Advertisement

ಅತ್ಯಾಧುನಿಕ ಜಿಲ್ಲಾ ಕೋರ್ಟ್‌ ಸಂಕೀರ್ಣ ಸಜ್ಜು

11:04 AM Jan 18, 2019 | Team Udayavani |

ಧಾರವಾಡ: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಿರುವ ಮೊದಲನೇ ಹಾಗೂ ಎರಡನೇಯ ಮಹಡಿ ಜ. 19ರಂದು ಉದ್ಘಾಟನೆಗೊಳ್ಳಲಿದ್ದು, ಅಗತ್ಯ ಮೂಲಸೌಕರ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

Advertisement

ಈಗಾಗಲೇ ಇರುವ ಬೇಸ್‌ಮೆಂಟ್ ಮಹಡಿ ಮತ್ತು ನೆಲಮಹಡಿಗಳಲ್ಲಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಮೊದಲ ಮಹಡಿಯು 3688.11 ಚ.ಮೀ (39702.50 ಚ.ಅಡಿಗಳು) ಹಾಗೂ ಎರಡನೇ ಮಹಡಿ 3688.11 ಚ.ಮೀ (39702.50 ಚ.ಅಡಿಗಳು) ಹೊಸದಾಗಿ ನಿರ್ಮಿಸಲಾಗಿದೆ. ಬೇಸ್‌ಮೆಂಟ್ ಮಹಡಿ, ನೆಲಮಹಡಿ, ಮೊದಲನೇ ಮಹಡಿ, ಎರಡನೇ ಮಹಡಿ ಸೇರಿದಂತೆ ಒಟ್ಟು 12,958.20 ಚ.ಮೀ ವಿಸ್ತೀರ್ಣವನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣ ಹೊಂದಿದೆ.

ಪ್ರಸ್ತುತ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಕೋರ್ಟ್‌ ಹಾಲ್‌ ಸೇರಿದಂತೆ ಮೊದಲ ಮಹಡಿಯಲ್ಲಿ ಹೊಸದಾಗಿ 5 ಕೋರ್ಟ್‌ ಹಾಲ್‌ ಹಾಗೂ ಎರಡನೇ ಮಹಡಿಯಲ್ಲಿ ಹೊಸದಾಗಿ 5 ಕೋರ್ಟ್‌ ಹಾಲ್‌ ಸೇರಿ ಒಟ್ಟು 15 ಕೋರ್ಟ್‌ ಹಾಲ್‌ಗ‌ಳು ಕಾರ್ಯ ನಿರ್ವಹಿಸಲಿವೆ.

ಕಟ್ಟಡದಲ್ಲಿನ ಸೌಲಭ್ಯಗಳು: ಒಟ್ಟಾರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ 15 ಕೋರ್ಟ್‌ ಹಾಲ್‌ಗ‌ಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಕಟ್ಟಡದಲ್ಲಿನ ಎಲ್ಲಾ ಗಣಕಯಂತ್ರಗಳಿಗೆ ಸ್ಥಳೀಯ ಗಣಕಜಾಲದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೊದಲನೇ ಹಾಗೂ ಎರಡನೇ ಮಹಡಿಗಳಲ್ಲಿ ಪ್ರತಿ ನ್ಯಾಯಮೂರ್ತಿಗಳ ಕೊಠಡಿಗಳಿಗೆ ಹೊಂದಿಕೊಂಡಂತೆ ಒಂದು ಆ್ಯಂಟಿ ಛೇಂಬರ್‌, ಗ್ರಂಥಾಲಯ ಮತ್ತು ಶೌಚಾಲಯ ನಿರ್ಮಿಸಲಾಗಿದೆ.

ಎರಡನೇ ಮಹಡಿಯಲ್ಲಿ ಹಿರಿಯ ಸರ್ಕಾರಿ ಅಭಿಯೋಜಕರಿಗಾಗಿ ಮತ್ತು ಸರ್ಕಾರಿ ಅಭಿಯೋಜಕರಿಗಾಗಿ ಪ್ರತ್ಯೇಕ ಕೊಠಡಿಗಳಿಗಾಗಿ ಅನುವು ಮಾಡಿಕೊಡಲಾಗಿದೆ. ಕಟ್ಟಡದ ಪ್ರತಿ ಮಹಡಿಯಲ್ಲಿ ಮಹಿಳೆಯರಿಗಾಗಿ ಎರಡು ಮತ್ತು ಪುರುಷರಿಗಾಗಿ ಎರಡು ಪ್ರತ್ಯೇಕ ಶೌಚಾಲಯಗಳನ್ನೂ ಸಹ ನಿರ್ಮಿಸಲಾಗಿದೆ.

