Advertisement

ಡಾ|ಐರಸಂಗರ ಸಾಹಿತ್ಯ ಕೃಷಿ ಶ್ಲಾಘನೀಯ

05:20 PM Oct 26, 2018 | |

ಧಾರವಾಡ: ಎಲೆಮರೆಯ ಕಾಯಿಯಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಕವಿ ಡಾ| ವಿ.ಸಿ. ಐರಸಂಗ ಅವರು ತಮ್ಮ ಸರಳ ಜೀವನದ ಮೂಲಕವೇ ಜನರ ಮನ ಗೆದ್ದಿದ್ದಾರೆ ಎಂದು ಕವಿವಿ ಕುಲಪತಿ ಡಾ| ಪ್ರಮೋದ್‌ ಗಾಯಿ ಹೇಳಿದರು. ನಗರದ ಶ್ರೀನಗರ ಕ್ರಾಸ್‌ನಲ್ಲಿರುವ ಪರಿಸರ ಭವನದಲ್ಲಿ ಆರ್‌.ಕೆ. ಛಾಯಾ ಫೌಂಡೇಶನ್‌ ಹಾಗೂ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಸಹಯೋಗದಲ್ಲಿ ಮೀಡಿಯಾ ಮೈಂಡ್‌ ಹಮ್ಮಿಕೊಂಡಿದ್ದ ಹಿರಿಯ ಕವಿ ಡಾ| ವಿ.ಸಿ. ಐರಸಂಗ ಅವರ ಸಾಕ್ಷ್ಯಚಿತ್ರ ಮತ್ತು ‘ಬೆತ್ತಲೆ’ ಹೊಸ ಕಿರುಚಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಇಂದು ಸಾಕಷ್ಟು ಮಂದಿ, ಪ್ರಶಸ್ತಿ ಹಾಗೂ ಸ್ಥಾನಮಾನಕ್ಕಾಗಿ ತಮ್ಮೆಲ್ಲ ಪ್ರಭಾವವನ್ನು ಬಳಸುತ್ತಾರೆ. ಅಂಥ ವ್ಯಕ್ತಿಗಳ ನಡುವೆ ನಮ್ಮ ಐರಸಂಗ ಅವರು ಭಿನ್ನವಾಗಿ ನಿಲ್ಲುತ್ತಾರೆ. ಅವರಿಗೆ ಗೌರವ ಡಾಕ್ಟರೇಟ್‌ ಕೊಟ್ಟಿದ್ದು ವಿವಿಗೆ ಗೌರವ ಎಂದು ಭಾವಿಸುತ್ತೇವೆ. ಇಂಥ ಸರಳ, ಸಜ್ಜನ ಕವಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡಿರುವುದು ನಿಜಗೂ ಒಳ್ಳೆಯ ಕೆಲಸ ಎಂದರು. ಕವಿಗಳು, ಸಾಹಿತಿಗಳು ಹಾಗೂ ಸಾಧಕರ ಬಗ್ಗೆ ಸಾಕ್ಷ್ಯಚಿತ್ರ ಮಾಡುವುದು ಅತ್ಯುತ್ತಮ ಕೆಲಸ. ಇಂಥ ಸಾಕ್ಷ್ಯಚಿತ್ರಗಳಿಂದ ಕವಿಗಳು, ಸಾಹಿತಿಗಳು ಹಾಗೂ ಸಾಧಕರ ಪರಿಚಯ ಜನರಿಗೆ ಆಗುತ್ತದೆ. ಅದರಿಂದ ಜನರ ಜ್ಞಾನವೂ ವೃದ್ಧಿಯಾಗಿ, ಅರಿವು ಮೂಡುತ್ತದೆ ಎಂದು ತಿಳಿಸಿದರು.

ಹಿರಿಯ ಕವಿ ವಿ.ಸಿ. ಐರಸಂಗ ಮಾತನಾಡಿ, ಈ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಾಕ್ಷ್ಯಚಿತ್ರದ ಮೂಲಕ ನನ್ನ ಜೀವನವನ್ನು ನನಗೇ ಪರಿಚಯ ಮಾಡಿಕೊಟ್ಟಿದ್ದಾರೆ ಎಂದರು. ಸಾಹಿತಿ ರಾಘವೇಂದ್ರ ಪಾಟೀಲ, ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಅನುವಾದಕ ಲಕ್ಷ್ಮೀಕಾಂತ ಇಟ್ನಾಳ, ಕವಿವಿ ಸಹಾಯಕ ಪ್ರಾಧ್ಯಾಪಕ ಡಾ| ಜಿ.ಎಸ್‌. ವೇಣುಮಾಧವ, ಲೇಖಕಿ ಪ್ರೇಮಾ ನಡುವಿನಮನಿ, ಡಾ| ಎಂ.ಎ. ಮುಮ್ಮಿಗಟ್ಟಿ, ಆರ್‌.ಕೆ. ರಾಮಚಂದ್ರ ಕುಲಕರ್ಣಿ, ಬಸವರಾಜ ಗೋಕಾವಿ, ಚೈತ್ರಾ ಹಿರೇಮಠ ಇದ್ದರು. ಕಾರ್ಯಕ್ರಮದ ಬಳಿಕ ಹಿರಿಯ ಕವಿ ವಿ.ಸಿ. ಐರಸಂಗ ಸಾಕ್ಷ್ಯಚಿತ್ರ ಹಾಗೂ ಪ್ರೇಮಾ ನಡುವಿನಮನಿ ಅವರ ಕಂಬನಿ ಕಥೆಯಾಧಾರಿತ ‘ಬೆತ್ತಲೆ’ ಕಿರುಚಿತ್ರ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next