Advertisement

ಲಾಳಗಟ್ಟಿ ಎಲುಬು ಗಟ್ಟಿ

03:34 PM Jul 15, 2022 | Team Udayavani |

ಧಾರವಾಡ: ಇವರು ಕೊಡುವ ವನಸ್ಪತಿ ಮಾತ್ರೆಗಳಿಗೆ ಮುರಿದ ಎಲುಬು ಸಾರ್ಡರ್‌ ಆಗುತ್ತವೆ. ಮನುಷ್ಯರು ಮಾತ್ರವಲ್ಲ, ನಾಯಿ, ಎತ್ತು, ಎಮ್ಮೆಗಳ ಮುರಿದ ಕಾಲುಗಳನ್ನು ಸರಿ ಮಾಡುವ ಶಕ್ತಿ ಈ ಮಾತ್ರೆಗಳಿಗಿದೆ. ನಾಟಿ ವೈದ್ಯರಾದರೂ ಬಡವರಿಂದ ಹಣ ಪಡೆಯಲ್ಲ. ಶತಮಾನದಿಂದಲೂ ಔಷಧಿ ನೀಡಿ ಸೈ ಎನಿಸಿಕೊಂಡಿದೆ ಈ ರೈತ ಕುಟುಂಬ.

Advertisement

ಹೌದು. ದಿನದ ಜಂಜಾಟದಲ್ಲಿ ಮಕ್ಕಳು, ಹರೆಯದವರು, ವಯೋವೃದ್ಧರು ಅನೇಕ ಅವಘಡಗಳಿಗೆ ಒಳಗಾಗಿ ಕೈ-ಕಾಲು ಎಲುವು ಮುರಿದುಕೊಳ್ಳುವುದು ಸಾಮಾನ್ಯ. ಹೀಗೆ ಎಲುವುಗಳು ಮುರಿದಾಗ ದೊಡ್ಡ ದೊಡ್ಡ ಆಸ್ಪತ್ರೆಗಳು, ವೈದ್ಯರನ್ನು ಸಂಪರ್ಕಿಸಿ ಮುರಿದ ಜಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದೇ ಹೆಚ್ಚು. ಆದರೆ ಧಾರವಾಡ ಸಮೀಪದ ಲಾಳಗಟ್ಟಿ ಗ್ರಾಮದ ರಾಮಚಂದ್ರಗೌಡರ ಮಗ ಆನಂದಗೌಡರು ಮತ್ತು ಅವರ ಕುಟುಂಬ ನೀಡುವ ನಾಟಿ ಔಷಧಿ ಸುತ್ತಲಿನ ಹಳ್ಳಿಗಳು ಅಷ್ಟೇಯಲ್ಲ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಅನೇಕ ಬಡವರಿಗೆ ಮುರಿದು ಎಲುಬು ಸರಿಯಾಗಿದ್ದು ಮರಳಿ ಅವರಿಗೆಲ್ಲ ಬದುಕು ಕೊಟ್ಟಿದೆ. ಮುರಿದ ಕೈ-ಕಾಲುಗಳು ಪುನಃ ಮೊದಲಿನಂತೆಯೇ ಗಟ್ಟಿಯಾಗಿ ಬೆಸೆದುಕೊಳ್ಳುವ ಈ ವನಸ್ಪತಿ ಔಷಧಿಯೊಂದನ್ನು ಸ್ವತಃ ಈ ಕುಟುಂಬ ಸದಸ್ಯರೇ ತಯಾರಿಸುತ್ತಿದ್ದಾರೆ. ಶತಮಾನಗಳ ಹಿಂದಿನಿಂದಲೂ ಈ ಕುಟುಂಬದವರು ಮಾತ್ರವೇ ಔಷಧಿಯನ್ನು ತಮ್ಮದೇ ಸೂತ್ರದಿಂದ ಸಿದ್ಧಪಡಿಸಿಕೊಂಡು ಜನರಿಗೆ ಉಚಿತವಾಗಿ ನೀಡುತ್ತ ಬಂದಿದ್ದಾರೆ.

