Advertisement

ಧಾರವಾಡದಲ್ಲಿ ವಿಶೇಷ ಹೂಡಿಕೆ ಪ್ರದೇಶ

05:37 PM Jul 17, 2022 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೈಗಾರಿಕೆ ಹಾಗೂ ಆರ್ಥಿಕ ಬೆಳವಣಿಗೆಗೆ ಎಫ್‌ಎಂಸಿಜಿ ಮಹತ್ವದ ತಿರುವಾಗಿದೆ. ಅಲ್ಲದೆ ಗುಜರಾತ ಮಾದರಿಯಲ್ಲಿ ಧಾರವಾಡ ಮತ್ತು ತುಮಕೂರಿನಲ್ಲಿ ವಿಶೇಷ ಹೂಡಿಕೆ ಪ್ರದೇಶ (ಎಸ್‌ಐಆರ್‌) ಸ್ಥಾಪಿಸಲಾಗುತ್ತಿದೆ. ಇದು ಸಹ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಕರ್ನಾಟಕ ಮೆಟಿರಿಯಲ್‌ ಟೆಸ್ಟಿಂಗ್‌ ಮತ್ತು ರಿಸರ್ಚ್‌ ಸೆಂಟರ್‌ (ಕೆಎಂಟಿಆರ್‌ಸಿ) ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಜಿಸಿ ಕ್ಲಸ್ಟರ್‌ ಸ್ಥಾಪನೆ ಮೂಲಕ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇದು ಉತ್ತರ ಕರ್ನಾಟಕದ ಸಮಗ್ರ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಬಜೆಟ್‌ನಲ್ಲಿ ಘೋಷಿತ ಈ ಕಾರ್ಯಕ್ರಮಕ್ಕೆ ಈಗಾಗಲೇ ಆದೇಶ ಕೂಡ ಹೊರಡಿಸಲಾಗಿದೆ. ಧಾರವಾಡ ಮತ್ತು ತುಮಕೂರಿನಲ್ಲಿ ಎಸ್‌ಐಆರ್‌ಗಳ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಕಾಯ್ದೆಗಳಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಲಿವೆ. ಹು-ಧಾ ಬೃಹತ್‌ ಕೈಗಾರಿಕಾ ಪ್ರದೇಶವಾಗಿ ಬೆಳೆಯಲು ಸಹಕಾರಿ ಆಗಲಿದೆ. ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕು. ಜಗತ್ತು ಬದಲಾಗಿದ್ದು, ಆರ್ಥಿಕತೆ ಮುಕ್ತವಾಗಿದೆ. ನಾವು ಸಣ್ಣ ಉದ್ಯಮದಾರರು ಎಂಬ ಮನೋಭಾವದಿಂದ ಹೊರಬಂದು ಸಾಹಸ ಕಾರ್ಯ ಮಾಡಿದಾಗ ಬೆಳೆಯಲು ಸಾಧ್ಯ ಎಂದರು.

ಕೈಗಾರಿಕೆಗಳ ಉತ್ಪಾದನೆಗೆ ಪರೀಕ್ಷಣಾ ಕೇಂದ್ರ ಬಹಳ ಮಹತ್ವದಾಗಿದ್ದು, ಉತ್ಪನ್ನಗಳಿಗೆ ಗುಣಮಟ್ಟದ ಪ್ರಮಾಣಪತ್ರ ಮುಖ್ಯ. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ವಯಂ ಶಿಸ್ತು ತರುವ ಕೆಎಂಟಿಆರ್‌ಸಿ ಸಂಸ್ಥೆಗೆ ಎನ್‌ಎಬಿಎಲ್‌ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ. ಸಂಸ್ಥೆಯು ಕೆಎಂಟಿಆರ್‌ಸಿ ಅತ್ಯಾಧುನಿಕ ಉಪಕರಣಗಳ ಪೂರೈಕೆಗಾಗಿ ನಾಲ್ಕು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಸರಕಾರ ಹಣಕಾಸು ನೆರವು ನೀಡಲಿದೆ. ಉದ್ಯಮಿಗಳು ಸಾಹಸಿಗಳಾಗಬೇಕು. ಸರಕಾರದ ಯೋಜನೆಗಳ ಲಾಭ ಪಡೆಯಬೇಕು. ನ.2 ಮತ್ತು 3ರಂದು ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ ಆಯೋಜಿಸಲಾಗಿದ್ದು, ಇದರಲ್ಲಿ ಸ್ಥಳೀಯ ಕನ್ನಡಿಗ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. ವಿದೇಶಿ ಬಂಡವಾಳ ಹೂಡಿಕೆ(ಎಫ್‌ ಡಿಐ)ಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಕೃಷಿ ಸಚಿವ ಬಿ.ಸಿ. ಪಾಟೀಲ; ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಕೆಎಂಟಿಆರ್‌ಸಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ ತೆಂಗಿನಕಾಯಿ, ಮಹಾದೇವ ಕರಮರಿ, ನಾಗರಾಜ ದಿವಟೆ, ಶಿವರಾಮ ಹೆಗಡೆ, ವಿಜಯ ಅಂಗಡಿಕಿ, ಪ್ರಕಾಶ ಹಿರೇಮಠ, ವಿಶ್ವನಾಥ ಗೌಡರ, ಸುರೇಶ ಠಕ್ಕರ, ರಾಜಾ ದೇಸಾಯಿ ಇನ್ನಿತರರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಕೆ. ಪಾಟೀಲ ಸ್ವಾಗತಿಸಿದರು. ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಮನವಿ ಸಲ್ಲಿಸಿದರು. ನರೇಂದ್ರ ಕುಲಕರ್ಣಿ ನಿರೂಪಿಸಿದರು. ಮಲ್ಲೇಶ ಜಾಡರ ವಂದಿಸಿದರು.