Advertisement

ಕಟ್ಟಡದ ಹಿಂಭಾಗದಲ್ಲಿರುವ ಖುಲ್ಲಾ ಜಾಗೆಯಲ್ಲಿ 250 ಕೆವಿಎ ಸಾಮರ್ಥ್ಯದ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದೆ. ಕಟ್ಟಡದ ಹಿಂಭಾಗದಲ್ಲಿರುವ ಖುಲ್ಲಾ ಜಾಗೆಯಲ್ಲಿ 125 ಕೆವಿಎ ಸಾಮರ್ಥ್ಯದ ಜನರೇಟರನ್ನೂ ಅಳವಡಿಸಲಾಗಿದೆ. ಕಟ್ಟಡದಲ್ಲಿನ ಗಣಕ ಯಂತ್ರಗಳಿಗೆ ನಿರಂತರ ವಿದ್ಯುತ್‌ ಪೂರೈಸುವ ಸಲುವಾಗಿ 4 ಸಂಖ್ಯೆಯ 10 ಕೆವಿಎ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ಒಳ ಮತ್ತು ಹೊರ ಭಾಗದಲ್ಲಿ ಹೆಚ್ಚು ಇಂಧನ ದಕ್ಷತೆ ಇರುವ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ.

ಕಟ್ಟಡ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದ ಎಡಬದಿಯಲ್ಲಿ ಸಾರ್ವಜನಿಕರಿಗಾಗಿ ಹಾಗೂ ನ್ಯಾಯಾಲಯದ ಸಿಬ್ಬಂದಿಗಾಗಿ 15 ಜನರ ಸಾಮರ್ಥ್ಯದ ಎರಡು ಪ್ರತ್ಯೇಕ ಲಿಫ್ಟ್‌ಗಳನ್ನು ಹಾಗೂ ಹಿಂಭಾಗದಲ್ಲಿ 7 ಜನರ ಸಾಮರ್ಥ್ಯದ ಒಂದು ಲಿಫ್ಟ್‌ನ್ನು ಕೇವಲ ನ್ಯಾಯಮೂರ್ತಿಗಳಿಗಾಗಿ ಅನುವು ಮಾಡಲಾಗಿದೆ.

ಹೊಸದಾಗಿ ನಿರ್ಮಿಸಲಾಗಿರುವ ಮೊದಲನೇ ಹಾಗೂ ಎರಡನೇ ಮಹಡಿಗಳಲ್ಲಿ ಪ್ರತಿ ಮಹಡಿಯಲ್ಲಿ ಕೋರ್ಟ್‌ಹಾಲ್‌ಗ‌ಳು, ನ್ಯಾಯಮೂರ್ತಿಗಳಿಗಾಗಿ ಪ್ರತ್ಯೇಕ ಕೊಠಡಿಗಳು, ಕಚೇರಿಗಳಿಗಾಗಿ ಕೊಠಡಿಗಳು, ಪ್ರಾಪರ್ಟಿ ರೂಮ್‌, ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾಗುವ ಸಾರ್ವಜನಿಕರು ಮತ್ತು ವಕೀಲರಿಗಾಗಿ ಅವಶ್ಯವಿರುವ ಸ್ಥಳಾವಕಾಶ ಹಾಗೂ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಬಂಧೀಖಾನೆ ಗಳನ್ನು ನಿರ್ಮಿಸಲಾಗಿದೆ.

ಉದ್ಘಾಟನೆ ನಾಳೆ
ಧಾರವಾಡ:
ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮತ್ತು ಧಾರವಾಡ ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1 ಮತ್ತು 2ನೇ ಮಹಡಿಯ ಉದ್ಘಾಟನಾ ಸಮಾರಂಭ ಜ. 19ರಂದು ಬೆಳಗ್ಗೆ 10:30 ಗಂಟೆಗೆ ನಗರದ ಕಲಾಭವನದಲ್ಲಿ ಆಯೋಜಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್‌.ಯು. ಬೆಳ್ಳಕ್ಕಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್‌ ಎಂ. ಶಾಂತನಗೌಡರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರವಿ ಮಳಿಮಠ, ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಸಚಿವರಾದ ಎಚ್.ಡಿ. ರೇವಣ್ಣ, ಚನ್ನಬಸಪ್ಪ ಶಿವಳ್ಳಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಕೆ.ಬಿ. ನಾಯಕ್‌ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ನ್ಯಾಯಮೂರ್ತಿಗಳ ಸನ್ಮಾನ ಸಮಾರಂಭ ನಡೆಯಲಿದೆ. ನ್ಯಾಯಮೂರ್ತಿಗಳಾದ ಕೆ.ಎಸ್‌. ಮುದಗಲ್‌, ಬಿ.ಎ. ಪಾಟೀಲ, ಕೃಷ್ಣ ಎಸ್‌. ದೀಕ್ಷಿತ, ಅಶೋಕ ನಿಜಗಣ್ಣವರ, ಪಿ.ಜಿ.ಎಂ. ಪಾಟೀಲ, ಎ.ಎಸ್‌. ಬೆಳ್ಳುಂಕೆ ಅವರನ್ನು ಸನ್ಮಾನಿಸಲಾಗುವುದು ಎಂದರು. ನ್ಯಾಯಾಲಯ ಸಂಕೀರ್ಣದ 1 ಮತ್ತು 2ನೇ ಮಹಡಿ ಉದ್ಘಾಟನೆಯಿಂದ ಈಗಿರುವ ಐದು ಕೋರ್ಟ್‌ ಹಾಲ್‌ಗ‌ಳಿಂದ 15 ಕೋರ್ಟ್‌ ಹಾಲ್‌ಗ‌ಳ ವರೆಗೆ ಸಂಖ್ಯೆ ಹೆಚ್ಚಲಿದ್ದು, ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ಅನುಕೂಲಕರ ಆಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next