ಏನದು ಸಾರ್ಡರ್‌ ಔಷಧಿ: ಧಾರವಾಡದಿಂದ ಪಶ್ಚಿಮ ಭಾಗದಲ್ಲಿ 18 ಕಿ.ಮೀ.ದೂರದಲ್ಲಿರುವ ಲಾಳಗಟ್ಟಿ ಗ್ರಾಮ ಅರಣ್ಯಕ್ಕೆ ಹೊಂದಿಕೊಂಡು ಇರುವ ಗ್ರಾಮ. ಈ ಅರಣ್ಯದಲ್ಲಿ ಸಿಕ್ಕುವ ವನಸ್ಪತಿ ಬಳ್ಳಿಗಳನ್ನು, ಮೂಲಿಕೆಗಳನ್ನು ಸಂಗ್ರಹಿಸಿ ಅದಕ್ಕೆ ತಮ್ಮ ಔಷಧಿ ಸೂತ್ರಗಳನ್ವಯ ಇತರೆ ಅಂಶಗಳನ್ನು ಮಿಶ್ರಣ ಮಾಡುತ್ತಾರೆ. ಈ ಮಾತ್ರೆಗಳನ್ನು ಹುಣ್ಣಿಮೆ, ಅಮವಾಸ್ಯೆ, ತಿಥಿ ಮತ್ತು ಉತ್ತಮ ಮುಹೂರ್ತಗಳಿಗೆ ತಕ್ಕಂತೆ ಅನ್ಯ ವನಸ್ಪತಿಗಳನ್ನು ಬೆರೆಸಿ ಕವಳಿ ಹಣ್ಣಿನ ಗಾತ್ರದಷ್ಟು ಮಾತ್ರೆ ಸಿದ್ಧಗೊಳಿಸುತ್ತಾರೆ. ಒಮ್ಮೆ ಸಿದ್ಧಗೊಳಿಸಿದ ಮಾತ್ರೆಗಳನ್ನು ತಿಂಗಳುಗಟ್ಟಲೇ ಬಳಕೆ ಮಾಡುವ ವಿಧಾನಗಳು ಈ ಕುಟುಂಬಕ್ಕೆ ತಿಳಿದಿದೆ. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಜನರಲ್ಲಿ ಆಗಾಗ ನಡೆಯುವ ಅವಘಡಗಳಿಂದಾಗಿ ಜನರು ಇಲ್ಲಿಗೆ ಬಂದು ಮಾತ್ರೆ ತೆಗೆದುಕೊಂಡು ಹೋಗುತ್ತಾರೆ. ಪ್ರತಿ ರವಿವಾರ, ಗುರುವಾರ ಮಾತ್ರವೇ ಮಾತ್ರೆಗಳನ್ನು ಕೊಡುತ್ತಾರೆ. ಎಲುಬು ಶರೀರದ ಯಾವುದೇ ಭಾಗದಲ್ಲಿ ಮುರಿದಿದ್ದರೂ ಸರಿ, ಐದು ದಿನಗಳ ಕಾಲ ಈ ಮಾತ್ರೆಗಳನ್ನು ಸೇವಿಸಿದರೆ ಮುಗಿಯಿತು. ಅದು ಕಬ್ಬಿಣದ ಸಾರ್ಡರ್‌ ಮಾಡಿದಷ್ಟೇ ಗಟ್ಟಿಯಾಗಿ ಬಿಡುತ್ತದೆ. ಮಾತ್ರೆ ನುಂಗುವ ಐದು ದಿನಗಳ ಕಾಲ ಆಹಾರ ಸೇವನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೇಕೆ ಹಾಲು ಅಥವಾ ದೇಶಿ ಆಕಳ ಹಾಲಿನಲ್ಲಿ ಮಾತ್ರವೇ ಈ ಮಾತ್ರೆಗಳನ್ನು ನುಂಗಬೇಕು.