Advertisement

ಕೆಎಂಟಿಆರ್‌ಸಿ ಕುರಿತು

ಕರ್ನಾಟಕ ಮೆಟೀರಿಯಲ್‌ ಟೆಸ್ಟಿಂಗ್‌ ಮತ್ತು ರಿಸರ್ಚ್‌ ಸೆಂಟರ್‌ (ಕೆಎಂಟಿಆರ್‌ಸಿ) ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಡಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಎನ್‌ಕೆಎಸ್‌ ಎಸ್‌ಐಎ) ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಹಯೋಗದೊಂದಿಗೆ ಕಳೆದ 26 ವರ್ಷಗಳಿಂದ ಈ ಭಾಗದ ಉದ್ದಿಮೆದಾರರು ಉತ್ಪಾದಿಸುವ ವಸ್ತುಗಳ ಗುಣಮಟ್ಟ ಪರೀಕ್ಷಣೆ ಮಾಡಿಕೊಡುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ ಪ್ರತಿಷ್ಠಿತ ಎನ್‌ಎಬಿಎಲ್‌ ಪ್ರಮಾಣ ಪತ್ರ ಹೊಂದಿದ ಏಕೈಕ ಪರೀಕ್ಷಣಾ ಕೇಂದ್ರವಾಗಿದೆ. ಪರೀಕ್ಷಣಾ ಕೇಂದ್ರದಲ್ಲಿ ವಸ್ತುಗಳ ಗುಣಮಟ್ಟ ಪರೀಕ್ಷಿಸಲು ಮೆಕ್ಯಾನಿಕಲ್‌, ಕೆಮಿಕಲ್‌ ಟೆಸ್ಟಿಂಗ್‌ ಮತ್ತು ಮೆಕ್ಯಾನಿಕಲ್‌ ಮೆಜರಿಂಗ್‌ ಇನ್‌ಸ್ಟ್ರೆಮೆಂಟ್‌ ಕ್ಯಾಲಿಬ್ರೇಷನ್‌ ವಿಭಾಗ ಹೊಂದಿದೆ. ಇದರೊಂದಿಗೆ ನೀರು, ಮಣ್ಣಿನ ಗುಣಮಟ್ಟ ಪರೀಕ್ಷಿಸುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ರಾಜ್ಯ ಸರಕಾರದ ಅನುದಾನದಡಿ ಸ್ಥಾಪಿಸಲಾಗಿದೆ. ಈ ಭಾಗದ ಟಾಟಾ ಗ್ರೂಪ್‌ ಆಫ್‌ ಕಂಪನೀಸ್‌, ಮೈಕ್ರೋಫಿನಿಷ್‌ ಗ್ರೂಪ್‌ ಆಫ್‌ ಕಂಪನೀಸ್‌, ಸೀಬರ್ಡ್‌, ಕೈಗಾ, ಎನ್‌ಪಿಸಿ, ಜಿಂದಾಲ್‌ ಸ್ಟೀಲ್‌, ಆರ್‌ಎಸ್‌ಬಿ ಟ್ರಾನ್ಸ್‌ಮಿಷನ್‌ ಸೇರಿದಂತೆ ಹಲವಾರು ಕೈಗಾರಿಕೆಗಳು ಈ ಕೇಂದ್ರದ ಸಹಾಯ ಪಡೆದುಕೊಳ್ಳುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next