ಧಾರವಾಡ: ಉದಾರೀಕರಣ ನೀತಿಯಿಂದ ದೇಶವು ಅಭಿವೃದ್ಧಿ ವಿಚಾರದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅವು ಆರ್ಥಿಕತೆಗೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಸಿಎಂಡಿಆರ್ ಗೌರವ ಪ್ರಾಧ್ಯಾಪಕ ಪ್ರೊ| ಜಿ.ಕೆ. ಕಡೆಕೊಡಿ ಹೇಳಿದರು. ಕವಿವಿ ಅರ್ಥಶಾಸ್ತ್ರ ವಿಭಾಗ ಕೆನರಾ ಬ್ಯಾಂಕ್ ಅಧ್ಯಯನ ಪೀಠದಡಿ ಹಮ್ಮಿಕೊಂಡಿದ್ದ ‘ಭಾರತದ ಪ್ರಚಲಿತ ಆರ್ಥಿಕ ಸವಾಲುಗಳು ಮತ್ತು ಪರಿಹಾರೋಪಾಯಗಳು’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪೆಟ್ರೋಲಿಯಂ ಉತ್ಪನ್ನಗಳು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಅವುಗಳಿಲ್ಲದೆ ಯಾವುದೇ ಆರ್ಥಿಕ ಚಟುವಟಿಕೆಗಳು ಜರುಗುವುದಿಲ್ಲ. ಇಂಧನದ ಬೇಡಿಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಇಂಧನ ಮಿತವ್ಯಯಕ್ಕೆ ಆದ್ಯತೆ ನೀಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆರ್.ಆರ್. ಬಿರಾದಾರ ಮಾತನಾಡಿ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿ ಸಾಧಿಸುವ ಹಿನ್ನೆಲೆಯಲ್ಲಿ ಅನೇಕ ಸವಾಲುಗಳು ಅನಿರೀಕ್ಷಿತವಾಗಿ ಉದ್ಭವಿಸುತ್ತವೆ. ಆದರೆ ಸರ್ಕಾರದ ಸೂಕ್ತ ನೀತಿಯ ಮೂಲಕ ಅವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿರುವುದು ಅವಶ್ಯ ಎಂದು ಹೇಳಿದರು.
ಡಾ| ಎಸ್.ಟಿ. ಬಾಗಲಕೋಟಿ, ಡಾ| ಶಿವಪ್ರಸಾದ ಎಚ್.ಎನ್. ಮಾತನಾಡಿದರು. ಡಾ| ಪಿ.ಎಂ. ಹೊನಕೇರಿ, ಡಾ| ಎಚ್.ಎಚ್. ಉಳಿವೆಪ್ಪ, ಡಾ| ಎಚ್. ಎಚ್. ಗಡವಾಲೆ, ಡಾ| ಎಸ್.ವಿ. ಹನಗೊಂಡಿಮಠ, ಡಾ| ನೀಲಾ ಸಿ. ಪಾಟೀಲ ಇನ್ನಿತರರಿದ್ದರು. ಅರ್ಥಶಾಸ್ತ್ರ ಸೊಸೈಟಿಯ ಮುಖ್ಯಸ್ಥರಾದ ಡಾ| ಎನ್. ಎಸ್. ಮುಗದುರ ಸ್ವಾಗತಿಸಿದರು. ಬಸಮ್ಮ ಹಿರೇಮಠ ಪ್ರಾರ್ಥಿಸಿದರು. ತೇಜಸ್ವಿನಿ ಅರಳಿಕಟ್ಟಿ ವಂದಿಸಿದರು. ರಾಘವೇಂದ್ರ ಜಿಗಲೂರ ನಿರೂಪಿಸಿದರು.