ದೇಶಿಜ್ಞಾನದಿಂದ ಸಿದ್ಧಗೊಂಡ ಮಾತ್ರೆ: ಈ ಕುಟುಂಬದಲ್ಲಿ ಯಾರೂ ಕೂಡ ವೈದ್ಯಶಾಸ್ತ್ರ ಅಥವಾ ಆಯುರ್ವೇದ ಶಾಸ್ತ್ರಗಳನ್ನು ಅಧ್ಯಯನ ಮಾಡಿಲ್ಲ. ಶತಮಾನಗಳ ಹಿಂದೇ ಈ ಕುಟುಂಬದ ಯಜಮಾನರೊಬ್ಬರು ಸ್ವಯಂ ಪ್ರಯೋಗಗಳನ್ನು ಮಾಡುತ್ತ ಶೋಧಿಸಿದ ಔಷಧಿ ಇದು. ಕೂಡರಕನ ಬಳ್ಳಿ ಎಂದು ಹಳ್ಳಿಗರಿಂದ ಕರೆಯಲ್ಪಡುವ ವಿಶಿಷ್ಟ ಬಗೆಯ ವನಸ್ಪತಿಯೊಂದು ಲಾಳಗಟ್ಟಿ ಸುತ್ತಲಿನ ಕಾಡಿನ ಪ್ರದೇಶದಲ್ಲಿ ಲಭ್ಯವಿದೆ. ಈ ಬಳ್ಳಿಯನ್ನು ಎರಡು ತುಂಡು ಮಾಡಿ ಒಗೆದರೂ ಆ ತುಂಡುಗಳು ಮರಳಿ ಪರಸ್ಪರ ಸೇರಿಕೊಳ್ಳುವ ಗುಣ ಹೊಂದಿದೆ ಎನ್ನಲಾಗಿದೆ. ಇದೇ ಬಳ್ಳಿಯನ್ನು ಬಳಸಿಕೊಂಡು ಇದಕ್ಕೆ ಇತರೆ ವನಸ್ಪತಿಗಳನ್ನು ಸಮ ಮಿಶ್ರಣ ಮಾಡಿ ಮಾತ್ರೆ ಸಿದ್ಧಗೊಳಿಸುತ್ತಾರೆ ಎನ್ನಲಾಗಿದೆ. ಅಪ್ಪಟ ದೇಶಿ ಔಷಧಿ ಇದಾಗಿದ್ದು, ಇದರ ಸೇವನೆಯಿಂದ ಯಾವುದೇ ರೀತಿಯ ಬೇರೆ ದುಷ್ಪರಿಣಾಮಗಳು ಇಲ್ಲ. ಹೀಗಾಗಿ ದೊಡ್ಡ ದೊಡ್ಡ ಶ್ರೀಮಂತರು ಸಹ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬಂದು ಲಾಳಗಟ್ಟಿ ಔಷಧಿ ಪಡೆದು ಹೋಗುತ್ತಿದ್ದಾರೆ.

ದೇಶಿಜ್ಞಾನ ಪರಂಪರೆ ಕೊಂಡಿ: ಹೆಚ್ಚು ಕಡಿಮೆ ಈವರೆಗೂ ಲಕ್ಷಕ್ಕೂ ಅಧಿಕ ಜನರಿಗೆ ಗೌಡರ ಕುಟುಂಬ ಈ ವನಸ್ಪತಿ ಔಷಧಿ ಕೊಟ್ಟಿರಬೇಕು. ಆ ಪೈಕಿ ಶೇ.100ಕ್ಕೆ ನೂರರಷ್ಟು ಜನರು ಎಲುಬು ಬಾಧೆಗಳಿಂದ ಮುಕ್ತಿ ಹೊಂದಿ ಗುಣಮುಖರಾಗಿದ್ದಾರೆ. ಇದೀಗ ಆನಂದಗೌಡರ ನಂತರ ಅವರ ತಲೆಮಾರಿನ ಹೊಸ ಪೀಳಿಗೆಗೂ ಮನೆಯ ಹಿರಿಯರು ಈ ಔಷಧಿ ಸಿದ್ಧಗೊಳಿಸುವ ವಿಧಾನ ತಿಳಿಸಿ ಕೊಡಲಾಗಿದೆ. ಅಷ್ಟೇಯಲ್ಲ, ಇದೇ ಕುಟುಂಬದ ಇನ್ನೊಂದು ಕವಲು ಧರ್ಮಗೌಡ ಪಾಟೀಲ ಮತ್ತು ಅವರ ಮಕ್ಕಳು, ಮೊಮ್ಮಕ್ಕಳು ಕೂಡ ಇದೇ ಔಷಧಿಯನ್ನು ಸಿದ್ಧಗೊಳಿಸುವ ಸೂತ್ರ ಕಲಿತಿದ್ದು ಅವರು ಕೂಡ ಜನರಿಗೆ ಉಚಿತವಾಗಿ ಔಷಧಿ ನೀಡುತ್ತಾರೆ.

