕ ಅವಕಾಶ ಕೆ.ಎಲ್‌.ರಾಹುಲ್‌ ಸ್ಥಾನ ಆಕ್ರಮಿಸಿಕೊಳ್ಳುವುದು. ಸದ್ಯ ರಾಹುಲ್‌ ಸತತ ವೈಫ‌ಲ್ಯ ಕಾಣುತ್ತಿರುವುದರಿಂದ ಇನ್ನೂ ಕೆಲವು ಟೆಸ್ಟ್‌ ಹೀಗೆಯೇ ಆದರೆ ಅವರು ಹೊರಹಾಕಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾದರೂ ಧವನ್‌ಗೆ ಅವಕಾಶ ಸಿಗುವುದು ಕಷ್ಟವೇ. ರಾಹುಲ್‌ ಅನುಪಸ್ಥಿತಿಯಲ್ಲಿ ಮಾಯಾಂಕ್‌, ಪೃಥ್ವಿ ಶಾ ಇಬ್ಬರ ಸವಾಲನ್ನು ಮೀರಬೇಕಾಗುತ್ತದೆ!

ಧವನ್‌ ದೋಷಗಳೇನು?
ಧವನ್‌ ಬ್ಯಾಟಿಂಗನ್ನು ಇದುವರೆಗೆ ಗಮನಿಸಿದಾಗ ಕೆಲವು ಕೊರತೆಗಳು ವೀಕ್ಷಕರಿಗೇ ಹೊಳೆಯುತ್ತವೆ. ಧವನ್‌ ಕಾಲಿನ ಚಲನೆ ಅತಿ ಕೆಟ್ಟದಾಗಿದೆ. ಕ್ರಿಕೆಟ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಗಮನಿಸಿದಾಗ ಅವರ ಕಾಲಿನ ಚಲನೆ ಅಥವಾ ಫ‌ುಟ್‌ವರ್ಕ್‌ ಅದ್ಭುತವಾಗಿರುತ್ತದೆ. ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿಯನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಧವನ್‌ ಪಾದಗಳು ಬಹುತೇಕ ಚಲಿಸುವುದೇ ಇಲ್ಲ! ಹೀಗಾದರೆ ಎಸೆತಗಳಿಗೆ ಸಮರ್ಥ ಉತ್ತರ ಕೊಡಲು ಸಾಧ್ಯವೇ ಇಲ್ಲ.  ಶಾರ್ಟ್‌ ಪಿಚ್‌ ಎಸೆತಗಳಿಗೆ ಧವನ್‌ ತಡಕಾಡುತ್ತಾರೆ. ಸಂಪೂರ್ಣ ವೈಫ‌ಲ್ಯವಲ್ಲದಿದ್ದರೂ, ಅರ್ಧ ಅಂಕಣಕ್ಕೆ ಬಿದ್ದು ಬ್ಯಾಟ್‌ನತ್ತ ನುಗ್ಗಿ ಬರುವ ಎಸೆತಗಳು, ಅಂಕಣಕ್ಕೆ ಬಡಿದು ದಿಢೀರನೆ ಜಿಗಿದು ಬರುವ ಎಸೆತಗಳು, ಆಫ್ಸೈಡ್‌ನಿಂದ ಹೊರಹೋಗುತ್ತಿರುವ ಎಸೆತಗಳು ಇವಕ್ಕೆಲ್ಲ ಉತ್ತರಿಸಲು ಹೋಗುವ ಅವರು ಎಡವಿದ್ದು ಆಗಾಗ ಪತ್ತೆಯಾಗುತ್ತದೆ. 

ಧವನ್‌ ಆಟಗಾರಿಕೆಯನ್ನು ನೋಡಿದಾಗ ತಾಂತ್ರಿಕವಾಗಿ ಶ್ರೀಮಂತರು ಎನಿಸುವುದಿಲ್ಲ. ವೈವಿಧ್ಯಮಯ ಹೊಡೆತಗಳು ಅವರಲ್ಲಿಲ್ಲ, ಅಷ್ಟು ಮಾತ್ರವಲ್ಲ ಹೊಡೆತಗಳು ನಿಖರವಾಗಿರುವುದಿಲ್ಲ, ಕ್ಯಾಚ್‌ ಆಗುವ ಹೊಡೆತಗಳು ಸಿಕ್ಸರ್‌ ಹೋಗಿದ್ದು, ಸಿಕ್ಸರ್‌ ಹೋಗಬೇಕಾದ ಹೊಡೆತಗಳು ಕ್ಯಾಚ್‌ ಆಗಿದ್ದು, ಎಲ್ಲೋ ಹೊಡೆದಿದ್ದು ಎಲ್ಲೋ ಹೋಗಿದ್ದು ಹೀಗೆ…ದೋಷಗಳು ಕಾಣುತ್ತವೆ. ಭವಿಷ್ಯದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಬೇಕಾದರೆ, ಈ ಎಲ್ಲ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದು ಅನಿವಾರ್ಯ, ಇಲ್ಲವಾದರೆ ಭಾರತೀಯ ಕ್ರಿಕೆಟ್‌ ಪೈಪೋಟಿಯಲ್ಲಿ ಅವರೇ ಮುಚ್ಚಿಹೋಗುತ್ತಾರೆ. 

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next