Advertisement

ಗೌಡರ ಕುಟುಂಬದಿಂದ ಸಮಾಜ ಸೇವೆ

ಶತಮಾನಗಳಿಂದಲೂ ಲಾಳಗಟ್ಟಿ ಗೌಡರ ಕುಟುಂಬ ಈ ಔಷಧಿಯನ್ನು ಜನರಿಗೆ ನೀಡುತ್ತ ಬಂದಿದೆ. ಈ ವರೆಗೂ ಸಾವಿರ ಸಾವಿರ ಜನರು ಈ ಮಾತ್ರೆ ಪಡೆದು ಗುಣಮುಖರಾಗಿದ್ದಾರೆ. ಕೈ,ಕಾಲು ಮುರಿದವರು, ಒಟ್ಟಾರೆ ದೇಹದ ಯಾವುದೇ ಭಾಗದಲ್ಲಿ ಮುರಿದ ಎಲುವುಗಳನ್ನು ಅತೀ ಶೀಘ್ರವೇ ಬೆಸೆದು ಹಾಕುವ ಈ ವನಸ್ಪತಿ ಔಷಧಿ ನೀಡುವುದಕ್ಕೆ ಪರ್ಯಾಯವಾಗಿ ಹೆಚ್ಚಿನ ಹಣವನ್ನು ಈ ಕುಟುಂಬ ಪಡೆಯುವುದಿಲ್ಲ. ಟೆಂಗಿನಕಾಯಿ, ಚುರುಮರಿ, ಎಲೆ ಅಡಿಕೆ ತಂದರೆ ಸಾಕು. ಇದೀಗ ಗೌಡರ ಕುಟುಂಬದ ಆನಂದಗೌಡ ಪಾಟೀಲರು ಈ ಔಷಧಿ ನೀಡುತ್ತಿದ್ದಾರೆ. ಕೈ,ಕಾಲು ಮುರಿಯುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಸಾವಿರಾರು ರೂ.ಹಣ ಪೀಕುತ್ತಿರುವ ಇಂದಿನ ದಿನಗಳಲ್ಲಿಯೂ ತಮ್ಮ ಕುಟುಂಬವೇ ಶೋಧಿಸಿದ ಔಷಧಿಯೊಂದನ್ನು ಸಮಾಜ ಸೇವೆ ಎಂಬಂತೆ ನೀಡುತ್ತಿರುವ ಈ ಕುಟುಂಬದ ಬಗ್ಗೆ ಈಗಲೂ ಸುತ್ತಲಿನ ಹಳ್ಳಿಗಳಲ್ಲಿ ಅಪಾರ ಗೌರವವಿದೆ.

ನಮ್ಮ ತಾತ, ಮುತ್ತಾತರ ಕಾಲದಿಂದಲೂ ನಮ್ಮ ಮನೆಯಲ್ಲಿ ಎಲುವು ಬೆಸೆಯುವ ಔಷಧಿ ಸಿದ್ಧಗೊಳಿಸಿ ನೀಡುತ್ತ ಬಂದಿದ್ದೇವೆ. ಇದನ್ನು ನನ್ನ ತಂದೆ ನನಗೆ ಕಲಿಸಿದ್ದಾರೆ. ನಾನು ನನ್ನ ಮಕ್ಕಳಿಗೆ ಕಲಿಸಿದ್ದೇನೆ. ಇದು ನೊಂದವರ ಕಣ್ಣೀರೊರೆಸುವ ಸೇವೆಯಷ್ಟೆ. –ಆನಂದಗೌಡ ಪಾಟೀಲ, ಎಲುಬು ಬೆಸುಗೆ ಔಷಧಿ ನೀಡುವ ನಾಟಿ ವೈದ್ಯರು

ಕಾರು ಅಪಘಾತದಲ್ಲಿ ನನ್ನ ಬಲಕಾಲಿನ ತೊಡೆಯ ಎಲುಬು ಎರಡು ತುಂಡಾಗಿತ್ತು. ವೈದ್ಯರು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಅದು ಅಷ್ಟಾಗಿ ಗಟ್ಟಿಯಾಗಿರಲಿಲ್ಲ. ಲಾಳಗಟ್ಟಿ ಔಷಧಿ ಸೇವಿಸಿದ ಒಂದೇ ವಾರದಲ್ಲಿ ಗಟ್ಟಿಯಾಯಿತು. –ಚೆನ್ನಬಸಪ್ಪ ಅರಳಿಹೊಂಡ, ಕಲಘಟಗಿ ನಿವಾಸಿ

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next